Monday 31 December 2018

ಅರಿವಿನ ಮೊದಲ ಗುರು ನಮ್ಮಜ್ಜ..

ಜಗವೆಲ್ಲ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ನಮ್ಮ ಕುಟುಂಬಕ್ಕೆ ಮಾತ್ರ ಹೊಸ ವರ್ಷ ಆಘಾತ ತಂದಿತ್ತು. ಅದೇ ನಮ್ಮೆಲ್ಲರ ಪ್ರೀತಿಯ ಅಜ್ಜನ ಮರಣ. ಜನವರಿಗೆ 2ಕ್ಕೆ ಅಜ್ಜ ನಮ್ಮನ್ನಗಲಿ 2ವರ್ಷ.. ನಮ್ಮೂರು, ಕರಾವಳಿ, ಮಂಗಳೂರು, ಬೆಂಗಳೂರಿನ ಬಗ್ಗೆ ಬರೆದ ನನಗೆ ಅಜ್ಜನ ಬಗ್ಗೆ ಬರೆಯದೇ ಹೋದರೆ ಆದೀತೇ. ನನ್ನಲ್ಲಿ ಬರವಣಿಗೆ, ಓದಿನ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿದವರೆ ನಮ್ಮಜ್ಜ ಎಂದರೆ ತಪ್ಪಾಗಲಾರದು..

ಮೊದಲನೇಯ ಪ್ರೀತಿಯ ಮೊಮ್ಮಗಳಾಗಿದ್ದ ನನಗೆ ಅಜ್ಜ ಪೇಪರ್‍ನಲ್ಲಿ ಕಟ್ಟಿಸಿಕೊಂಡು ತರುತ್ತಿದ್ದ ಕಡಲೇ, ಚಾಕಲೇಟುಗಳ ಜೊತೆಗೆ ಸಣ್ಣ ಪೇಪರ್‍ನ ತುಂಡುಗಳು ಓದುವ ಗೀಳು ಹತ್ತಿಸಿತ್ತು.  ಎರಡನೇ ಕ್ಲಾಸ್ ಓದಿದ್ದ ತಾತನಿಗೆ ಡೈರಿ ಬರೆಯುವುದೆಂದರೆ ಬಹಳ ಅಚ್ಚುಮೆಚ್ಚು.. ಪ್ರತಿದಿನ ನಡೆದ ಘಟನೆಗಳನ್ನ ಅಕ್ಷರಗಳ ರೂಪದಲ್ಲಿ ಜೋಡಿಸುತ್ತಿದ್ದರು. ತಮಾಷೆಯೆಂದರೆ ಆ ದಿನ ಮಾಡಿ ಕೊಟ್ಟ ತಿಂಡಿಯನ್ನು ಕೂಡ ನನಗಿವತ್ತು ಇಷ್ಟೇ ದೋಸೆ ಹಾಕಿಕೊಟ್ಟಿದ್ದು ಎಂದೂ ತಮ್ಮ ಕೋಪವನ್ನೂ ಅಕ್ಷರಗಳ ಮೂಲಕ ಹೊರಹಾಕುತ್ತಿದ್ದರು ಅಜ್ಜ. ನಾನು, ಚಿಕ್ಕಮಾವ ಡೈರಿಯನ್ನು ಕದ್ದು ಓದಿ ನಕ್ಕಿದ್ದೂ ಇದೆ. ಅಸಹನೆ, ಕೋಪ, ಯೋಚನೆಗಳನ್ನು ಡೈರಿಯ ಮೂಲಕ ಬರೆದಿಡುತ್ತಿದ್ದ ಅವರ ದಿನಚರಿಯನ್ನು ಇಂದಿನ ಕಾಲದಲ್ಲಿ ಪಾಲಿಸುವವರು ತುಂಬಾ ವಿರಳ ಯಾಕೆಂದರೆ, ಕೆಲಸ ಮುಗಿಸಿ ಬರೋವಾಗಲೇ ತಡರಾತ್ರಿ, ಇನ್ನು ಮಲಗುವಾಗ ಎಲ್ಲರ ವಾಟ್ಸ್ಯಾಪ್ ಸ್ಟೇಟಸ್‍ಗಳನ್ನು ನೋಡುವಾಗ ನಿದ್ದೆ ಆವರಿಸುತ್ತದೆ. ಅಲ್ಲವೇ..?
ಓದಿನ ವಿಚಾರಕ್ಕೆ ಬಂದರೆ ಕಾದಂಬರಿ ಓದುವ ಹುಚ್ಚು ನಮ್ಮಜ್ಜನಿಗೆ.. ಚಿಕ್ಕ ಮಾವ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಲೈಬ್ರೆರಿಯಿಂದ ತರುತ್ತಿದ್ದ ಕಾದಂಬರಿಗಳಿಗೆ ನಮ್ಮೊಳಗೇ ಎಷ್ಟೋ ಜಗಳಗಳಾಗುತ್ತಿದ್ದವು. ಆ ಕಾಲದಲ್ಲಿ ಕರೆಂಟೂ ಇರಲಿಲ್ಲ. ಚಿಮಿಣಿ ದೀಪದ ಬೆಳಕಿನಲ್ಲಿ ಮರದ ಚೇರ್‍ನಲ್ಲಿ, ಟೇಬಲ್ ಮೇಲೆ ಕಾದಂಬರಿಯನ್ನಿಟ್ಟು, ಕಪ್ಪು ಕನ್ನಡಕ ಹಾಕಿ ಪುಸ್ತಕದೊಳಗೆ ಮುಳುಗಿ ಹೋಗುತ್ತಿದ್ದ ಅಜ್ಜನಿಗೆ ಸಮಯದ ಅರಿವೇ ಇರ್ತಾ ಇರ್ಲಿಲ್ಲ.. ಕೆಲವೊಮ್ಮೆ ಮಧ್ಯರಾತ್ರಿ ಎರಡು, ಮೂರು ಗಂಟೆಯೂ ಆಗುತ್ತಿದ್ದದ್ದುಂಟು. ಈಗೀಗ ನಮ್ಗೆ ಓದಲೂ ಟೈಮಿಲ್ಲ, ಲೈಬ್ರೆರಿಯ ಹಾದಿ ಗೊತ್ತಿಲ್ಲ. ಕಾಲೇಜಿನ ದಿನಗಳಲ್ಲಿ ಶಪಥ ಮಾಡಿದ್ದುಂಟು ಜಾಬ್ ಸಿಕ್ಕಮೇಲೆ ಪ್ರತಿ ತಿಂಗಳ ಸಂಬಳದಲ್ಲೂ ಒಂದೊಂದು ಪುಸ್ತಕ ತಗೋಬೇಕು, ಮನೆಯನ್ನೇ ಲೈಬ್ರರಿ ಮಾಡಬೇಕೆನ್ನುವ ಕನಸು. ಎರಡು ವರ್ಷ ಪಾಲಿಸಿದ್ದೆನಷ್ಟೇ. ಕೊಂಡ ಪುಸ್ತಕಗಳನ್ನು ಆಸಕ್ತ ಓದುಗರಿಗೆ ಕೊಟ್ಟು ಎಷ್ಟೋ ಪುಸ್ತಕ ಇಂದಿಗೂ ಹಿಂತಿರುಗಿ ಬಂದಿಲ್ಲ..ಎನ್ನುವ ಸಂಕಟ ಹೊಟ್ಟೆಯೊಳಗೆ ಇನ್ನೂ ಇದೆ.
ಇನ್ನೊಂದು ವಿಷಯ ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಮಲೆನಾಡಿನವರು, ಅಜ್ಜಿ ಹೇಳಿದ ಹಾಗೆ ಶಿವಮೊಗ್ಗದಲ್ಲಿ ಅಜ್ಜನ ಅಮ್ಮ ಇದ್ದಿದ್ದಂತೆ. ಅಜ್ಜನ ಅಪ್ಪ ಅಂದರೆ ನನ್ನ ಮುತ್ತಜ್ಜ ಎರಡನೇ ಮದುವೆಯಾಗಿದ್ದರಂತೆ.. ಅಜ್ಜಿಯನ್ನು ಮದುವೆಯಾದ ಬಳಿಕ ಮರಳಿ ಘಟ್ಟದ ಕೆಳಗೆ ಬಂದ ನಮ್ಮಜ್ಜ ಬೆಳ್ತಂಗಡಿಯ ಗೇರುಕಟ್ಟೆಯ ಶಾಂತಿಕೊಡಿಯಲ್ಲಿ ತಮ್ಮ ಸುದೀರ್ಘ ಜೀವನವನ್ನು ಕಳೆದಿದ್ದಾರೆ. ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಕೃಷಿಕ ಒಂದು ರೀತಿಯಲ್ಲಿ ಅಜಾನುಬಾಹು. ಮುಂಜಾನೆ ಅವರನ್ನು ಕಾಣುತ್ತಿದ್ದುದೇ ಒಂದು ಕೈಯಲ್ಲಿ ಹಾರೆ ಅಥವಾ ಗುದ್ದಲಿ, ಬಿಳಿ ಪಂಚೆಯಲ್ಲಿ. . ಸೂರ್ಯ ಎದ್ದು ಸ್ವಲ್ಪ ದೂರ ಹೋದ ನಂತರವೇ ತೋಟದಿಂದ ಬಂದು ಕೈಕಾಲು ತೊಳೆದು ಅವರದೇ ದೊಡ್ಡದಾದ ಸ್ಟೀಲ್ ಲೋಟದಲ್ಲಿ ಚಹಾ, ತಿಂಡಿ ತಂದಿಟ್ಟು, ಅದನ್ನು ತಿಂದರೆಂದರೆ ಬೆಳಗ್ಗಿನ ಕೆಲಸ ಅರ್ಧ ಆಗಿಹೋಗುತ್ತಿತ್ತು, ಆದಿನ ಕೊಯ್ದ ತರಕಾರಿಯನ್ನು ಒಂದು ಚೀಲದೊಳಗೆ ಹಾಕಿ ಬಿಳಿ ಪಂಚೆ, ಬಿಳಿ ಶರಟು ಹಾಕಿ ಅಂಗಡಿಗೆ ಹೊರಟರೆಂದರೆ ಮರಳಿ ಬರುವಾಗ ಮಕ್ಕಳಿಗೆಂದೇ ಕಡಲೇ ಅಥವಾ ಚಾಕಲೇಟು ಮಾಮೂಲಿ. ತರದೇ ಹೋದರೆ, ಮರದ ಟೇಬಲ್‍ನ ಕಪಾಟಿನೊಳಗೆ ಕೀ ಹಾಕಿದರೆಂದರೆ ಚಾಕಲೇಟು ಅದರಲ್ಲಿ ಇದ್ದೇ ಇರುತ್ತಿತ್ತು.
ಸ್ವಲ್ಪ ದೊಡ್ಡವರಾದ ಮೇಲೆ ನಮ್ಮನ್ನೂ ಅಲಸಂದೆ ಕೀಳಲು, ನೀರು ಹಾಕಲು ಕರೆದುಕೊಂಡು ಹೋಗ್ತಾ ಇದ್ದ ನಮ್ಮಜ್ಜನಿಗೆ ಮನಸ್ಸಲ್ಲೇ ಎಷ್ಟು ಬೈಯುತ್ತಿದ್ದೆನೋ ಗೊತ್ತಿಲ್ಲ, ಹೊಟ್ಟೆಯೊಳಗೆ ಹುಳ ಚುರು ಚುರು ಎನ್ನುತ್ತಿದ್ದಂತೆ ಆಯ್ತಾ.. ಆಯ್ತಾ, ಸಾಕಾ.. ಅಜ್ಜಾ ಎನ್ನುವ ಮಾತುಗಳು ಅಳುಮುಖದೊಂದಿಗೇ ಬರುತ್ತಿತ್ತು. ಅಜ್ಜ ಸಾಕು ಎಂದರೆ ಸಾಕು ಅಬ್ಬಾ ಎಂದು ಮನೆಗೆ ಓಡುತ್ತಿದ್ದವು. ಬೆಳಗ್ಗೆಯಿಂದ ಸೂರ್ಯ ಮುಳುಗಿ ಇನ್ನೇನು ಕಾಣುತ್ತಿಲ್ಲ ಕತ್ತಲು ಅನ್ನೋವರೆಗೂ ತೋಟದಲ್ಲೇ ಕಳೆಯುತ್ತಿದ್ದರು ನಮ್ಮಜ್ಜ.
ನಮ್ಮ ಅಮ್ಮ, ಚಿಕ್ಕಮ್ಮ, ಮಾವಂದಿರೆಲ್ಲಾ ಚಿಕ್ಕವರಿರಬೇಕಾದರೆ ತುಂಬಾ ಜೋರಿದ್ದರಂತೆ ಅಜ್ಜ. ಒಮ್ಮೆ ನಾನು ಪ್ರೈಮರಿಯಲ್ಲಿ ಓದುತ್ತಿದ್ದಾಗ ಗಣಿತ ಹೇಳಿಕೊಡುತ್ತಿದ್ದ ಚಿಕ್ಕಮ್ಮ ಸ್ಕೇಲ್‍ನಿಂದ ಹೊಡೆದಿದ್ದರು, ಆಕಾಶ ಭೂಮಿ ಒಂದಾಗುವಂತೆ ಅತ್ತಿದ್ದನ್ನು ನೋಡಿ ನಮ್ಮಜ್ಜ ಇನ್ನುಮೇಲೆ ಯಾರಾದ್ರೂ ಹೊಡೆದ್ರೆ ಜಾಗೃತೆ ಎಂದು ಬೈದಿದ್ದರು. ಅಂದೇ ಕೊನೆ ಇದುವರೆಗೂ ಯಾರು ನನ್ನ ಹೊಡೆದದ್ದಿಲ್ಲ. ಅಷ್ಟು ಮುದ್ದಿನಿಂದ ನೋಡಿಕೊಂಡಿದ್ದರು ಮೊಮ್ಮಗಳನ್ನು. ವಯಸ್ಸಾಗುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಕೋಪ, ತಾಪಗಳೆಲ್ಲ ಕಡಿಮೆಯಾಗುತ್ತಿತ್ತು. ಒಂದೊಂದೇ ಹಲ್ಲು ಬೀಳುತ್ತಿತ್ತು. ಅಜ್ಜ ಪ್ರೀತಿಯಿಂದ ನನ್ನನ್ನು ಬಂಗಾರು ಎಂದು ಕರೀತಿದ್ರು. ಕಾಲೇಜು ಓದುತ್ತಿರುವಾಗ ಒಮ್ಮೆ ಬಸ್ಸಿಳಿದು ರೋಡು ದಾಟುತ್ತಿದ್ದೆ, ನಮ್ಮ ಬಸ್‍ಸ್ಟಾಪ್‍ನಲ್ಲೊಂದು ಪುಟ್ಟ ಅಂಗಡಿ, ಮೂರ್ನಲ್ಕು ಆಟೋ ರಿಕ್ಷಾ, ಸಂಜೆಯಾದರೆ ಮಾತುಕತೆಗೆ ಒಂದಷ್ಟು ಜನ ಸೇರಿರುತ್ತಿದ್ದರು. ಆ ಸಂಜೆ ನಮ್ಮ ಅಜ್ಜ ಅಲ್ಲಿದ್ದಿದ್ದು ನೋಡಿರಲಿಲ್ಲ, ಅವರೇ ನನ್ನನ್ನು ನೋಡಿ ಬಂಗರೂ ಎಂದು ಜೋರಾಗಿ ಕರೆದಿದ್ದರು, ಎಲ್ಲರಿಗೂ ಕೇಳಿಸಿತ್ತು.. ಆಮೇಲಿಂದ ಅಲ್ಲಿ ಎಲ್ಲರೂ ನನ್ನನ್ನು ಬಂಗರೂ ಎಂದೇ ಕರೆಯುತ್ತಾರೆ, ಈಗಲೂ ಕೂಡಾ.. ಅಜ್ಜ ಉಳಿಸಿಹೊದ ಹಸಿರಾದ ನೆನಪುಗಳು..
ವಯಸ್ಸಾದಂತೆ ವಯೋಸಹಜ ಖಾಯಿಲೆ ಆವರಿಸಿಬಿಟ್ಟಿತ್ತು.. ಹೃದಯದ ಸಮಸ್ಯೆ ಬೇರೆ, ಕೊನೆಗಾಲದಲ್ಲಿ ಡಯಾಬಿಟಿಸ್ ಕೂಡಾ ಕಿತ್ತು ತಿನ್ನಲು ಬಂದಿತ್ತು. ಒಂದು ಪಾಶ್ರ್ವ ಬಲವಿಲ್ಲದಂತಾಗಿತ್ತು. ಆದರೂ ಒಂದೇ ಕೈಯಲ್ಲಿ ಹಾರೆ, ಗುದ್ದಲಿ ಹಿಡಿದು ನಡೆಯುತ್ತಿದ್ದರು. ಸ್ವಲ್ಪ ಹಠವೂ ಜಾಸ್ತಿಯಾಗಿತ್ತು. ವಯಸ್ಸಾದಂತೆ ಮತ್ತೆ ಮಕ್ಕಳಂತಾಗುತ್ತಾರೆ ಎಂದು ಮಾವ ಹೇಳಿದ್ದ ನೆನಪು.. ನಮ್ಮಜ್ಜ ಸ್ವಲ್ಪ ಯಡಿಯೂರಪ್ಪನವರನ್ನು ಹೋಲುತ್ತಿದ್ದುದರಿಂದ ಯಡಿಯೂರಪ್ಪ ಎಂದು ಹೇಳಿ ನಗಿಸುತ್ತಿದ್ದೆವು, ಬೊಚ್ಚು ಬಾಯಲ್ಲಿ ಒಂದೇ ಹಲ್ಲು ಮಿನುಗುತ್ತಿತ್ತು ಕೂಡಾ. ಡಯಾಬಿಟೀಸ್ ಬಂದ ಮೇಲೆ ಎರಡು ಹೊತ್ತು ಚಪಾತಿ ಅಭ್ಯಾಸವಾಗಿಬಿಟ್ಟಿತ್ತು. ಅದೂ ನಾನು ಮಾಡುವ ಆಕಾರವಿರದ ಚಪಾತಿಯೆಂದರೆ ಸ್ವಲ್ಪ ಇಷ್ಟವೇ.. ಮಾವನೂ ನಾನು ಅಜ್ಜಿ ಮನೆಗೆ ಹೋದರೆ ಸಾಕು, ಅಜ್ಜನಿಗೆ ಇವತ್ತು ನೀನೇ ಚಪಾತಿ ಮಾಡು ಎಂದು ಅವರ ಕೆಲಸ ನನಗೇ ವರ್ಗಾಯಿಸುತ್ತಿದ್ದರು. ಪಾಶ್ರ್ವವಾಯು ಇದ್ದುದರಿಂದ ಕೈ ಕಾಲಿನ ಉಗುರುಗಳನ್ನೂ ಮೊಮ್ಮಕ್ಕಳೇ ಒಮ್ಮೊಮ್ಮೆ ತೆಗೆಯುತ್ತಿದ್ದೆವು. ಕೊನೆಗಾಲದಲ್ಲಿ ಮಗುವಿನಂತಾಗಿದ್ದರು ನಮ್ಮಜ್ಜ. ಅಂಗಡಿಗೆ ಹೋಗಲು ಕಾಲು ತಡವರಿಸುತ್ತಿದ್ದುದರಿಂದ ಮನೆಯಲ್ಲೇ ಚಡಪಡಿಸುತ್ತಿದ್ದರು ಪಾಪ.. ಅಜ್ಜಿ, ಮಾವನ ಕಣ್ಣು ತಪ್ಪಿಸಿ ಬೀಡಿ ಸೇದುತ್ತಿದ್ದರು.
ಕದ್ದು ಬೀಡಿ ಸೇದಿ ತೆಂಗಿನಮರವನ್ನೇ ಸುಟ್ಟು ಹಾಕಿದ್ದರು..! ಅಂದು ನಡೆದಿದ್ದು ಇಷ್ಟೇ ಮನೆಯ ಕೆಳಗೆ ಶೆಡ್‍ನಲ್ಲಿ ಬೀಡಿ ಸೇದಲು ಹೋಗಿ, ಉಳಿದ ಬೀಡಿಯ ತುಂಡನ್ನು ಹೊರಗೆ ಎಸೆದಿದ್ದರು. ಮಟ ಮಟ ಮಧ್ಯಾಹ್ನ ಬೇರೆ ಬಿಸಿಲಿಗೆ ಕಾದ ಹುಲ್ಲಿಗೆ ಕಿಡಿ ಅಂಟಿಕೊಂಡು ಕೆಳಗೆ ಬಾಗಿದ್ದ ತೆಂಗಿನ ಗರಿಗೆ ಅಂಟಿಕೊಂಡ ಬೆಂಕಿ ತೆಂಗಿನ ಮರವನ್ನು ಏರಿತ್ತು. ಬಿಸಿಲಿಗೆ ಬೆಂಕಿ ಧಗಧಗನೇ ಉರಿದಿತ್ತು. ಈ ವಿಷಯ ನಮಗೆ ಗೊತ್ತಾಗಿದ್ದರೂ ಅಜ್ಜನನ್ನು ಕೇಳಲು ಹೋಗಿರಲಿಲ್ಲ. ಅಷ್ಟರಮಟ್ಟಿಗೆ ಮೂರನೇ ಮಾವ, ಅಜ್ಜಿ ಅಜ್ಜನನ್ನು ಮಗುವಿನಂತೆ ನೋಡಿಕೊಂಡಿದ್ದರು. ಮಕ್ಕಳು ಮೊಮ್ಮಕ್ಕಳು ಅಜ್ಜಿ ಮನೆಗೆ ಹೋದರೆ ಸಾಕು ಖುಷಿಯಿಂದ ಮಾತನಾಡುತ್ತಾ ಇರುತ್ತಿದ್ದರು ಅಜ್ಜ, ಮನೆಗೆ ಕಾಲಿಟ್ಟ ತಕ್ಷಣವೇ ಕೆನ್ನೆಗೊಂದು ಮುತ್ತು ಕೊಡುತ್ತಿದ್ದರು ನಮ್ಮಜ್ಜ, ಹೊರಡುತ್ತಿದ್ದಂತೆ ಕಣ್ಣು ಕೆಂಪಾಗಿ ಅಳು ಉಕ್ಕಿ ಬಂದು ಕಣ್ಣೀರು ಇಳಿಯುತ್ತಿತ್ತು.
ಆ ದಿನ ಕೂಡ ಹೀಗೆ ಆಗಿತ್ತು. ಕ್ರಿಸ್‍ಮಸ್ ರಜಕ್ಕೆಂದು ನಾನು ಸೇರಿ ಮೂರು ಮೊಮ್ಮಕ್ಕಳು ಅಜ್ಜಿ ಮನೆಯಲ್ಲಿದ್ದೆವು. ಹೊಸ ವರ್ಷದಂದು ಕಾಲೇಜಿಗೆ ರಜೆ ಇತ್ತು, ಆ ದಿನ ಅಜ್ಜನಿಗೆ ನಾನೇ ಚಪಾತಿ ಮಾಡಿಕೊಟ್ಟಿದ್ದೆ, ತಂಗಿಯೊಬ್ಬಳು ಅಜ್ಜನಿಗೆ ಚಹಾ ತಿಂಡಿ ಕೊಟ್ಟಿದ್ದಳು, ಹಿಂದಿನ ದಿನ ಕಾಲ್ಬೆರಳು, ಕೈಯ ಉಗುರು ಕೂಡಾ ತೆಗೆದಿದ್ದವು. ಆ ದಿನ ಮೂವರೂ ಅವರವರ ಮನೆಗೆ ಹೊರಟಿದ್ದೆವು ಜನವರಿ 1, ಅಂದೂ ತಾತ ಅತ್ತಿದ್ದರು.. ಭಾರವಾದ ಹೃದಯದಿಂದಲೇ ಹೊರಟಿದ್ದೆವು. ಆ ದಿನ ಮಾತ್ರೆಗಳು ಮುಗಿದಿದ್ದರೂ ಮಾವನಿಗೆ ಹೇಳಿರಲಿಲ್ಲ ಅಜ್ಜ, ಸ್ವಲ್ಪ ಎದೆನೋವು ಎಂದು ಹೇಳಿದಾಗಲೇ ಮಾವನಿಗೆ ಗೊತ್ತಾಗಿದ್ದು, ರಾತ್ರಿ ಊಟ ಮುಗಿಸಿ ಮಲಗಿದ್ದಂತೆ, ಮೂರು ಗಂಟೆ ರಾತ್ರಿಗೆ ಹೃದಯಾಘಾತವಾಗಿತ್ತು. ಮಾವ, ಅಜ್ಜಿ ಪಕ್ಕದಲ್ಲೇ ಕಳೆದಿದ್ದರು, ಫೋನ್ ಬಂದಿತ್ತು.. ಗಡಿಬಿಡಿಯಿಂದಲೇ ಧಾವಿಸಿದ್ದೆವು..ನಿಶ್ಚಲವಾಗಿ ಬಿಳಿಯ ಹೊದಿಕೆಯಲ್ಲಿ ಮಲಗಿದ್ದರು ನಮ್ಮಜ್ಜ..

