ಪಿಯುಸಿ ಮುಗಿಸಿ, ಪತ್ರಿಕೋದ್ಯಮ ವಿಷಯವನ್ನು ಅವಚಿಕೊಂಡು ಪದವಿಯ ಮೆಟ್ಟಿಲು ಹತ್ತಿ, ಅದೇ ಪತ್ರಿಕೋದ್ಯಮವನ್ನು ಬಗಲಿಗೇರಿಸಿಕೊಂಡು ಸ್ನಾತಕೋತ್ತರ ಮೆಟ್ಟಿಲು ಹತ್ತಿದ್ದೆ. ಕನಸುಗಣ್ಣಿಗೆ ಕಾಣಿಸುತ್ತಿದ್ದುದು ಬರಿಯ ಬರವಣಿಗೆ.., ಬರೆಯಬೇಕೆನ್ನುವ ಹುಮ್ಮಸ್ಸಿನಲ್ಲಿ ಬರೆದ ಲೇಖನಗಳು, ಹನಿಯಾಗಿ ಸೇರುತ್ತಿದ್ದ ಹನಿಗವನಗಳು.. ಹೀಗೆ ಬರೆದೂ ಬರೆದೂ ಬರಹಗಾರ್ತಿಯಾಗಬೇಕೆನ್ನುವ ಬೆಟ್ಟದಷ್ಟು ಕನಸುಗಳನ್ನು ಹೊತ್ತು ಉದ್ಯೋಗಕ್ಕೆ ಕಾಲಿಟ್ಟಿದ್ದೆ ಮಾಧ್ಯಮ ಕ್ಷೇತ್ರಕ್ಕೆ..
ಮೊದಲಿಗೆ ಕ್ರೀಡಾ ಮಾಸಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದು, ನಂತರದಲ್ಲಿ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಕಲಿಕಾ ಪತ್ರಕರ್ತೆಯಾಗಿ, ಬರವಣಿಗೆಯನ್ನು ಸಾಕಷ್ಟು ತಿದ್ದಿಕೊಂಡು, ನನಗೇ ಅಚ್ಚರಿಯಾಗುವಂತೆ ಬರೆಯಲಾರಂಭಿಸಿದ್ದೆ..ಆಕಸ್ಮಿಕವಾಗಿ ಪತ್ರಿಕೋದ್ಯಮ ಉಪನ್ಯಾಸಕಿಯಾದರೂ, ಬರವಣಿಗೆಗೆ ಸಮಯ ಸಾಲದೇ ಒಳಗೊಳಗೇ ಕೊರಗುತ್ತಿದ್ದೆ. ಮತ್ತೆ ಬರೆಯುವ ಕನಸು ಹೊತ್ತು ಕರಾವಳಿಯ ತೀರದಿಂದ ಮಹಾನಗರ ಬೆಂಗಳೂರಿಗೆ ಆಗಮಿಸಿದ್ದೆ.. ಮತ್ತೆ ಕೆಲಸದ ಹುಡುಕಾಟ.. ಸಿಕ್ಕಿದ್ದು ಒಂದು ವಾಹಿನಿಯಲ್ಲಿ.. ಆಸಕ್ತಿ ಇದ್ದಿದ್ದು ಬರವಣಿಗೆಯಲ್ಲಿ..!
ಒಂದು ವರ್ಷ..ಕಳೆದಿದೆ.. ಹೌದು ಒಂದು ವರ್ಷದಲ್ಲಿ ಮನಸ್ಸಿಗೆ ಇಷ್ಟವಾಗುವಂತೆ, ಸಮಾಧಾನವಾಗುವಂತೆ ಬರೆದಿದ್ದು ಒಂದು ಬರವಣಿಗೆಯೂ ಕಾಣುತ್ತಿಲ್ಲ.. ಮೂಲೆಗುಂಪಾಗಿದೆ ಯೋಚನೆಗಳು..ಪದಗಳು.. ನೋಯುತ್ತಿದೆ ಮನಸು...