Friday 30 November 2018

ನಾ ಕಂಡಂತೆ ಬೆಂಗಳೂರು..

ತುಂಬಾ ವರ್ಷಗಳ ಹಿಂದೆ ಕರಾವಳಿಯ ಹಳ್ಳಿಗಳಲ್ಲಿ ನಮ್ಮದೇ ಪ್ರಪಂಚದಲ್ಲಿ ಬೆಳೆಯುತ್ತಿದ್ದ ನಮಗೆ ಬೆಂಗಳೂರೆಂದರೆ ವಿಶೇಷ ಆಸಕ್ತಿ, ಒಬ್ಬರು ವಿದೇಶದಲ್ಲಿದ್ದಾರೆಂದರೆ ಅಚ್ಚರಿಯಿಲ್ಲ, ಅದೇ ಬೆಂಗಳೂರಲ್ಲಿ ಅಂದ್ರೆ, ಬೆಂಗಳೂರಾ..? ಎನ್ನುವ ಅಚ್ಚರಿ ತುಂಬಿದ ಕುತೂಹಲವೊಂದು ಇಣುಕುತ್ತಿತ್ತು.. ದೊಡ್ಡವರಾಗಿ ಬೆಳೆದಂತೆ ಮಾಧ್ಯಮಕ್ಷೇತ್ರದ ಆಕರ್ಷಣೆಗೆ ಒಳಗಾಗಿ ಬರಹವನ್ನು ಕೈಹಿಡಿದಾಗಿತ್ತು. ಸ್ನಾತಕೋತ್ತರವೂ ಮುಗಿದಿತ್ತು.. ಇನ್ನೇನು ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದ್ದ ಮಾಧ್ಯಮ ಕ್ಷೇತ್ರ ಕಣ್ಣಿಗೆ ಹಿತವಾಗಿತ್ತು. ಇಂಟರ್ನ್‍ಶಿಪ್ ನೆಪದೊಂದಿಗೆ ಬೆಂಗಳೂರಿನ ಬಸ್ ಹಿಡಿದಾಗಿತ್ತು..