ಒಮ್ಮೊಮ್ಮೆ ಅಳುತ್ತವೆ ನನ್ನೊಳಗೆ ಬಂಧಿಯಾಗಿರುವ ಪದಗಳು, ಹೊರಬರಲಾಗದೆ.. ಬರೆಯಬೇಕೆನಿಸುತ್ತಿದೆ.. ಬಾಲ್ಯದ ದಿನಗಳ ಬಗ್ಗೆ.. ಮರದ ಸೇತುವೆಯಿಂದ ಹಲಸಿನಹಣ್ಣು ಎತ್ತಿ ಹಾಕಿ ಹಲಸಿನ ಹಣ್ಣು ಸವಿದಿದ್ದು, ಸೀತಾಫಲದ ಮರದಿಂದ ಬಿದ್ದು ಕಾಲಿನ ಮಾಂಸ ಕಿತ್ತು ಬಂದಿದ್ದು.. ಅಮ್ಮ ಕೋಲು ಹಿಡಿದು ಅಟ್ಟಾಡಿಸಿಕೊಂಡು ಬಂದ ಕಥೆ, ಮೊದಲ ಬಾರಿ ಕುತೂಹಲದಿಂದ ನೋಡಿದ ಕುರ್ಚಿಯ ಮೇಲೆ ಕೂರಿಸಿದ ಯಾರದೋ ಶವ.. ಹೊಸ ವರ್ಷದ ಆರಂಭಕ್ಕೆ ಹಿಂದಿನ ದಿನ ನಮ್ಮೂರ ಬಾರ್ ಮುಂದೆ ಕೂರಿಸಿದ ತಾತನ ಗೊಂಬೆಯ ಕೈಯ ಸ್ಪರ್ಶ.. ಬಾಲ್ಯದ ಆಟ ತುಂಟಾಟಗಳು.. ಮನೆಯಲ್ಲಿ ಮುದ್ದಾಗಿ ಸಾಕಿದ ಗಿಳಿರಾಮನ ದುರಂತ ಸಾವಿನ ಬಗ್ಗೆ.. ಹೀಗೆ ಬರೆಯಬೇಕೆನ್ನುತ್ತವೆ ಮನಸು.. ಬರೆಯಲಾಗುತ್ತಿಲ್ಲ.. ಪದಗಳೇ ಹೊಳೆಯುತ್ತಿಲ್ಲ..
ಹಿಂಬದಿಯ ಸವಾರಳಾಗಿ ಇನಿಯನೊಂದಿಗೆ ಹೋಗುವಾಗ ಜೋರಾಗಿ ಮಳೆಸುರಿಯುವಾಗ, ಬರಹವನು ನೆನೆದೊಮ್ಮೆ ಬಿಕ್ಕಿ ಅಳುತ್ತೇನೆ.. ಮಳೆಯೊಂದಿಗೆ ಕಣ್ಣ ಹನಿಯೂ ಸೇರಿ…ಕೆನ್ನೆಯಿಂದ ಇಳಿಯುತ್ತವೆ.. ಮನಸು ಹಗುರಾಗುತ್ತದೆ.. ನಾಳೆಯಿಂದ ಮತ್ತೆ ಏನಾದರೊಂದು ಬರೆಯಬೇಕು ಎಂದುಕೊಳ್ಳುತ್ತೇನೆ.. ಮನಸಿಗೆ ನೆಮ್ಮದಿಯಾಗುವಂತೆ.. ತೃಪ್ತಿಯಾಗುವಂತೆ ಬರೆಯಬೇಕು.. ನನ್ನೊಳಗಿನ ಭಾವನೆಗಳು ಅಕ್ಷರಗಳ ರೂಪ ಧರಿಸಬೇಕು.. ಮತ್ತೆ ಬರೆಯಬೇಕು.. ಬರೆಯುತ್ತಿದ್ದೇನೆ..

ಬರೆಯಬೇಕು ಬರೆಯಬೇಕು .... ಬರವಣಿಗೆಯೆ ನಮ್ಮಾಸ್ತಿ , ಈ ಬರವಣಿಗೆ ಇಲ್ಲದಿದ್ದರೆ ನಮ್ಮ ಅಸ್ತಿಯನ್ನು ನಾವೇ ಕೈಯ್ಯಾರೆ ಸಂಗಮದಲ್ಲಿ ಬಿಟ್ಟಂತೆ... ಬರವಣಿಗೆಯ ಹುಚ್ಚು ಹತ್ತಿದವನು ಬರೆಯುತ್ತಲೇ ಇರುತ್ತಾನೆ ಅವನಿಗೆ ಊಟ ನಿದ್ದೆಗಳ ಪರಿವಿಲ್ಲ ನಿಮಗೂ ಅಂತೆಯೇ ಆಗುತ್ತಿದೆ... ನಮ್ಮ ಹತಾಶೆಗಳು ಕಣ್ಣ ಹನಿಯಾಗಿ , ಕರವಸ್ತ್ರ ಸೇರಿದಂತೆ ನಮ್ಮ ಲೇಖನಿಯ ಶಾಯಿ ಕಾಗದ ಸೇರಬೇಕೆನ್ನುವುದೇ ನಮ್ಮ ತವಕವಲ್ಲವೆ??
ReplyDeleteTumba Chennagide Ella barahagalu..
ReplyDelete