ಮುಂಜಾನೆಯ ಚುಮು ಚುಮು ಚಳಿಯ ಅನುಭವವಾಗಿ, ಎದ್ದು ಕುಳಿತರೆ ಬೆಂಗಳೂರು ಹೊರವಲಯದ ಟೋಲ್‍ಗೇಟ್ ಹತ್ತಿರ ಬಸ್ ನಿಂತಿತ್ತು.. ಸೂರ್ಯನೂ ಕಣ್ಣುಬಿಟ್ಟಿಲ್ಲ.. ಆದರೆ ರಸ್ತೆಯ ಪೂರ್ತಿ ದಾರಿದೀಪದ ಬೆಳಕು ಆವರಿಸಿತ್ತು.. ಹೂವಿನ ಹಾರವನ್ನು ಹಿಡಿದುಕೊಂಡು ದಾವಣಿ ಹಾಕಿದ ಹುಡುಗಿ ರಸ್ತೆ ಬದಿಯಲ್ಲಿ ನಿಂತಿದ್ದಳು.. ಟೈಮ್ ನೋಡಿದರೆ ಐದಕ್ಕೆ ಇನ್ನೂ ಟೈಮ್ ಇದೆ.. ಸೂರ್ಯನಿಗಿಂತ ಮೊದಲು ಬೆಂಗಳೂರು ಎದ್ದಾಗಿತ್ತು.. ನಮ್ಮ ಹಳ್ಳಿಗಳಲ್ಲಿ ಜನ ಬೇಗ ಎದ್ದರೂ ಕೂಡಾ, ಗಡಿಬಿಡಿಯ ಬದುಕು ನಮ್ಮದಲ್ಲ.. ಆದರೆ ಬೆಂಗಳೂರಿನಲ್ಲಿ ಇವೆಲ್ಲವೂ ಅದಲು ಬದಲು..
ಬಸ್ ಇಳಿದಾಕ್ಷಣ ಬೆನ್ನು ಹಿಡಿವ ಆಟೋ ಚಾಲಕರು.. ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತಾರೆ. ನಮ್ಮೂರಿನಲ್ಲಿ ಬೆಂಗಳೂರು ಹೊರಡುವ ಮುನ್ನ ಒಂದು ಕಿವಿ ಮಾತು ಹೇಳಿ ಕಳುಹಿಸುತ್ತಾರೆ.. ‘ಏನೇ ಆದ್ರೂ ಮೆಜೆಸ್ಟಿಕ್‍ನಲ್ಲಿ ಆಟೋ ಹತ್ತೋಕೆ ಹೋಗಬೇಡ..’ 
ಒಂದೇ ತಿಂಗಳಲ್ಲಿ ಅರಿವಾಗಿಬಿಟ್ಟಿತ್ತು ಬೆಂಗಳೂರಿನ ನಿಜಸ್ವರೂಪ..ಇದಾದ ವರ್ಷಗಳ ನಂತರ ಉದ್ಯೋಗದೊಂದಿಗೆ, ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯೂ ಆಗಿ ಬೆಂಗಳೂರೇ ಇದೀಗ ಗಂಡನ ಮನೆಯಾಗಿಬಿಟ್ಟಿದೆ. 
ಮಂಗಳೂರಿನಿಂದ ನನ್ನ ಕನಸು ಕೆ.ಎ.19 ಕೂಡಾ ಬೆಂಗಳೂರಿನ ಹಾದಿಯನ್ನು ಸವೆಸಿದೆ.. ಅಭಿವೃದ್ಧಿಯ ಗುರುತಿಗೆ ಮೆಟ್ರೋ ಹಾದಿ ತಲೆಯೆತ್ತರದಲ್ಲಿ ಹಾದುಹೋಗಿದೆ. ಮೆಟ್ರೋ ಪಥದ ಕೆಳಗೆ ಟ್ರಾಫಿಕ್ಕು ಸಿಗ್ನಲುಗಳಲ್ಲಿ ಬಲೂನು, ಕಾರ್ ಮ್ಯಾಟ್ರೆಸ್‍ಗಳನ್ನು ಮಾರುವ ಕುಟುಂಬಗಳ ನೀಲಿ ಸೂರುಗಳು ಮುದುಡಿಕೊಂಡಿವೆ. ಮಳೆ ಬಂದರೆ ಸಾಕು ಕೊಚ್ಚಿಕೊಂಡುವ ಹೋಗುವ ರಾಜಕಾಲುವೆಗಳ ತಡಿಯಲ್ಲಿ ಗುಡಿಸಲುಗಳು ಹರಡಿಕೊಂಡಿದೆ. ಎತ್ತರದ ಖಾಸಾಗಿ ಕಂಪನಿಗಳ ಬಾನೆತ್ತರದ ಬಿಲ್ಡಿಂಗುಗಳ ಮಧ್ಯೆ ಸರ್ಕಾರಿ ಕನ್ನಡ ಶಾಲೆಗಳು ಉಸಿರು ಕಟ್ಟಿಕೊಂಡು ಗಪ್‍ಚುಪ್ಪಾಗಿ ಕುಳಿತುಕೊಂಡಿದೆ. 
ಇರುವೆ ನುಸುಳಲಾಗದ ಟ್ರಾಫಿಕ್ಕಿನ ಮಧ್ಯೆ ನೀಲಿ, ಕೆಂಪು ದೀಪದ ಆಂಬ್ಯುಲೆನ್ಸ್ ತೆವಳುತ್ತಾ ಮುಂದೆ ಸಾಗುತ್ತದೆ. ಪರವಾಗಿಲ್ಲ ಬೆಂಗಳೂರಿನಲ್ಲಿರುವ ಅಲ್ಪಸ್ವಲ್ಪ ಮಂದಿಗೂ ಮಾನವೀಯತೆ ಇದೆ ಎಂದು ಹಗುರಾಗುತ್ತೇನೆ.
ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸುವುದಂತೂ ಬೆಂಕಿಯಲ್ಲಿ ನಡೆದ ಹಾಗೆ.. ಮುಂದಿರುವ ಗಾಡಿಗೆ ನಮ್ಮ ಗಾಡಿ ಸ್ವಲ್ಪ ಸ್ಪರ್ಶಿಸಿದರೆ ಸಾಕು, ಗಾಡಿ ಅಪ್ಪಚ್ಚಿಯಾದಂತೆ ಮುಂದಿರುವ ಗಾಡಿಯವನ ಬಾಯಿಯಿಂದ ಕೇಳಲಾಗದ ಪದಗಳೆಲ್ಲ, ಕೇಳಿರದ ಪದಗಳೆಲ್ಲಾ ಕೇಳಬೇಕಾಗಬಹುದು.. ಹಿಂದೆ ಸ್ಪರ್ಶಿಸಿದ ಗಾಡಿ ಹುಡುಗಿಯರದ್ದಾದರೆ ಕೆಲವೊಮ್ಮೆ ಸ್ವಲ್ಪ ಎಕ್ಸ್‍ಕ್ಯೂಸ್..! 
ಕನ್ನಡಿಗರನ್ನು ಇಲ್ಲಿ ಹುಡುಕಬೇಕಾದರೆ, ರೆಸ್ಯೂಮ್ ಕೇಳಬೇಕು ಅಷ್ಟೇ, ಅಲ್ಲಿ ತವರೂರ ಹೆಸರು ಅಚ್ಚಾಗಿರುತ್ತದೆ. ಕನ್ನಡ ಗೊತ್ತಿದ್ದರೂ ಇಂಗ್ಲೀಷು ಮಾತನಾಡುವ, ತಮಿಳು ಭಾಷಿಕರಾಗಿ ಕನ್ನಡ ಮಾತನಾಡುವ ಅನೇಕ ಗೊಂದಲಗಳ ಮನುಷ್ಯರು ಇಲ್ಲಿದ್ದಾರೆ. ಗೊಂದಲಗಳ ಮನುಷ್ಯರು ಯಾಕೆಂದರೆ ಇಲ್ಲಿ ತರಕಾರಿ ವ್ಯಾಪಾರಿಗಳ ಬಳಿಯೂ ಕನ್ನಡದಲ್ಲಿ ವ್ಯವಹರಿಸಬೇಕೋ, ಇಂಗ್ಲೀಷಿನಲ್ಲಿ ಮಾತನಾಡದಿದ್ದರೆ ಮರ್ಯಾದೆಯ ಪ್ರಶ್ನೆಯೋ ಎಂದು ಯೋಚಿಸುವ ಜನರಿದ್ದಾರೆ. ಕನ್ನಡಿಗರಾದರೂ ಕನ್ನಡಿಗರೊಂದಿಗೆ ಇಂಗ್ಲೀಷಿನಲ್ಲೇ ಮಾತನಾಡಿ ಮರ್ಯಾದೆ ಹೆಚ್ಚಿಸಿಕೊಂಡಂತೆ ಫೀಲ್ ಆಗುವ ಜನರಿದ್ದಾರೆ. ನಮ್ಮ ಕರಾವಳಿಗರೇ ಬೆಸ್ಟು..(ವಿಶ್ವೇಶ್ವರ ಭಟ್ಟರ ಲೇಖನವೊಂದರಲ್ಲಿ ಉಲ್ಲೇಖಿಸಿದಂತೆ) ಅವನು ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಇನ್ನೊಬ್ಬ ತುಳುವ ಸಿಕ್ಕಿದರೆ ಸಾಕು ತುಳುವಿನಲ್ಲೇ ಮಾತನಾಡಿ ಪ್ರಪಂಚವನ್ನೇ ಮರೆತುಬಿಡುವ ಭಾಷಾಭಿಮಾನ ತುಳುವರದ್ದು..
ತಿನ್ನುವ ವಿಷಯಕ್ಕೆ ಬಂದರೆ ಇಲ್ಲಿ ಕುಳಿತು ತಿನ್ನುವ ವ್ಯವಧಾನವೂ ಯಾರಿಗಿಲ್ಲ. ಬೆಳಗ್ಗೆ ಎದ್ದು ರೆಡಿಯಾಗಿ ಬಂದು ಬಸ್ಸಿನಲ್ಲಿ ಬುತ್ತಿ ಬಿಚ್ಚುವ ಅನೇಕರಿದ್ದಾರೆ. ನಾವು ದುಡಿಯುವುದೇ ಹೊಟ್ಟೆಗಾಗಿ, ಅಂಥಾದ್ದರಲ್ಲಿ ಕುಳಿತು ತಿನ್ನುವುದಕ್ಕೇ ಇಲ್ಲಿ ಸಮಯವಿಲ್ಲ..ಸ್ವಾಮಿ..! ಕೆಲವೊಮ್ಮೆ ರಸ್ತೆ ಬದಿಯ ಗಾಡಿಯ ದೋಸೆ, ಇಡ್ಲಿಗಳೇ ಬೆಳಗ್ಗಿನ ಉಪಹಾರವಾಗಿಬಿಡುತ್ತೆ, ಮಧ್ಯಾಹ್ನವೂ ಗಾಡಿಯ ಊಟವೇ ಹೊಟ್ಟೆ ಸೇರುತ್ತದೆ. ಸಂಜೆಯಾದರೆ ಗೋಬಿ, ಎಗ್‍ರೈಸ್‍ಗಳು ನಾಲಿಗೆಗೆ ಸೆಟ್ಟಾಗಿವೆ. ಮೂಲೆ ಮೂಲೆಯಲ್ಲಿರುವ ಧಾರವಾಡ, ದಾವಣಗೆರೆ ಊರಿನ ಹೆಸರಿನ ರೊಟ್ಟಿ ಮನೆಗಳು, ತವರೂರು ಬಿಟ್ಟು ಕೆಲಸಕ್ಕೆ ಬಂದವರ ಹೃದಯ, ಹೊಟ್ಟೆಯನ್ನು ತಂಪಾಗಿಸುತ್ತೆ. ಖಾಸಗಿ ಕಂಪನಿಗಳ ಮುಂದೆ ಸ್ವಿಗ್ಗಿ, ಝೊಮ್ಯಾಟೋಗಳ ಪೆಟ್ಟಿಗೆಯಿಂದ ಬಿಸಿಯಾದ ತಿನಿಸುಗಳು ಹವಾನಿಯಂತ್ರಿತ ಕೊಠಡಿಯೊಳಗೆ ಸೇರಿ ತಣ್ಣಗಾಗಿ ಬಿಡುತ್ತವೆ. 
ಬೆಂಗಳೂರಿನಲ್ಲಿ ಸ್ವಂತ ಮನೆ ಇರುವವರಿಗಾದರೋ ಯೋಚನೆಯಿಲ್ಲ. ಬಾಡಿಗೆ ಮನೆಯಲ್ಲಿರುವವರಿಗೆ ಪ್ರತಿವರ್ಷವೂ ಹೆಚ್ಚಾಗುವ ಬಾಡಿಗೆಯ ಭೀತಿ ಹೀಗಾಗಿ, ಬಾಡಿಗೆ ಮನೆಯೇ ನೆಚ್ಚಿಕೊಂಡಿರುವವರಿಗೆ, ಬೆಂಗಳೂರಿನ ಪ್ರತಿ ಏರಿಯಾಗಳೂ 20-30 ವರ್ಷಗಳಲ್ಲಿ ಪರಿಚಿತವಾಗಿಬಿಟ್ಟಿರುತ್ತದೆ. ಸ್ವಂತ ಮನೆಯ ಕನಸು ಬೆಚ್ಚಗೆ ಹೊದ್ದು ಮಲಗಿರುತ್ತದೆ. ಇನ್ನು ಬೆಂದಕಾಳೂರಿನಲ್ಲೇ ಪೂರ್ವಜರ ಕಾಲದಿಂದಲೂ ಇದ್ದ ಒಂದೆಕರೆ ಜಾಗದಲ್ಲಿ ಪುಟ್ಟ ಜೋಪಡಿ ಮಾಡಿಕೊಂಡು ಇನ್ನೂ ಬಡತನದಲ್ಲೇ ಬೇಯುತ್ತಿರುವ, ಬಲಿಷ್ಠವಾಗಿ ಸೂರು ಕಟ್ಟಿಕೊಳ್ಳಲಾಗದ ಎಷ್ಟೋ ಕುಟುಂಬಗಳಿವೆ.
ಇನ್ನು ಇಲ್ಲಿನ ಖಾಸಗಿ ಆಸ್ಪತ್ರೆಗಳಂತೂ ಯಮನಿಗೇ ಪ್ರೀತಿ. ಪರ್ಸ್ ಹಿಡಿದು ಹೋದರೆ ಖಾಲಿ ಪರ್ಸ್‍ನೊಂದಿಗೆ ಜೊತೆಯಾಗಿ ಇನ್ನೊಂದು ರೋಗವೂ ಬೆನ್ನುಹಿಡಿಯುತ್ತದೆ. ಆಶ್ಚರ್ಯವೆಂದರೆ ಇತ್ತೀಚೆಗೆ ನಮ್ಮ ಮನೆಯವರು ಡೆಂಟಲ್ ಕ್ಲಿನಿಕ್‍ಗೆ ಹೋದಾಗ ಅಲ್ಲಿ ಒಂದು ಸಣ್ಣ ಚಿಕಿತ್ಸೆಗಾಗಿ ಕೇಳಿದ ಮೊತ್ತ 12ಸಾವಿರ, ಅದೂ ಕೇಳಿ ಲೋನ್‍ಗಾಗಿ ಫೈನಾನ್ಸ್‍ನವರೂ ಪಕ್ಕದಲ್ಲೇ ಕುಳಿತಿದ್ದಾರೆ. ಆಸ್ಪತ್ರೆಯಲ್ಲೇ ಲೋನ್ ಕೊಡುವ ಫೈನಾನ್ಸ್‍ಗಳಿದ್ದಾವೆ ಇಲ್ಲಿ..! ಇದರ ನಡುವೆ ಎಲ್ಲೋ ಒಂದು ಕಡೆ ಹೃದಯವಂತ ಡಾಕ್ಟರುಗಳು ಕೂಡಾ ಇದ್ದಾರೆ, ಹುಡುಕಬೇಕಷ್ಟೇ..!

ಸಂಜೆಯಾದರೆ ಒಂದಿಷ್ಟು ಕೆಲಸದ ಒತ್ತಡಗಳನ್ನು ತಲೆಗಂಟಿಸಿಕೊಂಡು ಮರಳುವ ಜೋಲುಮುಖಗಳು, ಹಸಿರು ಬಸ್ಸಿನ ಕಿಟಕಿಗೆ ಎರಡೂ ಇಯರ್‍ಫೋನ್ ಸಿಕ್ಕಿಸಿಕೊಂಡು ಒರಗಿರುತ್ತದೆ. ಬೆವರುಮಿಶ್ರಿತ ವಾಸನೆಯೊಂದು ಬಸ್ಸಿನಲ್ಲಿ ಹರಡಿಕೊಂಡಿರುತ್ತದೆ. ಬಸ್ಸಿನ ಸರಳಿಗೆ ಕೈ ಇರಿಸಿ ಜೋತಾಡುವ ಮುಖದಲ್ಲಿ ನಾಳೆಯ ಬಗ್ಗೆ ಯೋಚನೆ ಮೂಡುತ್ತದೆ. ಇನ್ನು ಸ್ವಂತ ಗಾಡಿ ಇರುವವರಾದರೆ ಸಂಜೆಯ ಟ್ರಾಫಿಕ್ಕಿನ ಭೀತಿ ಸಂಜೆಯಾಗುತ್ತಿದ್ದಂತೆ ಆವರಿಸುತ್ತದೆ. ಸಾಗುವ ದಾರಿಯಲ್ಲಿ ಹಸಿರು ಸಿಗ್ನಲ್‍ಗೇ ಕಣ್ಣುಗಳು ಕಾತರಿಸುತ್ತದೆ.. ಸಾಗುವ ದಾರಿಯಲ್ಲಿ ಆಗಾಗ ನಮ್ಮೂರು ನೆನಪಾಗುತ್ತದೆ.. ಹೋಗಿಬಿಡಲೇ ಎನ್ನುತ್ತದೆ ಮನಸು ಆಗೋದಿಲ್ಲವೆನ್ನುತ್ತದೆ..ಈ ಬೆಂಗಳೂರು ಬಿಟ್ಟರೂ ಬಿಡಲಾಗದಂತಹ ಸೆಳೆತ. ಈ ಬೆಂಗಳೂರೇ ಹೀಗೆ ಟ್ರಾಫಿಕ್ಕು ಸಿಗ್ನಲ್‍ನಲ್ಲಿ ಪ್ಲಾಸ್ಟಿಕ್‍ನೊಳಗೆ ಅವಚಿ ಕುಳಿತ ಕೆಂಗುಲಾಬಿ ಮಾರುವ ಹುಡುಗಿಯ ಅಸಹನೆಯಂತೆ.. ಕಣ್ಣಲ್ಲಿನ ನಿರಾಸೆಯ ಹಿಂದೆ ಆಶಾಭಾವನೆಯೊಂದು ಅಡಗಿ ಕುಳಿತಂತೆ.. ಬೆಂದಕಾಳೂರಿನ ಒಡಲಲ್ಲೊ ಬೆಂದು ಹೋದ ಕನಸುಗಳಿವೆ. ಅರಳಿದ ಕನಸುಗಳಿದೆ.. ಕುಸಿದು ಹೋದ ಮನಸುಗಳಿದೆ.. ಬೇಸತ್ತ ಹಿರಿಯ ಹೃದಯಗಳಿವೆ.. 

Wednesday 21 November 2018

ಮನದಲ್ಲೊಂದು ಧಿಗಿಣ..


ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸುಮ್ಮನೇ ಮೊಬೈಲ್‍ಗೆ ಕುಟ್ಟುತ್ತಾ ಕುಳಿತಿದ್ದಾಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ  ಯಕ್ಷಗಾನದ ಚೆಂಡೆಯ ಕಿವಿಗೆ ಸದ್ದು ಅಪ್ಪಳಿಸಿತ್ತು.. ಅದೇ ಅಳುವ ಸೀರಿಯಲ್, ನಾಟಕೀಯ ರಿಯಾಲಿಟಿ ಷೋಗಳನ್ನು ನೋಡಿ ಬೇಜಾರಾಗುವ ನನ್ನಪ್ಪನಿಗೆ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಸಮಯದ ಮಿತಿಯಿಲ್ಲದೇ ಪ್ರಸಾರ ಮಾಡುವ ಯಕ್ಷಗಾನವನ್ನು ನೋಡುವುದೆಂದರೆ ತುಂಬಾ ಇಷ್ಟ.. ನಾನು ಅಪ್ಪನೊಂದಿಗೆ ಕುಳಿತು ನೋಡುತ್ತಿದ್ದೆ..


ನನ್ನ ಅದ್ಭುತವಾದ ಬಾಲ್ಯವನ್ನು ಹೆಚ್ಚಾಗಿ ಕಳೆದಿದ್ದೇ ಅಜ್ಜಿಮನೆಯಲ್ಲಿ. ಆಗೆಲ್ಲಾ ಕುಟುಂಬ ಸಮೇತ ತೆಂಗಿನ ಗರಿಯ ಸೂಟೆ ಮಾಡಿ ಬೆಂಕಿ ಹತ್ತಿಸಿಕೊಂಡು ಗದ್ದೆಯ ಬದುವಿನಲ್ಲಿ ಸೂಟೆ ಗಾಳಿಯಲ್ಲಿ ಹಾರಿಸಿಕೊಂಡು ನಾಯಕನಂತೆ ಹಿರಿಯರೊಬ್ಬರು ನಡೆದರೆ ಅವರ ಹಿಂದೆ ಬ್ಯಾಟರಿ ಹಿಡಿದುಕೊಂಡು ಬೆಳದಿಂಗಳಿಗೆ ಸ್ಪರ್ಧೆಯನ್ನೊಡ್ಡುತ್ತಾ ಹೆಜ್ಜೆ ಹಾಕುತ್ತಿದ್ದೆವು.  ತಣ್ಣನೆಯ ಗಾಳಿ ಮೈಗವಚಿಕೊಂಡು, ಎದೆಯಲ್ಲೊಂದು ಕತ್ತಲಿನ ಭಯ ಆವರಿಸುತ್ತಿತ್ತು. ಕಿವಿಗೆ ಅಲ್ಲೆಲ್ಲೋ ಚೆಂಡೆಯ ಶಬ್ದ ಕೇಳಿಸಿದರೆ ಸಾಕು..ಹೋ ಯಕ್ಷಗಾನ ಶುರುವಾಗಿಬಿಟ್ಟಿದೆ, ನೀವೆಲ್ಲಾ ಹೊರಡುವಾಗ ತಡ ಮಾಡಿದ್ರಿ ಎನ್ನುವ ಅಸಹನೆಯೊಂದು ಹಿರಿಯರಲ್ಲಿ ಶುರುವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದುದು ನೆನಪಿದೆ. ಬಹುಶಃ ಈ ಉತ್ಸಾಹ ಈಗೀಗ ಈಗಿನ ಜನರೇಷನ್‍ನಲ್ಲಿ ಕಾಣೆಯಾಗಿಬಿಟ್ಟಿದೆ.
ಹಿಂದೆ ದೊಡ್ಡ ಮೈದಾನದ ಮಧ್ಯೆ, ಇಲ್ಲದಿದ್ದರೆ ಗದ್ದೆಯ ಮಧ್ಯೆ ನಾಲ್ಕು ಕಂಬಗಳ ರಂಗಸ್ಥಳದಲ್ಲಿ ಚೆಂಡೆಯ ಸದ್ದಿಗೆ ಯಕ್ಷಪಾತ್ರಗಳು ಅಬ್ಬರಿಸಿ ಕುಣಿಯುತ್ತಿದ್ದರೆ ರಂಗಸ್ಥಳವೇ ನಡುಗುತ್ತಿತ್ತು. ಈಗ ಅವೆಲ್ಲಿದೆ ಬಿಡಿ.. ನಗರಗಳಲ್ಲಿ ಹವಾನಿಯಂತ್ರಿಯ ಸಂಭಾಗಣದ ಸಿಮೆಂಟು ವೇದಿಕೆಯ ಮೇಲೆ ಜಗಮಗಿಸುವ ಬೆಳಕಿನಲ್ಲಿ ರಂಗಸ್ಥಳವನ್ನು ಮಾಡಿರುತ್ತಾರೆ. ಆಸಕ್ತ ಯಕ್ಷಗಾನ ಪ್ರಿಯರು ಬೆರಳೆಣಿಕೆಯವರಾದರೆ ಆಮಂತ್ರಿತರ ಮುಖ ಮೊಬೈಲ್‍ನಲ್ಲಿ ತೆರೆದಿರುವ ಫೇಸ್‍ಬುಕ್, ವಾಟ್ಸ್ಯಾಪ್ ಪೇಜ್‍ನ ಬೆಳಕಿನಲ್ಲಿ ಹೊಳೆಯುತ್ತಿರುತ್ತದೆ. ನಮ್ಮಂತಹ ಕರಾವಳಿಯ ಯಕ್ಷಗಾನ ಪ್ರಿಯರಿಗೆ ಆ ಬೆಳಕು ಕೆಲವೊಮ್ಮೆ ಎದೆಗೆ ಚುಚ್ಚಿದಂತಾಗುತ್ತದೆ.
ನನಗೆ ಯಕ್ಷಗಾನದಲ್ಲಿ ತುಂಬಾ ಇಷ್ಟವಾಗುವ ಯಕ್ಷಗಾನದ ಕಥೆಯೆಂದರೆ ದೇವಿ ಮಹಾತ್ಮೆ. ರಾತ್ರಿ ಎಂಟು ಒಂಭತ್ತು ಗಂಟೆಗೆ ಶುರುವಾದ ಯಕ್ಷಗಾನವನ್ನು ತೂಕಡಿಸುತ್ತಲೇ ನೋಡುತ್ತೇವೆ. ತೂಕಡಿಸಿದರೂ ಚೆಂಡೆಯ ಸದ್ದು ಬಡಿದೆಬ್ಬಿಸುತ್ತವೆ. ಇನ್ನೂ ಭಾಗವತರ ಬಗ್ಗೆ ಎಷ್ಟು ವಿಚಾರ ಹೇಳಿದರೂ ಸಾಲದು.. ಬಾಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಲಯಬದ್ಧವಾಗಿ ಗಣೇಶ ಸ್ತುತಿಯಿಂದ ಯಕ್ಷಗಾನವನ್ನು ಪ್ರಾರಂಭಿಸಿದರೆ ಅವರ ಬಾಯಿಂದ ಹೊರಟ ಶುಶ್ರಾವ್ಯಭರಿತ ಆವೇಶದ ನಾದ ಇಡೀ ಊರೆಲ್ಲಾ ಪಸರಿಸಿರುತ್ತದೆ.. ಯಕ್ಷಗಾನದಲ್ಲಿ ಕೊನೆಯವರೆಗೂ ಕಾಯುವ ಘಟ್ಟವೆಂದರೆ ಮಹಿಷಾಸುರ ಪ್ರವೇಶ.. ಹೋ.. ಎಂದು ಆವೇಶದಿಂದ ಅಬ್ಬರಿಸುತ್ತಾ ಕೈಯಲ್ಲಿ ಹಿಡಿವ ದೊಂದಿಗೆ ಭಸ್ಮ ಚೆಲ್ಲಿದರೆ ಹಾರುವ ಬೆಂಕಿ ಎದೆಯಲ್ಲಿ ಭಯವನ್ನು ಹುಟ್ಟಿಸುತ್ತದೆ. ನಿದ್ದೆಯನ್ನು ಹೊಡೆದೋಡಿಸುತ್ತದೆ. ಕೆಳಗೆ ಸಾಲಾಗಿ ಕುಳಿತಿರುವ ಮಕ್ಕಳತ್ತ ಕೆಂಗಣ್ಣು ಬಿಟ್ಟರೆ ಸಾಕು ಮಕ್ಕಳೋ ಚೆಲ್ಲಾಪಿಲ್ಲಿ, ಅಮ್ಮಂದಿರ, ಅಜ್ಜಿಯಂದಿರ ತೋಳತೆಕ್ಕೆಯಲ್ಲಿ ಬಂದು ಪಿಳಿಪಿಳಿ ಕಣ್ಣುಬಿಡುತ್ತದೆ.
ಇನ್ನು ರಂಗಸ್ಥಳದ ಮೇಲೆ ದೇವಿಯ ಪ್ರವೇಶವಾದರೆ ಸಾಕು, ಸಾಕ್ಷಾತ್ ದೇವಿಯೇ ಅವತರಿಸಿದ ಧನ್ಯತಾ ಭಾವ. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಯಕ್ಷಗಾನವೆಂದರೆ ಭಕ್ತಿ ಕೂಡಾ. ಇತ್ತೀಚೆಗೆ ಎಲ್ಲೋ ನಗರದಲ್ಲಿ ಒಂದು ಕಡೆ ಮದುವೆಯ ಮನೆಯಲ್ಲಿ ತಮ್ಮ ಶ್ರೀಮಂತಿಕೆ ಪ್ರದರ್ಶಿಸಿಕೊಳ್ಳಲು, ಮುಗ್ಧ ವ್ಯಕ್ತಿಗಳಿಬ್ಬರಿಗೆ ಯಕ್ಷಗಾನದ ವೇಷಭೂಷಣ ಹಾಕಿಸಿ ನಿಲ್ಲಿಸಿದುದು ಕರಾವಳಿಗರ ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಖ್ಯಾತ ಖಾಸಗಿ ವಾಹಿನಿಯೊಂದು ಯಕ್ಷಗಾನದ ಹೆಜ್ಜೆಗೆ ಯಾವುದೋ ಹಿಂದಿ ಸಂಗೀತವನ್ನು ಹಾಕಿಸಿ ಪುಟ್ಟ ಮಕ್ಕಳಿಗೆ ವೇಷ ಹಾಕಿಸಿ ಕುಣಿಸಿದ್ದುದ್ದು, ಯಕ್ಷಪ್ರೇಮಿಗಳನ್ನು ಕೆರಳಿಸಿತ್ತು. ತದನಂತರ ವಾಹಿನಿಯೂ ಕ್ಷಮೆ ಕೋರಿದಂತಹ ಘಟನೆ ನಡೆದಿತ್ತು. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಆರಾಧನೆಯೂ ಕೂಡಾ, ಹರಕೆಯ ರೂಪದಲ್ಲೂ ಯಕ್ಷಗಾನ ಬಯಲಾಟವನ್ನು ಆಡಿಸುವವರೂ ಇದ್ದಾರೆ.
ಹಿಂದೆಲ್ಲಾ ಯಕ್ಷಗಾನಕ್ಕೆ ಹೋಗುವುದೆಂದರೆ ಮನೆಯವರಿಗೆಲ್ಲಾ ಸಂಭ್ರಮ, ಒಟ್ಟಿಗೆ ಸಿನಿಮಾ ನೋಡಲು ಹೋಗದಿದ್ದರೂ, ಯಕ್ಷಗಾನಕ್ಕೆ ಮಾತ್ರ ಇಡೀ ಕುಟುಂಬ ಸಮೇತ ಯಕ್ಷಗಾನ ನಡಯುವ ಸ್ಥಳದಲ್ಲಿ ಹಾಜರ್. ಈಗೀಗ ಮಗಳಿಗೆ ಎಕ್ಸಾಂ, ಮಗನ ಹೋಂವರ್ಕ್ ಆಗಿಲ್ಲ, ನಿದ್ದೆ ಕೆಟ್ಟರೆ ನಾಳೆ ಕೆಲಸಕ್ಕೆ ಹೋಗುವುದಕ್ಕಾಗಲ್ಲ.. ಈ ರೀತಿಯ ನೆಪಗಳು ಮನೆಯಲ್ಲೇ ಉಳಿಯುವಂತೆ ಮಾಡುತ್ತದೆ. ಯಾರಾದರೂ ಹೋಗುವವರಿದ್ದರೆ ಸಾಯುವ ಕಾಲದಲ್ಲಿ ಒಂದು ಯಕ್ಷಗಾನ ಆದರೂ ನೋಡಿದ ಹಾಗಾಗುತ್ತಿತ್ತು ಎನ್ನುವ ದನಿಯೊಂದು ಮೂಲೆಯಲ್ಲಿ ಕುಳಿತ ಅಜ್ಜ/ಅಜ್ಜಿಯ ಬಾಯಿಂದ ಕೇಳಿ ಬರುತ್ತದೆ.
ಇನ್ನೊಂದು ಏನೆಂದರೆ ನಮ್ಮೂರ ಯಕ್ಷಗಾನ ಚುರುಮುರಿಗಳ ಸ್ಟಾಲ್‍ಗಳಿಲ್ಲದೇ ಕಂಪ್ಲೀಟೇ ಆಗಲ್ಲ. ಯಕ್ಷಾಗಾನದ ಅಂಗಣದೊಳಗೆ ಚೆಂಡೆ, ಮದ್ದಳೆಯ ಸದ್ದಾದರೆ ಸ್ವಲ್ಪ ಆಚೆಗೆ ಬಂದರೆ ಫೈಬರ್ ಟೇಬಲ್ ಮೇಲೆ ಖಾರ, ಮಾವಿನಕಾಯಿ, ಕ್ಯಾರೆಟ್ ತುರಿ, ಮಂಡಕ್ಕಿಯನ್ನು ಸ್ಟೀಲ್ ಪಾತ್ರೆಯೊಳಗೆ ಹಾಕಿ ಸೌಟಿನಿಂದ ಕಲಸುವ ಟಣ್ ಟಣ್ ಸದ್ದು ಇನ್ನೂ ಆತ್ಮೀಯ.. ಚುರುಮುರಿಯ ಘಮ ಮೂಗಿನ ಹೊಳ್ಳೆಯನ್ನು  ಪ್ರವೇಶಿಸಿ, ಚುರುಮುರಿಗಾಗಿ ಅಜ್ಜನೋ, ಮಾವನನ್ನೋ ಪೀಡಿಸುತ್ತಿದ್ದೆವು.(ಈಗೀಗ ಚುರುಮುರಿ ಸ್ಟಾಲ್‍ನ ಟೇಬಲ್‍ನ ಬದಿಯಲ್ಲಿ ಸಿಗರೇಟು, ಪಾನ್ ಮಸಾಲ ಪಾಕೀಟುಗಳೂ ತನ್ನ ಸ್ಥಾನವನ್ನಲಂಕರಿಸುತ್ತಿದೆ) ಇನ್ನೊಂದು ಬಾಯಲ್ಲಿ ನೀರೂರಿಸುವ ಸುಕುನಪ್ಪ, ನೆಯ್ಯಪ್ಪ.. (ಇದರ ಟೇಸ್ಟ್‍ಗಾಗಿ ಇನ್ನೂ ಹುಡುಕುತ್ತಿದ್ದೇನೆ ಅಂದಿನ ರುಚಿ ಮಾತ್ರ ಸಿಕ್ಕಿಲ್ಲ).. ನಮ್ಮೂರಲ್ಲಿ ಎಲ್ಲೇ ಯಕ್ಷಗಾನವಾದರೂ ಸುಕುನಪ್ಪ ಮಾರುವ ಅಜ್ಜಿಯೊಬ್ಬರು ಹಾಜರಾಗುತ್ತಿದ್ದರು. ಮಧ್ಯದಲ್ಲಿ ಸೀಮೆಎಣ್ಣೆಯ ಚಿಮಣಿ ದೀಪ ಸುತ್ತಲೂ ಸುಕುನಪ್ಪ, ನೆಯ್ಯಪ್ಪಗಳನ್ನು ಅಗಲವಾದ ಬುಟ್ಟಿಯಲ್ಲಿ ಜೋಡಿಸಿಟ್ಟಿರುತ್ತಿದ್ದುದು ಇನ್ನೂ ನೆನಪಿದೆ. ಅವರು ಮಾರುತ್ತಿದ್ದ ಸುಕುನಪ್ಪ, ನೆಯ್ಯಪ್ಪಗಳ ಪರಿಮಳದೊಂದಿಗೆ ಸೀಮೆಎಣ್ಣೆಯ ಘಾಟೂ ಇರುತ್ತಿತ್ತು. ಆಕೆಯೂ ಈಗ ಕಾಣೆ.. ಈಗೀಗ ವಿವಿಧ ಐಸ್‍ಕ್ರೀಮ್‍ಗಳ ಗಾಡಿಗಳೂ, ಅದರಲ್ಲಿ ನೇತಾಡುತ್ತಾ, ಐಸ್‍ಕ್ರೀಂ ಮಾರುವವರಷ್ಟೇ ಕಾಣಸಿಗುತ್ತಾರೆ. ಈಗಿನ ಮಕ್ಕಳಿಗೆ ಸುಕುನಪ್ಪಕ್ಕಿಂತ, ಕೋನ್, ಚೋಕೋಬಾರ್ ಐಸ್‍ಕ್ರೀಂಗಳೇ ಬೇಗ ಕಾಣಿಸುತ್ತವೆ.
ಮಹಿಷಾಸುರನ ಅಂತ್ಯವಾಗುವುದರೊಂದಿಗೆ ತ್ರಿಮೂರ್ತಿಗಳು, ದೇವತೆಗಳು ಪ್ರತ್ಯಕ್ಷವಾಗಿ ಮಂಗಳಹಾಡುವುದರೊಂದಿಗೆ ಅಂದಿನ ಯಕ್ಷಗಾನಕ್ಕೆ ತೆರೆಬೀಳುತ್ತವೆ. ಅಲ್ಲಿವರೆಗೂ ಒಂದೇ ಕಡೆ ಕುಳಿತಿದ್ದ ದೇಹ ಎದ್ದು ನಿಂತು ನಟಿಗೆ ಮುರಿಯುತ್ತದೆ.. ಪೂರ್ವದಲ್ಲಿ ಸೂರ್ಯ ಉದಯಿಸುವ ಸುದ್ದಿಗಾಗಿ ಕೆಂಬಣ್ಣದ ಕಿರಣಗಳು ಎದ್ದು ಧಾವಿಸುತ್ತದೆ. ಮುಂಜಾನೆಯ ಮಂಜು ದಟ್ಟವಾಗಿ ಆವರಿಸಿರುತ್ತದೆ. ಬೆಳೆದ ಹಸಿರು ಪೈರುಗಳ ತುಂಬೆಲ್ಲಾ ಮಂಜಿನ ಮುತ್ತಿನ ಶೃಂಗಾರ.. ಅದನ್ನು ಬರಿಗಾಲಲ್ಲಿ ಮೆಲ್ಲನೆ ಸ್ಪರ್ಶಿಸಿದರೆ ತಣ್ಣನೆಯ ಮಿಂಚೊಂದು ನೆತ್ತಿಗೇರುತ್ತದೆ. ಅಂಗೈಯಲ್ಲಿ ರಾತ್ರಿ ಮೆದ್ದ ಚುರುಮುರಿಯ ಘಮ ಅಂಟಿಕೊಂಡಿರುತ್ತದೆ. ಅಜ್ಜಿಯ ಕೈಯಲ್ಲೆರಡು ಮಂಡಕ್ಕಿಯ ಪ್ಯಾಕೇಟುಗಳು ಭದ್ರವಾಗಿ ಕುಳಿತಿರುತ್ತದೆ. ಅಂದಿನ ಬೆಳಗ್ಗಿನ ಬಿಸಿಬಿಸಿ ಚಹಾಗೆ ಕೊಬ್ಬರಿ, ಸಕ್ಕರೆ, ಈರುಳ್ಳಿ ಬೆರೆಸಿ ಮಾಡುವ ಮಂಡಕ್ಕಿ ಒಗ್ಗರಣೆ ಗಂಟಲೊಳಗೆ ಇಳಿಯುತ್ತಿದ್ದರೆ, ಮನೆತುಂಬೆಲ್ಲಾ ಯಕ್ಷಗಾನ ಪಾತ್ರಗಳದ್ದೇ ಮಾತುಕತೆ.
ರಾತ್ರಿಯೆಲ್ಲಾ ನಿದ್ದೆಕೆಟ್ಟು ಯಕ್ಷಗಾನ ನೋಡಿ, ಹಗಲೆಲ್ಲಾ ಗಡದ್ದಾಗಿ ನಿದ್ದೆ ಹೊಡೆಯುವ ಹಿರಿಯರ ಕಣ್ತಪ್ಪಿಸಿ, ಚಿಕ್ಕಮ್ಮನ ಕಾಡಿಗೆ ಮುಖದ ತುಂಬಾ ಹಚ್ಚಿಕೊಂಡು, ಅಕ್ಕನ ಚೂಡಿದಾರದ ಶಾಲು ಹೊದೆದುಕೊಂಡು, ತೂತು ಕೊಡಪಾನದ ಮೇಲೆ ಕೋಲು ಹಿಡಿದು ಚೆಂಡೆಗೂ ಮೀರಿ ಬಡಿಯುವ ಚಿಲ್ಟಾರಿಗಳ ಸದ್ದು ಕೇಳಿ.. ಮಲಗಿದ್ದವರೂ ಎದ್ದು ಬರುವುದುಂಟು..ಒಮ್ಮೊಮ್ಮೆ..
ನಾವೆಲ್ಲಾ ಪುರಾಣ ಕಥೆಗಳನ್ನು ಅರ್ಧಕ್ಕರ್ಧ ತಿಳಿದುಕೊಂಡಿದ್ದು ಈ ಯಕ್ಷಗಾನಗಳನ್ನು ನೋಡಿಯೇ, ಶ್ವೇತಕುಮಾರನ ಚರಿತ್ರೆ, ಅಶ್ವಮೇಧಯಾಗ, ಶಿಶುಪಾಲ ವಧೆ ಹೀಗೆ ಪುರಾಣ ಕಥೆಗಳನ್ನು ವಿವರವಾಗಿ ವಿವರಿಸಿದ್ದು ಯಕ್ಷಗಾನಗಳೇ.. ಈಗೆಲ್ಲಾ ಮಕ್ಕಳು ಕಾರ್ಟೂನ್ ಕಥೆ ಕೇಳುತ್ತಾರೆ ಹೊರತು, ಯಕ್ಷಗಾನದ ಕಥೆಗಳನ್ನಲ್ಲ..
ಈಗೀಗ ಬೆಂಗಳೂರಲ್ಲೂ ಕರಾವಳಿಯ ಯಕ್ಷಗಾನ ಪ್ರೇಮಿಗಳು, ಯಕ್ಷಗಾನ ಪ್ರಸಂಗವನ್ನು ಆಡಿಸುತ್ತಾರೆ. ಮಹಾನಗರದ ಎಲ್ಲೋ ಮೂಲೆಯಲ್ಲಿ ನಡೆಯುವ ಯಕ್ಷಗಾನ ನೋಡಲು ಹೊರಟರೆ ಟ್ರಾಫಿಕ್ಕು, ಕಿವಿ ಸೀಳುವ ಹಾರನ್‍ಗಳ ಮಧ್ಯೆ ಯಕ್ಷಗಾನ ನೋಡಲು ಹೋಗುವಷ್ಟರಲ್ಲಿ ತಾಳ್ಮೆಯೂ ಕೆಟ್ಟು ಹೋಗಿರುತ್ತದೆ. ಅಷ್ಟರಲ್ಲಿ ಅರ್ಧ ಪ್ರಸಂಗವೇ ನಡೆದು ಹೋಗಿರುತ್ತದೆ. ಏನಿದ್ದರೂ ನಮ್ಮ ಬಾಲ್ಯಕಾಲದಲ್ಲಿ ನಮ್ಮೂರಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳೇ ಅಚ್ಚಳಿಯದೇ ನೆನಪುಗಳ ಪುಟದಲ್ಲಿ ಮಾಸದೇ ಉಳಿಯುತ್ತದೆ..

Friday 5 October 2018

ಮಳೆಗಾಲದಲ್ಲಿ ನಮ್ಮೂರು...

ಇನ್ನೇನು ಆಫೀಸ್ ಪಂಚಿಂಗ್ ಮಿಷಿನ್‍ಗೆ ಹೆಬ್ಬೆರಳೊತ್ತಲು 1 ಗಂಟೆ ಬಾಕಿಯಿತ್ತು.. ಆಕಾಶದಲ್ಲಿ ಮೊಡ ಕಟ್ಟಿತ್ತು.. ಈ ಬೆಂಗಳೂರಿನ ಮಳೆಯೇ ಹೀಗಪ್ಪ.. ಆಫೀಸು ಬಿಡುವ ಹೊತ್ತಿಗೇ ಶುರುವಾಗಿ ಬಿಡುತ್ತೆ.. ಎಲ್ಲರೂ ಸಂಜೆ ಬರುವ ಮಳೆಗೆ ಶಾಪ ಹಾಕುತ್ತಿದ್ದರು.. ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಜೀವನದಲ್ಲಿ ಜಿಗುಪ್ಸೆ ಆವರಿಸಿ ಬಿಡುತ್ತದೆ.. ಅಲ್ಲಲ್ಲಿ ಅಪ್ಪದ ಕಾವಲಿಯಂತಾಗಿರುವ ರಸ್ತೆಗಳು.. ಎಲ್ಲಿ ನೀರು ನಿಂತಿರುತ್ತೋ ಗೊತ್ತಿಲ್ಲ.. ರೋಡ್‍ನ ಮಧ್ಯೆ ಇರುವ ಡ್ರೈನೇಜ್ ಕವಚಗಳು ಬುಸ್ ಬುಸ್ ಎನ್ನುತ್ತಿರುತ್ತವೆ, ಯಾವಾಗ ಮೇಲೆ ಚಿಮ್ಮುವುದೋ ಗೊತ್ತಿಲ್ಲ..! ರೋಡ್ ತುಂಬಾ ಕರಿ ನೀರು.. ಕೊಚ್ಚೆಯ ನೀರು ಮಳೆಯ ನೀರು ಒಂದಾಗಿ ರೋಡ್ ಮೇಲೆ ಹರಿಯುತ್ತಿರುತ್ತದೆ.

 ದ್ವಿಚಕ್ರ ಸವಾರರಿಗೊಂದು ಬೆಂಗಳೂರಿನ ಮಳೆಯೆಂದರೆ ಸವಾಲು.. ಮುಂದೆಯಿಂದ ಹೋಗುವ ವಾಹನದ ಟೈರ್‍ನಿಂದ ಮುಖಕ್ಕೆ ಕಾರಂಜಿಯಂತೆ ಮರಳು ಮಿಶ್ರಿತ ನೀರು ಅಭಿಷೇಕ ಮಾಡುತ್ತಿರುತ್ತದೆ.. ಪಕ್ಕದಲ್ಲಿ ಕಾರಿನವನು ಗುಂಡಿಯಲ್ಲಿ ಟೈರ್ ಇಳಿಸಿದರೆ ಸಾಕು.. ಪಕ್ಕದಲ್ಲಿರುವ ದ್ವಿಚಕ್ರವಾಹನ ಸವಾರ ಅರ್ಧ ಕೆಸರೇಶ್ವರ.. ಅಯ್ಯೋ.. ಮಧ್ಯೆ ಈ ಟ್ರಾಫಿಕ್ ಜಾಮ್ ವರುಣನಿಗೇ ಪ್ರೀತಿ..
ಬೆಂಗಳೂರ ಮಳೆಯ ಬಗ್ಗೆ ಹೇಳುತ್ತಿದ್ದಂತೆ.. ನಮ್ಮೂರ ಮಳೆಯ ಬಗ್ಗೆ ಹೇಳಬೇಕೆಂದೆನಿಸುತ್ತದೆ.. ನಮ್ಮೂರ ಮಳೆಯೇ ಇಷ್ಟ ನನಗೆ.. ಮಳೆ ಬರುವ ಸೂಚನೆಗೆ ಮೋಡ ಕಟ್ಟಿ ದಟ್ಟವಾಗಿ ಆವರಿಸುತ್ತಾ ಹೋಗುತ್ತಿದ್ದಂತೆ.. ಒಣಗಲು ಹಾಕಿದ್ದ ಬಟ್ಟೆಗಳೆಲ್ಲಾ ನಗು ನಗುತ್ತಾ ಮನೆಯೊಳಗೆ ಬೆಚ್ಚಗೆ ಹೋಗುತ್ತವೆ.. ದೂರದಿಂದಲೇ ಮಳೆ ಆರ್ಭಟಿಸುತ್ತಾ ಬರುವಾಗ ಜೊತೆಗೆ ತಂಪಾದ ಗಾಳಿಯನ್ನೂ ಹೊತ್ತು ತರುತ್ತದೆ. ಭೋರೆಂದು ಸುರಿವ ಮಳೆ ಏಕತಾನತೆಯಲ್ಲಿ ಸುರಿಯುತ್ತಲೇ ಇರುತ್ತದೆ.. ಜೊತೆಗೆ ಗುಡುಗು ಮಿಂಚುಗಳ ಅಬ್ಬರಕ್ಕೆ ಮನೆಯೊಳಗಿನ ಕಬ್ಬಿಣದ ಕತ್ತಿ ಅಂಗಳದಲ್ಲಿ ಅಂಗಾತವಾಗಿ ಮಲಗಿರುತ್ತದೆ.. ಮಳೆಯ ರಭಸಕ್ಕೆ ಮಾಡಿನಿಂದ ನೀರು ಹರಿದು ಹೋಗಲು ಜಾಗವಿಲ್ಲದೆ.. ಮನೆಯೊಳಗೆ ಇಣುಕುತ್ತವೆ. ಅಡುಗೆ ಮನೆಯೊಳಗಿನ ಪಾತ್ರೆಯೆಲ್ಲ ಮನೆಯೊಳಗೆ ಬೀಳುವ ನೀರಿನ ಕೆಳಗಿಟ್ಟರೆ ಠಣ್ ಠಣ್ ಸದ್ದು, ಹೊರಗಿನ ಮಳೆಯ ಸದ್ದನ್ನು ಮರೆಯಾಗಿಸುತ್ತದೆ..
ಕಿಟಕಿಯ ಪರದೆ ಸರಿಸಿ ನೋಡಿದರೆ, ಮಳೆಯ ರಾಗಕ್ಕೆ ತಲೆದೂಗಿ ಬಾಗುವ ಕಂಗು, ಮಳೆಯ ಹನಿಯನ್ನು ನೇವರಿಸಿಕೊಂಡು ಓಲಾಡುವ ತೆಂಗಿನ ಗರಿಗಳು.. ಬಾಳೆಯ ಗೊನೆ ನೆಲವನ್ನು ಅಪ್ಪಿಕೊಳ್ಳಲೋ ಬೇಡವೋ ಎಂಬಂತೆ ಬಾಗಿಕೊಂಡು ಬಿಟ್ಟಿರುತ್ತದೆ.  ಮನೆಯ ಮಾಡಿನಿಂದ ಮುತ್ತಿನಂತೆ ಅಂಗಳವನ್ನಪ್ಪುವ ಮಳೆಹನಿಯು ಎಲ್ಲರಲ್ಲೊಂದಾಗಿ ದಾರಿ ಮಾಡಿಕೊಂಡು, ಪುಟ್ಟ ಹಳ್ಳವ ಸೇರಿಕೊಂಡು ನದಿಯ ಸೇರುವ ರಭಸದಲ್ಲಿ ಓಡುತ್ತಿರುತ್ತದೆ. ಮಳೆ ನೀರ ಮೇಲೆ ಗುಳ್ಳೆ ಬಿದ್ದರೆ ಓಹೋ.. ಮಳೆ ಇನ್ನೂ ಬರುವುದಿದೆ ಎಂದು ಮನೆಯಲ್ಲೇ ಹವಾಮಾನದ ವರದಿ ಒಪ್ಪಿಸುವ ಅಮ್ಮ, ಬೆಚ್ಚಗೆ ಸಾಂತಣಿಯನ್ನೋ, ಹಲಸಿನ ಹಪ್ಪಳ, ಉಂಡ್ಲೂಕವನ್ನೋ ಮೆಲ್ಲುತ್ತಾ ಮಳೆಯನ್ನು ಆಸ್ವಾದಿಸುವ ಆನಂದವೇ ಚಂದ..
ಮಳೆ ಬರುವ ಮುನ್ನ ಒಂದು ಕಥೆಯಾದರೆ, ಮಳೆ ನಿಂತು ಹೋದ ಮೇಲೆ ಇನ್ನೊಂದು ಮಹತ್ಕಾರ್ಯವಿದೆ.. ನಮ್ಮಮ್ಮ ಒಂದು ಕೈಯಲ್ಲಿ ಮುರಿದ ಕೊಡೆ, ಒಂದು ಕೈಯಲ್ಲಿ ಹಾರೆ ಹಿಡಿದುಕೊಂಡು ಅಲ್ಲಲ್ಲಿ ನಿಂತ ನೀರಿಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾಳೆ..  ಅಂಗಳದಲ್ಲಿ ಬಿಟ್ಟಿದ್ದ ಹವಾಯಿ ಚಪ್ಪಲಿಯ ಒಂದು ಜತೆ ನೀರಲ್ಲಿ ತೇಲಿಕೊಂಡು ಹೋಗಿ ಬೇಲಿಯ ಬದಿಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ.. ಪಾದಗುಂಟ ಕಾಣುವ ಅಂಗಳದಲ್ಲಿನ ನೀರು ಹೆಜ್ಜೆ ಇಡುವಂತೆ ಆಹ್ವಾನ ನೀಡುತ್ತದೆ. ಸ್ಲಿಪ್ಪರ್ ಮೆಟ್ಟಿಕೊಂಡು ಚರ್‍ಪರ್ ಸದ್ದು ಮಾಡುತ್ತಾ ಮಳೆ ನೀರಿನಲ್ಲಿ ಆಡುವಾಗ ಅಮ್ಮ ಅಲ್ಲಿಂದಲೇ ಎಚ್ಚರಿಕೆಯ ಕೂಗು ಹಾಕುತ್ತಾಳೆ.. ಬಟ್ಟೆ ಆರಲು ಹಾಕುವ ತಂತಿಯಲ್ಲಿ ಮಳೆಯ ನೀರು ಮುತ್ತಿನಂತೆ ಸಾಲಾಗಿ ನಿಂತಿರುತ್ತದೆ. ಕೈಬೆರಳು ಮೆಲ್ಲನೆ ತಂತಿಯನ್ನು ಮೀಟಿದಾಗ ಮುತ್ತಿನಂತಹ ನೀರು ಅಂಗೈ ಸೇರಿ ಮುಂಗೈಯಿಂದ ಜಾರಿ ಕೆಳಗೆ ಬೀಳುತ್ತದೆ. ಮಳೆ ಬಂದ ಖುಷಿಗೆ ಕಪ್ಪೆಗಳು ಅಲ್ಲಲ್ಲಿ ಜಿಗಿಯುತ್ತಿರುತ್ತದೆ. ಟೊರ್ ಟೊರ್ ಎನ್ನುತ್ತಾ ಇನ್ನೂ ಮಳೆಯಾಗುವ ಸೂಚನೆ ನೀಡುತ್ತದೆ. ಆಗಷ್ಟೇ ಮೌನವಾಗಿ ಅಡಗಿಕೊಂಡಿದ್ದ ವರುಣ ಮತ್ತೆ ತುಂಟನಾಗಿ ಮಳೆ ಹನಿಯ ಚೆಲ್ಲುತ್ತಾನೆ.. ಅಮ್ಮ ಮಳೆಗೆ ಬೈಯುತ್ತಾ ಮತ್ತೆ ಒಳಗೆ ಬರುತ್ತಾಳೆ.. ಮಳೆಗೆ ಬೆಚ್ಚಗೆ ಮಲಗಿಕೊಂಡು ಮಳೆನಿಂತ ಕೂಡಲೇ ಕೈಕಾಲು ಆಡಿಸಲು ಹೊರಗೆ ಹೋಗಿದ್ದ ಬೆಕ್ಕು ಮತ್ತೆ ಕಿಟಕಿಯಿಂದ ಮನೆಯೊಳಗೆ ಜಿಗಿಯುತ್ತದೆ.. ಇನ್ನೊಂದು ಕೆಂಪು ಮಣ್ಣಿನ ಅಚ್ಚೊತ್ತು ಬೆಕ್ಕಿನ ನಾಲ್ಕು ಬೆರಳಿನ ಮುದ್ದಾದ ಪಾದದ ಗುರುತಿನಿಂದ ಕಿಟಕಿಯ ಗೋಡೆಯ ಮೇಲೆ ಬೀಳುತ್ತದೆ..
ಸಂಜೆಯಾದರೆ ಸಾಕು ಎಲ್ಲರ ಮನೆಯ ಬಚ್ಚಲಲ್ಲಿ ಹೊಗೆಯೇಳುತ್ತದೆ.. ಮಳೆಗೆ ಒದ್ದೆಯಾದ ಕಟ್ಟಿಗೆ, ತೆಂಗಿನ ಕಾಯಿ ಚಿಪ್ಪು ಬೆಂಕಿಯೇಳದೆ ಬರೀ ಹೊಗೆಯುಗುಳುತ್ತದೆ. ಸೋಂಟೆಯಿಂದ ಬಚ್ಚಲಿನ ಒಲೆಗೆ ಊದಿ ಊದಿ ಗಂಟಲಿನ ಪಸೆ ಆರಿ, ಕಣ್ಣೆಲ್ಲಾ ಕೆಂಬೂತದ ಕಣ್ಣಿನಂತಾಗುತ್ತದೆ. ಮಳೆಗಾಲದಲ್ಲಿ ಬೇಗ ಸ್ನಾನ ಮಾಡಿದವರಿಗೆ ಬಿಸಿಬಿಸಿ ನೀರು ಸಿಕ್ಕರೆ ಕೊನೆಗೆ ಸ್ನಾನ ಮಾಡುವವರು ಮಾತ್ರ ಒಂದು ಚೆಂಬು ಮಾತ್ರ ನೀರು ಸುರಿದುಕೊಂಡು ಬರಬೇಕಾಗಿರುತ್ತದೆ. ಒಂದೋ ನೀರು ಖಾಲಿಯಾಗಿರುತ್ತದೆ. ಇಲ್ಲವೇ ನೀರು ತಣ್ಣಗಾಗಿಬಿಡುತ್ತದೆ.. ಹೀಗಾಗಿ ಮಳೆಗಾಲದಲ್ಲಿ ಅವಿಭಕ್ತ ಕುಟುಂಬದ ಮಕ್ಕಳಲ್ಲಿ ಸ್ನಾನಕ್ಕೆ ಜಗಳವಾಗುವುದಂತೂ ಸತ್ಯ.

ರಾತ್ರಿಯಾದರೆ ನೀರವವಾಗಿ ಸುರಿವ ಮಳೆ, ಹೊರಗೆ ಜೀರುಂಡೆಗಳ ಝೇಂಕಾರರೊಂದಿಗೆ, ಕಪ್ಪೆಗಳ ವಟರ್ ವಟರ್ ಸದ್ದು ಮಳೆಗಾಲದ ರಾತ್ರಿಯ ಸಂಗೀತ ಸಾಮಾನ್ಯ.. ಕಗ್ಗತ್ತಲಲ್ಲಿ ತೋಟದ ಬದಿಯ ಹಳ್ಳದಲ್ಲಿ ಬೆಳಕೊಂದು ಕಾಣುತ್ತದೆ.. ಅದು ಮಳೆಗೆ ಏಡಿ ಹಿಡಿಯಲು, ಗಾಳ ಹಾಕಲು ಹೋದವರ ಟಾರ್ಚ್ ಬೆಳಕು..
ಆಗಾಗ ಹೋಗುವ ಕರೆಂಟು.. ಮಳೆಗಾಲದಲ್ಲಿ ಕರೆಂಟು ಅಪರೂಪದ ಅತಿಥಿಯಾದರೆ, ಸೊಳ್ಳೆಯಂತೂ ಪ್ರತಿದಿನದ ಅತಿಥಿ.. ಒಮ್ಮೆಗೆ ಕಿವಿಯ ಬಳಿ ಗುಯ್ಯೆಂದು ಗುರುಟು ಹಾಕುವುದನ್ನು ಕೇಳಿಸಿಕೊಂಡರೆ ಅಸಹನೀಯ ಸಿಟ್ಟೊಂದು ಬಂದು ಕಂಬಳಿಯನ್ನು ಕಾಲಿನಿಂದ ತಲೆಯವರೆಗೂ ಎಳೆದುಕೊಂಡು, ಮುಸುಕು ಹಾಕಿ ಮಲಗಿದರೆ, ಏಳುವುದು ಬೆಳಗ್ಗೆಯೇ..ಹೀಗೆ ಬೆಂಗಳೂರಿನ ಮಳೆಯನ್ನು ನೋಡಿದರೆ, ನಮ್ಮೂರ ಮಳೆ, ಬಚ್ಚಲಿನಂತಾಗುವ ನಮ್ಮೂರು ನೆನಪಾಗುತ್ತದೆ..

Wednesday 3 October 2018

ಗದ್ದೆಯಂಚಿನಿಂದ ಮರೆಯಾದ ಹುಲಿಹೆಜ್ಜೆ ಗುರುತು...

ಅಗೋ..ಅಲ್ಲಿ ತಾಸೆಯ ಶಬ್ದ ಕಿವಿಗೆ ಕೇಳುತ್ತಿದೆ.. ಜೊತೆಗೆ ಡೋಲಿನ ಶಬ್ದ ಗದ್ದೆಯ ಅಂಚಿನಲ್ಲಿರುವ ತೋಟದೊಳಗಿಂದ ಮಾರ್ದನಿಸುತ್ತಿದೆ.. ಕಿವಿಯ ತಮಟೆಯೊಳಗೆ ತಾಳಬದ್ಧವಾದ ತಾಸೆ ಡೋಲಿನ ಪೆಟ್ಟು ಅಪ್ಪಳಿಸುತ್ತಿದೆ. ಅಗೋ ಅಲ್ಲಿ ಹಳದಿ ಪಟ್ಟೆ ಕಾಣಿಸುತ್ತಿದೆಯಲ್ಲ ಅದೇ ಹುಲಿ, ಮೈಯೆಲ್ಲ ಹಳದಿ ಬಣ್ಣದ ಬಾಲವಿರುವ ಅಂಗಿಯ ತೊಟ್ಟು, ಕೈಯಲ್ಲಿ ಮುಖವಾಡ ಹಿಡಿದ ಶಾರ್ದೂಲ, ಓ.. ಹಿಂದೆ ಬೇಟೆಗಾರ ಕೂಡ ಇದ್ದಾನಲ್ಲ.. ಅವನ ಬಂದೂಕಿನೊಳಗೆ ಬೆಡಿ ಉಂಟಾ ಇಲ್ವಾ.. ಓ ಇನ್ನೇನು ಗದ್ದೆಯ ಬದಿಯಿಂದ ಮನೆಯ ಬೇಲಿಯೊಳಗೆ ಕಾಲಿಟ್ಟಾಯ್ತು.. ಮನೆಯ ಹೊರಗೆ ಆಡಿಕೊಂಡಿದ್ದ ಚಿಕ್ಕ ಪುಟ್ಟ ಪಿಳ್ಳೆಗಳೆಲ್ಲಾ.. ಮನೆಯ ಕಿಟಕಿಗೆ ನೇತಾಡಿಕೊಂಡಿರುತ್ತವೆ. ಇದು ನಾವು ಚಿಕ್ಕವರಾಗಿದ್ದಾಗ ನವರಾತ್ರಿಯ ದಿನಗಳಲ್ಲಿ ಕಂಡುಬರುತ್ತಿದ್ದ ಚಿತ್ರಣ..

ಆಗಷ್ಟೇ ಮಳೆ ಸುರಿದ ಒದ್ದೆ ಅಂಗಳದಲ್ಲಿ ಹುಲಿಯ ಹೆಜ್ಜೆ ಗುರುತು ಮೂಡುತ್ತದೆ. ಮನೆಯ ಎಲ್ಲಾ ಗೋಡೆಗಳಿಗೂ ತಾಸೆ, ಡೋಲಿನ ಸದ್ದು ಬಡಿದು ಮಾರ್ದನಿಸುತ್ತದೆ, ಮನೆಯೊಳಗಿರುವ ಬೆಕ್ಕು ಅಡುಗೆಕೋಣೆಯ ಒಲೆಯ ಮೂಲೆಯಲ್ಲಿ ಮಿಯ್ಯಾಂವೆನ್ನುತ್ತದೆ.. ಮನೆಯ ನಾಯಿಯಂತೂ ತಾಸೆ ಡೋಲಿನ ಶಬ್ದಕ್ಕಿಂತ ನನ್ನ ಧ್ವನಿಯೇ ಹೆಚ್ಚು ಎಂಬಂತೆ ವೌ... ಎಂದು ಬೊಬ್ಬಿರಿಯುತ್ತದೆ. ಊರಿನಿಂದಾಚೆಗೆ ತಾಸೆಯ ಸದ್ದು ನಿಶ್ಯಬ್ದವಾಗುವವರೆಗೂ ಮನೆಯ ನಾಯಿ ಬೊಗಳುತ್ತಲೇ ಇರುತ್ತದೆ.. ಇದು ಸ್ವಲ್ಪ ಹಿಂದೆ ಅಂದರೆ ಹೆಚ್ಚೇನೂ ಇಲ್ಲ ಸುಮಾರು 22 ವರ್ಷಗಳ ಹಿಂದಿನ ಕಥೆ..
ನವರಾತ್ರಿ ಬಂತೆಂದರೆ ಕರಾವಳಿಯ ಕಲೆ ಮಾರ್ನೆಮಿಯ ವೇಷ ಮನೆಮನೆಗೂ ಭೇಟಿ ನೀಡಿ ಮಕ್ಕಳಿಗೂ ಮನೋರಂಜನೆ ನೀಡುತ್ತಿದ್ದ ಕಾಲವದು.. ಮನೆಮನೆಗೂ ಹುಲಿವೇಷ, ಶಾರ್ದೂಲವೇಷ ಬಂದರೆ, ನವರಾತ್ರಿ ಕಂಪ್ಲೀಟ್ ಎಂದರ್ಥ.. ಸೇರಕ್ಕಿ, ತೆಂಗಿನಕಾಯಿ ಜೊತೆಗೆ ಹತ್ತಿಪ್ಪತ್ತು ರೂಪಾಯಿ ಕೊಟ್ಟರೆ ಎಲ್ಲರಿಗೂ ಸಂತೃಪ್ತಿ.. ಗಂಡು ಹುಡುಗರು ಹುಲಿಯ ಬಾಲವನ್ನು ಹಿಡಿದು ನಿಜವಾದ ಹುಲಿಯೋ ಎಂದು ಟೆಸ್ಟ್ ಮಾಡುತ್ತಾ.. ತೋಟದ ಅಂಚಿನವರೆಗೂ ಹುಲಿವೇಷದ ತಂಡವನ್ನು ಬೀಳ್ಕೊಟ್ಟು ಬರುವುದಿತ್ತು.. 
ಮತ್ತೆ ನವರಾತ್ರಿ ಬರುತ್ತಿದೆ...ಆದರೀಗ ಕಾಲ ಬದಲಾಗಿದೆ.. ಶಾರ್ದೂಲ, ಹುಲಿವೇಷವನ್ನು ಅರಸಿಕೊಂಡು ನಾವೇ ಪೇಟೆಗೆ ಹೋಗಬೇಕು.. ಈಗೀಗ ಪೇಟೆಯಿಂದ ಹಳ್ಳಿಗೆ ಹುಲಿಯೂ ಕೆಳಗಿಳಿಯುತ್ತಿಲ್ಲ.. 
ವರ್ಷದಲ್ಲಿ ಬೇರೆಲ್ಲಾ ಹಬ್ಬ, ಜಾತ್ರೆ, ಕಾರ್ಯಕ್ರಮಗಳಿಗೂ ಹುಲಿವೇಷವಿದ್ದರೂ, ಮಾರ್ನೆಮಿಯ ಹುಲಿ ವೇಷಕ್ಕಿರುವ ಗತ್ತು, ಗಮ್ಮತ್ತೇ ವಿಶೇಷವಾದುದು.. ಮಾರ್ನೆಮಿಯವೇಷ ನಮ್ಮ ಮನೆಗೆ ಬರದೇ ಎಷ್ಟು ನವರಾತ್ರಿ ಕಳೆಯಿತೋ ಏನೋ ಗೊತ್ತಿಲ್ಲ.. ಮನೆಯ ಕಿಟಕಿಯಿಂದ ಇಣುಕಿ ನೋಡುವ ಖುಷಿ ಈಗಿಲ್ಲ.. ಗದ್ದೆಗಳೂ ತೋಟವಾಗಿ ಪರಿವರ್ತನೆಯಾಗಿದೆ... ಗದ್ದೆಯ ಎದೆಯ ಮೇಲೆಯ ಕೆಂಪಾದ ಮಣ್ಣಿನ ರಸ್ತೆಗಳು ಮಲಗಿವೆ.. ಗದ್ದೆಗಳು ಈಗಿನ ಹುಡುಗರ ಕ್ರಿಕೆಟ್ಟು ಮೈದಾನಗಳಾಗಿವೆ.. ಬಾಳೆಯ ಗಿಡಗಳು ನಗುತ್ತಿವೆ.. ಕೆಸರಿನ ನೆಲ ಗಟ್ಟಿಯಾಗಿದೆ..! 

Thursday 27 September 2018

ಸಿಕ್ಕು ಬಿಡಿಸುವ ಹೊತ್ತು..

ಬೆಳಗ್ಗೆ ಆಫೀಸಿಗೆ ಹೊರಡುವ ಧಾವಂತದಲ್ಲಿ ಕೂದಲು ಭರ ಭರನೆ ಕೂದಲು ಬಾಚಿಕೊಳ್ಳುತ್ತಿದೆ. ಹಣಿಗೆಯಲ್ಲಿ ಸಿಕ್ಕುಹಾಕಿಕೊಂಡ ಸಿಕ್ಕಾದ ಕೂದಲು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿತ್ತು.. ಮತ್ತೆ ಯೋಚನೆಗೆ ಬಿದ್ದೆ.. 

ಚಿಕ್ಕವಳಿರುವಾಗ ನಮ್ಮಮ್ಮ ಬೇಡವೆಂದರೂ ಕೇಳದೆ ಮನೆಯ ಮುಂದಿನ ಮೆಟ್ಟಿಲ ಮೇಲೆ ಕೂರಿಸಿಕೊಂಡು ತಲೆತುಂಬಾ ಶುದ್ಧ ತೆಂಗಿನ ಎಣ್ಣೆ(ಮನೆಯ ಕೊಬ್ಬರಿಯಿಂದ ತೆಗೆದ) ಹಾಕಿ, ಬಾಚಿ ಎರಡು ಜಡೆ ಹೆಣೆದು ತೆಂಗಿನಷ್ಟು ಉದ್ದವೋ? ಕಂಗಿನಷ್ಟು ಉದ್ದವೋ ಎಂದು ಕೇಳುತ್ತಿದ್ದಳು.. ಕಂಗಿನಷ್ಟು ಉದ್ದವಾಗಲಿ ಎಂದು ಎದ್ದು ಓಡಿ ಬಿಡುತ್ತಿದೆ. ಹಣೆಯ ಮೇಲೆ ಎಣ್ಣೆಯ ಪಸೆ ಹರಿದು ಪಾಂಡ್ಸ್ ಪೌಡರಿನೊಂದಿಗೆ ಬೆರೆತು ಹೋಗುತ್ತಿತ್ತು..
ಸಿಕ್ಕು ಬಿಡಿಸುವಾಗಲೆಲ್ಲ ಅಮ್ಮ ಹೇಳುತ್ತಿದ್ದ ಬುದ್ಧಿ ಮಾತುಗಳು ಜೀವನದ ದಾರಿಯನ್ನು ಕಲಿಸಿದ್ದವು. ಅಮ್ಮ ಬಿಚ್ಚಿಡುತ್ತಿದ್ದ ಅವಳ ನೋವಿನೆಳೆಗಳು ಮನಸ್ಸಿನಲ್ಲೇ ಭದ್ರವಾಗಿ ಹೆಣೆದುಕೊಳ್ಳುತ್ತಿದ್ದವು. ನಾನು ಅವಳಂತಾಗಬಾರದೆಂದು ಧೃಢನಿಶ್ಚಯ ಮಾಡಿಕೊಂಡಿದ್ದೆ. ನಾನು ಅಮ್ಮ ಇನ್ನಷ್ಟು ಆತ್ಮೀಯವಾಗಲು, ಇನ್ನಷ್ಟು ಭಾವನೆಗಳನ್ನು ಹಂಚಿಕೊಳ್ಳಲು, ಶಾಲೆಯ ನೆನ್ನೆಯ ವರದಿಗಳನ್ನೆಲ್ಲಾ ಒಪ್ಪಿಸಲು ಕೂದಲು ಬಾಚುವ ಕಾರ್ಯಕ್ರಮವು ವೇದಿಕೆಯಾಗುತ್ತಿತ್ತು ಎಂದರೆ ತಪ್ಪಾಗಲಾರದು.
ಈಗಿನ ಕಾಲದಲ್ಲಿ ಮಕ್ಕಳು ಶಾಲೆಗೆ ಹೊರಡುವುದೇ ಬೆಳ್ಳಂಬೆಳಗ್ಗೆ, ಈಗಿನ ಅಮ್ಮಂದಿರಿಗೆ ಮಕ್ಕಳ ತಲೆಬಾಚುವುದಕ್ಕೂ ಪುರುಸೋತ್ತು ಇರುವುದಿಲ್ಲ. ತರಾತುರಿಯಲ್ಲೇ ಸ್ನ್ಯಾಕ್ಸ್ ಬಾಕ್ಸ್ ಸೇರಿ ಲಂಚ್ ಬಾಕ್ಸ್ ಮಾಡುವುದರೊಳಗೆ ಗೇಟಿನ ಮುಂದೆ ಸ್ಕೂಲ್ ವ್ಯಾನ್ ಬಂದು ಪೀಪಿ ಊದುತ್ತಿರುತ್ತದೆ. ಸಂಜೆಯಾದರೆ ಟ್ಯೂಷನ್ ಕ್ಲಾಸ್ ಮತ್ತೆ ಮಗಳು ಮನೆ ಸೇರುವುದು ರಾತ್ರಿ ಊಟದ ವೇಳೆಗೆ, ಮತ್ತೆ ಬೆಳಗಾದರೆ ಅದೇ ರಾಮಾಯಣ, ಮಗಳ ಸೊಂಪಾದ ಕೂದಲು ಎಣ್ಣೆ ಕಾಣದೇ ಕಂಗೆಟ್ಟು ಹೋಗಿರಬಹುದು..! ಜಿಡ್ಡಿಲ್ಲದ ಬಾಚಣಿಗೆಯೂ ಪಳಪಳನೆ ಕೂದಲ ಅಣಕಿಸುತ್ತಿರಬಹುದು..!
ಕಾಲೇಜು ಹುಡುಗಿಯರ ಕೂದಲ ವಿಷಯಕ್ಕೆ ಬಂದರೇ ಹೇಳುವುದೇ ಬೇಕಾಗಿಲ್ಲ, ಕಂಡೀಷನರ್ ಹಚ್ಚಿಕೊಂಡರೆ ಸಾಕು, ಗಾಳಿಯೊಂದಿಗೆ ಮಾತನಾಡಲು ಶುರು.. ಅಮ್ಮಂದಿರಿಗಂತೂ ಕೆಲಸವೇ ಇಲ್ಲ. ಆಗೋಮ್ಮೆ ಈಗೊಮ್ಮೆ ಎಣ್ಣೆ ಹಚ್ಚಲು ಹೋದರೆ ಅಯ್ಯೋ ಎಣ್ಣೆ ಹಚ್ಚಿಕೊಂಡು ಹೋದರೆ ಹಳ್ಳಿ ಹುಡುಗಿಯೆನ್ನುತ್ತಾರೆನ್ನುವ ಧಿಮಾಕು..! (ಕೂದಲಿನಿಂದಲೇ ಕಣ್ಸೆಳೆಯುವ ನಮ್ಮ ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿನ ಮಲೆಯಾಳಿ ಸುಂದರಿಯರÀ ಕಪ್ಪಾದ ಎಣ್ಣೆಯಿಂದ ತೋಯುವ ಕೂದಲರಾಶಿಯನ್ನೊಮ್ಮೆ ಇವರು ನೋಡಬೇಕು)
ಇನ್ನು ಅಮ್ಮಂದಿರಿಗೆ ಮಗಳೊಂದಿಗೆ ಮಾತನಾಡಲು ಸಮಯವೆಲ್ಲಿ..? ಕಾಲೇಜಿನಿಂದ ಬಂದರೆ ಸಾಕು ಎಡಗೈಯಲ್ಲಿ ಫೋನ್ ಹಿಡಿದುಕೊಂಡು, ತಲೆತಗ್ಗಿಸಿಯೇ ತಿನ್ನುವ ಕಾರ್ಯ ಮಾಡುವವರಿಗೆ ಅಮ್ಮನ ನೋವು ಕಾಣದು..! ಇನ್ನು ಅಮ್ಮನ ಕಿವಿಮಾತು ಕೇಳಿಸಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ ಯಾಕೆಂದರೆ, ಎರಡೂ ಇಯರ್‍ಫೋನ್‍ಗಳಿಂದ ಕಿವಿಯೂ ಮುಚ್ಚಿ ಹೋಗಿರುತ್ತದೆ..!
ಮನಸಾದರೆ ಒಮ್ಮೆ ಅಮ್ಮನ ಮುಂದೆ ಕೂದಲು ಹರವಿಬಿಡಿ, ಎಣ್ಣೆಯು ನೆತ್ತಿಗೆ ತಾಕಿದಂತೆ ಮನಸೂ ತಂಪಾಗುತ್ತದೆ.. ದಿನನಿತ್ಯದ ಜಂಜಾಟಗಳಲ್ಲಿ ಸಿಕ್ಕು ಸಿಕ್ಕಾಗಿ ಮುದುಡಿಕೊಂಡಿರುವ ಮನಸು ಹಾಯಾಗಿಬಿಡುತ್ತದೆ. ಜಿಡ್ಡು ಮೆತ್ತಿಕೊಂಡ ಬಾಚಣಿಗೆ ನೋಡಿ ಮತ್ತೆ ಕಪ್ಪು ಕೂದಲು ಒಮ್ಮೆ ನಕ್ಕುಬಿಡುತ್ತದೆ..!
ಅಯ್ಯೋ.. ಆಫೀಸಿಗೆ ಟೈಮ್ ಆಯ್ತು ಎಷ್ಟೊತ್ತು ಮಿರರ್ ಮುಂದೇನೆ ಕೂತಿರ್ತೀಯಾ.. ಅನ್ನೋ ಪತಿಯ ಕೂಗು ಕೇಳಿ..ಮತ್ತೆ ಎಚ್ಚೆತ್ತುಕೊಂಡೆ.. ಅಮ್ಮ ಮತ್ತೆ ನೆನಪಾದಳು..

Thursday 20 September 2018

ಬೆಂಗಳೂರ ಟಾರು ರಸ್ತೆಯಲ್ಲಿ ಕೆ.ಎ.19..

ಹೇ..ಕೆ.ಎ.19.. ಹೌದು ಬೆಂಗಳೂರಿನ ಟಾರು ರಸ್ತೆಗಳಲ್ಲಿ ಕೆ.ಎ.19 ನಂಬರ್ ಪ್ಲೇಟ್ ಇರುವ ಯಾವುದೇ ವಾಹನಗಳು ಕಂಡರೆ ಸಾಕು, ನನ್ನಂತಿರುವ ಕರಾವಳಿಗರಿಗೆ ನಮ್ಮೂರ ಆತ್ಮೀಯರನ್ನೇ ನೋಡಿದಂತಾಗಿ ಹೃದಯ ಅರಳುತ್ತದೆ..

ಕೆಲಸವನ್ನರಸಿಕೊಂಡು ಕರಾವಳಿಯಿಂದ ಬೆಂಗಳೂರಿಗೆ ಬಂದ ತುಳುವರು ಬೆಂಗಳೂರಿನ ಅಲ್ಲಲ್ಲಿ ಚದುರಿಕೊಂಡು, ಬೆಂಗಳೂರ ಜನರ ಮಧ್ಯೆ ಬೆರೆತು ಹೋಗಿರುವಾಗ ಕರಾವಳಿಗರೆಂದು ಗುರುತು ಹಿಡಿಯಲು ಸಾಧ್ಯವಾಗುವುದು ಕೆ.ಎ.19 ಅಥವಾ ತಾಯಿ ಭಾಷೆ ತುಳುವಿನ ಮೂಲಕ..
ಆಫೀಸು, ಶಾಪಿಂಗ್ ಅಂತ ಪತಿಯೊಂದಿಗೆ ಗಾಡಿಯಲ್ಲಿ ಹೊರಟರೆ, ಕೆ.ಎ. 19 ಕಂಡ ತಕ್ಷಣ ಹೇ.. ಮಂಗಳೂರಿನವರು ಎಂದು ಕುಣಿದಾಡಿದಾಕ್ಷಣ ನನ್ನ ಪತಿವರ್ಯ ಹೋ ಹೌದಾ.. ಹಾಗಾದ್ರೆ ನಿಮ್ಮ ಸಂಬಂಧಿಕರೇ ಇರಬಹುದು.. ಹತ್ತಿರ ಹೋಗಿ ಗಾಡಿ ನಿಲ್ಲಿಸ್ತೀನಿ.. ಮಾತಾಡು ಅಂತ ಛೇಡಿಸುವುದುಂಟು..
ಶಾಪಿಂಗ್ ಸಂತೆಯಲ್ಲಿ ಅಲೆದಾಡುವಾಗಲೂ ಅಷ್ಟೇ ತುಳು ಭಾಷೆ ಕೇಳಿಸುತ್ತವೆಯೇನೋ ಎಂದು ಕಿವಿ ‘ಕೊಂಡೆ’ ಮಾಡಿಕೊಂಡು ಆಲಿಸಿದ್ದುಂಟು.. ತುಳು ಕಿವಿಗಪ್ಪಳಿದಾಕ್ಷಣ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಅದ್ಯಾಕೋ ಗೊತ್ತಿಲ್ಲ..
ಬೆಂಗಳೂರಲ್ಲಿದ್ದರೂ ತುಳು, ಕರಾವಳಿಯ ಕಡೆಗೆ ಮನಸ್ಸು ಹಾತೊರೆಯುತ್ತದೆ. ಎಷ್ಟೇ ಬಿಸಿಲಿದ್ದರೂ, ಬೆವರು ಧಾರೆಯಂತೆ ಹರಿದರೂ(ಬೆಂಗಳೂರಿಗರಾದ ನನ್ನವರು ಬೇಸಿಗೆಯಲ್ಲಂತೂ ಮಂಗಳೂರಿಗೆ ಬರುವುದಿಲ್ಲವೆಂದು ಶಪಥ ಮಾಡಿದ್ದಾರೆ) ಬಯಸುವುದು ಮಾತ್ರ ನಮ್ಮ ನೆಲ ಕರಾವಳಿಯನ್ನು..
ಮೊನ್ನೆಯಷ್ಟೇ ಫೇಸ್‍ಬುಕ್ಕಿನಲ್ಲಿ ಮಂಗಳೂರು ಮಲ್ಲಿಗೆಯ ಚಿತ್ರವನ್ನು ನೋಡಿದಾಕ್ಷಣ ಬೆಂಗಳೂರು ಬೀದಿಯಲ್ಲಿ ಮಾರುವ ಮಲ್ಲಿಗೆಯ ರಾಶಿಯಲ್ಲಿ ಮಂಗಳೂರು ಮಲ್ಲಿಗೆಯ ಘಮವನ್ನು ಹುಡುಕಿ ಸೋತುಹೋದೆ, ನಮ್ಮ ಮಂಗಳೂರು ಮಲ್ಲಿಗೆಯ ಘಮ ಯಾವ ಮಲ್ಲಿಗೆಗೂ ಇಲ್ಲವೆಂದು ಅಂದುಕೊಂಡೆ..
ಬೇಸರದ ಸಂಗತಿಯೆಂದರೆ ಎಷ್ಟೋ ಜನ ತುಳು ಭಾಷಿಗರು ಬೆಂಗಳೂರಿನಲ್ಲೇ ನೆಲೆಯೂರಿಕೊಂಡು ಮನೆಯಲ್ಲೇ ಮಕ್ಕಳೊಂದಿಗೆ ಕನ್ನಡ ಭಾಷೆ ಮಾತನಾಡುತ್ತಿದ್ದಾರೆ. ಅಂದರೆ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ತಮ್ಮ ಮಕ್ಕಳಿಗೆ ತುಳು ಭಾಷಿಕರು ಕಲಿಸುವುದು ಕನ್ನಡವನ್ನು.. ಹಾಗಂತ ಕನ್ನಡ ಕಲಿಸಬಾರದೆಂದು ಹೇಳುವುದಿಲ್ಲ. ಕನ್ನಡದೊಂದಿಗೆ ತುಳು ಭಾಷೆಯನ್ನೂ ಕಲಿಸಿದರೆ, ಊರಲ್ಲಿರುವ ಅಜ್ಜ ಅಜ್ಜಿಯಂತೂ ಬೆಂಗಳೂರಲ್ಲಿದ್ರೂ ನನ್ನ ಪುಳ್ಳಿ ತುಳು ಮಾತನಾಡುವುದನ್ನು ಕಲಿತಿದ್ದಾಳೆ/ ಕಲಿತಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು..
ತೆಲುಗು ಭಾಷಿಕರಾದ ನನ್ನ ಪತಿರಾಯ ಎರಡೇ ಎರಡು ಪದ ತುಳು ಕಲಿತಿದ್ದಾರೆ. ಎಂಚ ಉಲ್ಲರ್?. ವನಸ್ ಆಂಡೆ?, ಇಷ್ಟೇ ನನ್ನ ಅಜ್ಜಿಯೊಂದಿಗೆ ಮಾತನಾಡಲು...!

Saturday 4 August 2018

ಫ್ರೆಂಡ್‍ಶಿಪ್ ಡೇ ನೆಪದಲ್ಲಿ..

ಆಗಸ್ಟ್ ಮೊದಲನೇ ಭಾನುವಾರ ಬಂದರೆ ಸಾಕು ಎಲ್ಲರಿಗೂ ಎಲ್ಲೆಲ್ಲೋ ಇರುವ ಗೆಳೆಯರು ನೆನಪಾಗಿ, ವಾಟ್ಸ್ಯಾಪ್‍ನಲ್ಲೇ ಒಂದು ಮೆಸೇಜ್ ಹರಿಯಬಿಟ್ಟು ಫ್ರೆಂಡ್‍ಶಿಪ್ ಡೇ ಆಚರಿಸಿಕೊಳ್ಳುತ್ತಾರೆ.. ನನ್ನದೊಂದು ಪ್ರಶ್ನೆಯೆಂದರೆ ಗೆಳೆತನ ಆಚರಿಸಿಕೊಳ್ಳಲು ಒಂದು ದಿನ ಬೇಕೆ?. ಅಥವಾ ಒಂದು ದಿನ ಸಾಕೇ..?

ನನಗನಿಸುವ ಹಾಗೆ ಗೆಳೆತನವೆಂದರೆ ಅದೊಂದು ಆತ್ಮೀಯ ಬಾಂಧವ್ಯ. ಗೆಳೆತನಕ್ಕೆ ಆಚರಣೆಯೊಂದು ಬೇಕಿಲ್ಲ. ಪಾಶ್ಚ್ಯಾತ್ಯ ನೆಲದಿಂದ ಎರವಲು ಪಡೆದ ‘ಫ್ರೆಂಡ್‍ಶಿಪ್ ಡೇ’ ಈ ಹಿಂದೆ ಕೇವಲ ಗ್ರೀಟಿಂಗ್ಸ್ ಕಾರ್ಡ್ ಬೇಡಿಕೆ ಹೆಚ್ಚಿಸಲು ಕಂಡುಕೊಂಡ ಉಪಾಯ ಅಷ್ಟೇ..
ನಾವು ಚಿಕ್ಕದಿನಿಂದ, ಬೆಳೆದು ಬಂದಾಗಿನಿಂದ ನಮ್ಮ ಜೊತೆಗೇ ಬೆಳೆದ, ಆಡಿದ, ನಗಿಸಿದ ಗೆಳೆಯರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಕಷ್ಟದಲ್ಲೂ ಕೈಹಿಡಿದು ನಡೆಸಿದ ಗೆಳೆಯ, ಸಣ್ಣಕಾರಣಕ್ಕೆ ಮುನಿಸಿಕೊಂಡು, ಕ್ರಮೇಣ ಎಂದಿಗಿಂತಲೂ ಹೆಚ್ಚು ಮನಸ್ಸಿಗೆ ಆತ್ಮೀಯವಾದ ಸ್ನೇಹಿತೆ, ಕಣ್ಣೀರು ಒರೆಸಿ ಆತ್ಮವಿಶ್ವಾಸ ಮೂಡಿಸಿದ ಗೆಳೆಯರು ಹೀಗೆ ನಮ್ಮ ಜೀವನದಲ್ಲಿ ಗೆಳೆಯರಿಗೊಂದು ವಿಶೇಷ ಸ್ಥಾನವನ್ನು ನೀಡಿರುತ್ತೇವೆ. ಹೈಸ್ಕೂಲ್‍ನಲ್ಲಿ ಒಟ್ಟಿಗಿದ್ದು ನಂತರ ಅನಿವಾರ್ಯ ಕಾರಣಗಳಿಂದ ದೂರಾಗಿ 30- 40 ವರ್ಷಗಳ ನಂತರವೂ ಆ ಗೆಳೆಯನಿಗೊಂದು ಕಾಲ್ ಮಾಡಿದರೆ, ಧ್ವನಿ ಕೇಳಿ ಹೆಸರು ನೆನಪಾಗದಿದ್ದರೂ ರೂಪ ಮಾತ್ರ ಆ ಗೆಳೆಯನಿಗೆ ನೆನಪಿರುತ್ತದೆ. ಅದುವೇ ಗೆಳೆತನ..
ಗೆಳೆಯನನ್ನು ನೆನಪಿಸಿಕೊಳ್ಳಲು ಆಗಸ್ಟ್ ಮೊದಲನೇ ಭಾನುವಾರವೇ ಬೇಕಿಲ್ಲ. ನೆನಪಾದಾಗ ಕಾಲ್ ಮಾಡಿ, ಅಥವಾ ಭೇಟಿ ಮಾಡಿ ಆ ಕ್ಷಣದಲ್ಲಿ ಗೆಳೆಯ ಅಥವಾ ಗೆಳತಿಗೆ ಸಿಗುವ ಖುಷಿ ಎಂದಿಗೂ ಸಿಗಲಾರದು. ಆಗಸ್ಟ್‍ವರೆಗೂ ಕಾಯದಿರಿ.. ಪ್ರತಿದಿನ ಕೆಲಸ ಮುಗಿಸಿ ಬಂದು ವಾಟ್ಸ್ಯಾಪ್ ಸ್ಟೇಟಸ್ ಇಣುಕುವ, ಫೇಸ್‍ಬುಕ್‍ನಲ್ಲಿ ಮುಳುಗುವ ಬದಲು ಆತ್ಮೀಯ ಗೆಳೆಯರಿಗೊಂದು ಮೆಸೇಜ್ ಹಾಕಿ. ಓಹ್ ನನ್ನ ಗೆಳೆಯ ನನ್ನ ಮರೆತಿಲ್ಲ ಎಂಬ ಭಾವ ಹಸಿರಾಗಿರುತ್ತದೆ..

Wednesday 1 August 2018

ಬದುಕು ಬದಲಾಗಬಹುದು..!



ದುವೆಯ ಇನ್ವಿಟೇಷನ್ ಕೊಡಲೆಂದು ಸ್ಕೂಲ್, ಕಾಲೇಜು ಕ್ಲಾಸ್‍ಮೇಟ್‍ಗಳನ್ನೆಲ್ಲ ಫೇಸ್‍ಬುಕ್, ವಾಟ್ಸ್ಯಾಪ್ ಗ್ರೂಪ್‍ಗಳಲ್ಲಿ ಇರುವ ಸ್ನೇಹಿತರ ಫೋನ್ ನಂಬರ್‍ಗಳನ್ನೆಲ್ಲ ಕಲೆಹಾಕುತ್ತಿದ್ದೆ.. ಆಗ ನೆನಪಾಗಿದ್ದೇ ಆಕೆ.. ಹೌದು ಮುದ್ದು ಮುಖದ, ಉದ್ದ ಜಡೆಯ ಮೂಗುತಿ ಸುಂದರಿಯ ಬಗ್ಗೆ.. ಹೌದು ಬಿಎ ಮಾಡುತ್ತಿದ್ದಾಗ ಒಂದೇ ಡೆಸ್ಕ್‍ನಲ್ಲಿ ಕುಳಿತು ಗೀಚುತ್ತಿದ್ದವರು. ಕಾಲೇಜಿನ ಗಾಸಿಪ್ಪುಗಳ ಕುರಿತು ಮಾತನಾಡುತ್ತಿದ್ದವರು..ಕ್ಲಾಸ್ ನಡೆಯುತ್ತಿರುವಾಗಲೇ ಚೀಟಿಯಲ್ಲಿ ಬರೆದು ಮಾತನಾಡುತ್ತಿದ್ದ ಗೆಳೆತನವದು.... ಅದೊಂದು ದಿನ ಆಕಸ್ಮಿಕವಾಗಿ ಆಗಿದ್ದ ಒಬ್ಬ ಹುಡುಗನ ಭೇಟಿ ಆಕೆಯ ಜೀವನವನ್ನೇ ಬದಲಾಯಿಸಿತ್ತು. ಮನೆಯಲ್ಲೂ ಶಿಸ್ತಿನಿಂದಲೇ ಬೆಳೆದ ಆಕೆಗೆ ಪ್ರೀತಿಯ ಬಂಧನ ಎಲ್ಲ ಕಟ್ಟುನಿಟ್ಟಿನ ಬಂಧನಗಳನ್ನು ಬಿಡಿಸಿತ್ತು..ಮನೆಯ ವಿರೋಧಕ್ಕೂ ತಲೆಬಾಗದೇ ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿಬಿಟ್ಟಿದ್ದಳು..ಮನೆಯವರಿಂದ ದೂರವಿದ್ದುಬಿಟ್ಟಿದ್ದಳು ಇದಿಷ್ಟೇ ವಿಷಯಗಳು ನನಗೆ ಗೊತ್ತಿದ್ದಿದು.

ಫೇಸ್‍ಬುಕ್‍ನಲ್ಲಿ ತಡಕಾಡುತ್ತಿದ್ದಾಗ ಹೆಸರು ಕಾಣಿಸಿ ತಕ್ಷಣ ಒಂದು ಮೆಸೇಜ್ ಹಾಕಿದೆ ಹಾಗೇ ರಿಪ್ಲೈಗಳು ಮುಂದುವರಿಯಿತು.. ಎಲ್ಲಿದ್ದೀಯಾ ಎಂದು ಕೇಳಿದಾಕ್ಷಣ ಬಂದ ಉತ್ತರ ಬೆಂಗಳೂರು... ಮದುವೆ ಎಂದಾಕ್ಷಣ ಬಂದ ಉತ್ತರ ಡಿವೋರ್ಸ್.. ಆ ಮಾತು ಕೇಳಿ ಅರೆಕ್ಷಣ ದಿಗ್ಭ್ರಮೆಯಾಗಿರುವುದಂತೂ ಸುಳ್ಳಲ್ಲ. . .ಏನಾಗಿತ್ತು ಅಂದಾಗ ಎಲ್ಲಾ ವಿಷಯವನ್ನು ಕಾಲ್ ಮಾಡಿ ವಿವರಿಸಿದ್ದಳು.. ಹೌದು ಅದೊಂದು ಅಪಘಾತ ನನ್ನ ಜೀವನವನ್ನೇ ಬದಲಾಯಿಸಿತ್ತು. ಇಷ್ಟೆಲ್ಲಾ ನಡೆದಿದ್ದು ನನ್ನ ಜೀವನದಲ್ಲೇನಾ ಎನ್ನುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದಳು.. ಕಣ್ಣಂಚಿನಲ್ಲಿ ನೀರು ನನಗರಿವಿಲ್ಲದಂತೆಯೇ ನೆಲ ಸೇರಿತ್ತು...
“ಬಸ್ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟಾಗಿ ಬದುಕುಳಿಯುವುದು ಸಂಶಯವೇನೋ ಎಂಬಂತೆ, ದುರಾದೃಷ್ಟವಶಾತ್ ಮತ್ತೆ ಬದುಕಿ ಬಂದಿದ್ದ..’ ದುರಾದೃಷ್ಟವಶಾತ್ ಎನ್ನುವುದೇ ಉಚಿತವೇನೋ..? ಬದುಕು, ಯೋಚನೆಗಳು ಬದಲಾಗಿತ್ತು. ಕೆಲವು ನೆನಪುಗಳೆಲ್ಲ ಸ್ವಲ್ಪ ಕಾಲ ಅವನ ಮನಸ್ಸಿನಿಂದ ಮಾಸಿಹೋಗಿತ್ತು.. ಅಪಘಾತದ ತೀವ್ರತೆಗೆ.. ಆಸ್ಪತ್ರೆಯಿಂದ ಬಂದ ನಂತರದಲ್ಲಿ ಅವನ ಯೋಚನೆಗಳು ಬದಲಾಗಿತ್ತು. ಪ್ರೀತಿ ಅಲ್ಪಸ್ವಲ್ಪವೇ ಕಡಿಮೆಯಾಗಿತ್ತು. ಪ್ರೀತಿಯಿಂದಿದ್ದ ಅನೋನ್ಯ ಸಂಸಾರದಲ್ಲಿ ಸಂಶಯದ ಅಲೆ ಎದ್ದಿತ್ತು. ಒಮ್ಮೊಮ್ಮೆ ಬೆಳಗ್ಗೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಪ್ರೀತಿಯ ಪತಿಯ, ವರ್ತನೆ ರಾತ್ರಿಯಾದಂತೆ ಬದಲಾಗುತ್ತಿತ್ತು. ರಾತ್ರಿ ಮೂರು ಗಂಟೆಯವರೆಗೂ ನಡೆಯುತ್ತಿದ್ದ ಜಗಳದಲ್ಲಿ ಅತ್ತೆಮಾವ, ನೆರೆಮನೆಯವರು ಮೂಕಪ್ರೇಕ್ಷಕರಾಗುತ್ತಿದ್ದರು.. ನಾನು ಹೊಡೆಸಿಕೊಳ್ಳುತ್ತಿದ್ದೆ..”ನೋವಿನಿಂದ ಕೂಡಿದ ಅವಳ ಮಾತು.. ಎದೆಯನ್ನು ಕರಗಿಸಿತ್ತು.. ಏನೂ ಹೇಳಲಾಗದೇ ಹೂಂಗುಡುತ್ತಿದ್ದೆ..
“ಮೂರು ತಿಂಗಳು ನರಕದಲ್ಲೇ ಕಳೆದಿದ್ದೆ, ಬೆಳಗಿನಿಂದ ರಾತ್ರಿಯವರೆಗೂ ದುಡಿತ, ರಾತ್ರಿ ಮೂರು ಗಂಟೆಯವರೆಗೂ ಹೊಡೆತ.. ಕಣ್ಣೀರಿನಿಂದ ಒದ್ದೆಯಾದ ತಲೆದಿಂಬು ಮಾತ್ರ ನನಗೆ ಸಾಂತ್ವಾನ ನೀಡುತ್ತಿತ್ತು.. ಅತ್ತೆಮಾವನಂತೂ ಮಗನ ಕ್ರೌರ್ಯವನ್ನು ನೋಡಿ ನಿಲ್ಲುತ್ತಿದ್ದರೇ ಹೊರತು ಮಧ್ಯ ಬಂದು ತಡೆಯುತ್ತಿರಲಿಲ್ಲ. ಎರಡು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದೆ..ಮತ್ತೆ ಬದುಕಿದ್ದೆ.. ಆದರೂ ನನ್ನ ತವರು ಮನೆಗಂತೂ ಒಂದು ವಿಷಯವನ್ನೂ ಹೇಳದೆ ಮುಚ್ಚಿಟ್ಟಿದೆ. ಕೊನೆಗೂ ಅಣ್ಣನ ಸ್ನೇಹಿತನಿಂದ ಅಣ್ಣನಿಗೆ ವಿಷಯ ತಿಳಿದು ತಂಗಿಯನ್ನು ಉಳಿಸಲೆಂದು ಎಲ್ಲ ಕೋಪವನ್ನು ಬದಿಗೊತ್ತಿ, ಕಾಳಜಿಯಿಂದ ಓಡಿ ಬಂದಿದ್ದ.. ಅದೇ ಮಮಕಾರದಿಂದ ಇವತ್ತು ನಾನು ಬದುಕುಳಿದಿದ್ದೇನೆ. ಬಂದು ನನ್ನ ಕಾಲಮೇಲೆ ನಾನು ನಿಂತು ಬದುಕನ್ನು ಕಟ್ಟಿಕೊಳ್ಳಲು ಹೊರಟಿದ್ದೇನೆ.. ಆ ಕಾಲದಲ್ಲಿ ಒಂದು ರೀತಿಯಲ್ಲಿ ನೋಡುತ್ತಿದ್ದ, ಬಾಯಿಗೊಂದು ಮಾತನಾಡುತ್ತಿದ್ದ ಊರು ಇಂದು ಬೆಂಬಲ ನೀಡುತ್ತಿದೆ. ಅಮ್ಮ, ಅಪ್ಪ, ಅಣ್ಣ, ಅಕ್ಕ ಬೆನ್ನಹಿಂದಿದ್ದಾರೆ.. ಡಿವೋರ್ಸ್‍ಗೆ ಅಪ್ಲೈ ಮಾಡಿದ್ದೇನೆ..ನನ್ನ ಜೀವನವನ್ನು ಹಿಂತಿರುಗಿ ನೋಡಲೂ ಇಷ್ಟವಿಲ್ಲ.. ಯಾರ ಸಹಾಯವಿಲ್ಲದೆಯೂ ನಾನು ಬದುಕಬಲ್ಲೆ, ಪ್ರೀತಿ ನನ್ನ ಜೀವನದಲ್ಲಿ ಆಟವಾಡಿದೆ.,. ಎಚ್ಚೆತ್ತುಕೊಂಡಿದ್ದೇನೆ.. ಮುಂದೆ ನಡೆಯುತ್ತೇನೆ..” ಎನ್ನುವ ಧೃಡ ವಿಶ್ವಾಸ ಅವಳಲ್ಲಿತ್ತು..
ಹೌದು.. ಇಂದು ಕಂಡ ಸಂತೋಷ ನಾಳೆ ನಮ್ಮ ಬದುಕಲ್ಲಿ ಹುಸಿಯಾಗಬಹುದು.. ಖುಷಿಯಾಗಿದ್ದ ಬದುಕಲ್ಲಿ ಸುನಾಮಿಯೇಳಬಹುದು..ಕೆಲವೊಂದು ಆಕಸ್ಮಿಕ ಅಪಘಾತ ಬದುಕನ್ನೇ ಬದಲಾಯಿಸಬಹುದು.. ನಿಮ್ಮ ಆತ್ಮೀಯ ಸಂಬಂಧಗಳನ್ನು ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ..

Thursday 26 July 2018

ಬಂಟ್ವಾಳ ಟು ಬೆಂಗಳೂರು..


ಹಾನಗರದ ಟ್ರಾಫಿಕ್ಕು.. ಬಾಯ್ದೆರೆದ ಕೊಳಚೆ ಚರಂಡಿಯ ದುರ್ವಾಸನೆ.. ಕೆಲಸದ ಒತ್ತಡ ಇವೆಲ್ಲವೂ ಸೇರಿ ಒಂದು ರೀತಿಯಲ್ಲಿ ಬೆಂಗಳೂರನ್ನು ಮನಸ್ಸು ದ್ವೇಷಿಸುವಂತೆ ಮಾಡುತ್ತಿದೆ. ಹಾಗಾಗಿಯೇ ಈಗೀಗ ತಾಯ್ನೆಲ ನಮ್ಮ ಕರಾವಳಿಯ ಮಣ್ಣಿನ ಕಂಪು ಮನದ ತುಂಬಾ ಆವರಿಸಿ, ಈಗೀಗ ಕರಾವಳಿಯ ಸೆರಗಿನಲ್ಲಿರುವ ನಮ್ಮೂರು ಅತಿಯಾಗಿ ಕಾಡುತ್ತಿದೆ. ತಿಂಗಳಿಗೊಮ್ಮೆಯಾದರೂ ಊರಿಗೆ ತೆರಳಲು ಮನಸು ಹಾತೊರೆಯುತ್ತದೆ..
ಊರಿಗೆ ಹೋಗುವುದೆಂದರೆ ನನ್ನ ಮೊದಲ ಆಯ್ಕೆ ರೈಲು ಪ್ರಯಾಣ.. ಹೊಗೆಯುಗುಳುವ ಧೂಮಾಸುರ ಬಸ್ಸು, ಎಸಿ ಬಸ್ಸಿನ ವಾಕರಿಕೆ ತರಿಸುವ ಅಸಹನೀಯ ವಾಸನೆಗೆ ಊರಿಗೆ ಕಾಲಿರಿಸುವ ಹೊತ್ತಿಗೆ ಕರಳು ಕಿತ್ತು ಬರುವಂತೆ ಕಕ್ಕಿ, ಊರಿಗೆ ತಲುಪುವಷ್ಟರಲ್ಲಿ ಬಸವಳಿದು ಹೋಗಿರುತ್ತೇನೆ. ಇದೊಂದು ಕಾರಣವಾದರೆ, ಬಲವಾದ ಕಾರಣ ಇನ್ನೊಂದಿದೆ ಅದುವೇ ಪಶ್ಚಿಮದ ಘಟ್ಟದ ಬುಡದಲ್ಲಿ, ಮಡಿಲಲ್ಲಿ ಹಾವಿನಂತೆ ತೆರಳುವ ರೈಲು ಪ್ರಯಾಣ.. ಬೇಕಂತಲೇ ಒಮ್ಮೊಮ್ಮೆ ಆಫೀಸಿಗೆ ಒಂದು ದಿನ ಹೆಚ್ಚು ರಜಾ ಹಾಕಿ ಹಗಲು ಪ್ರಯಾಣದ ಸುಖವನ್ನು ಅನುಭವಿಸುತ್ತೇನೆ. ಪ್ರಕೃತಿಯ ಮಡಿಲಲ್ಲಿ ಮಗುವಾಸೆ ಈ ಹುಚ್ಚು ಮನಸಿಗೆ..

ಮಳೆಗಾಲದ ಆರಂಭದ ಸಮಯದಲ್ಲಿ ನಮ್ಮ ಬಂಟ್ವಾಳದ ರೈಲ್ವೇ ಸ್ಟೇಷನ್‍ನಿಂದ ಬೆಂಗಳೂರಿಗೆ ಟ್ರೈನ್‍ನಲ್ಲಿ ಮಧ್ಯಾಹ್ನ ಹೊರಟಿದ್ದೆ.. ಆಗೋಮ್ಮೆ ಈಗೋಮ್ಮೆ ಸುರಿಯುವ ಮಳೆ ಪ್ರಯಾಣಕ್ಕೆ ಸಾಥ್ ಕೊಟ್ಟಿತ್ತು. ಹಸಿರು ಗದ್ದೆ, ಗುಡ್ಡ, ತೋಟ, ಮಳೆ ನೀರು ತುಂಬಿಕೊಂಡು ಹರಿಯುವ ಸಣ್ಣ ಪುಟ್ಟ ತೋಡು, ಹಳ್ಳಗಳನ್ನೆಲ್ಲ ಸುತ್ತು ಹಾಕುತ್ತಾ ಹಳಿಯಲ್ಲಿ ಸಾಗುತ್ತಿದ್ದಂತೆ.. ಅಯ್ಯೋ ಕೆಸುವಿನ ಎಲೆ ಮನೆಯಲ್ಲೇ ಮರೆತುಬಿಟ್ಟಿದ್ದು ನೆನಪಾಗಿ, ರುಚಿಯನ್ನು ಬೇಡುವ ನಾಲಗೆ ಬೇಸರಿಸಿದರೂ, ಆಟಿ ತಿಂಗಳಲ್ಲಿ ಒಮ್ಮೆ ಹೋಗಿ ಪತ್ರೊಡೆ ಮೆದ್ದು ಬರುವುದುಂಟಲ್ಲ..! ಎಂಬ ಯೋಚನೆ ಬಂದು ಸುಮ್ಮನಾದೆ..
ಸುಬ್ರಹ್ಮಣ್ಯ ತಲುಪುವರೆಗೂ ಖಾಲಿ ಇದ್ದ ಟ್ರೈನ್‍ನ ಬೋಗಿಗಳೆಲ್ಲ, ಸುಬ್ರಹ್ಮಣ್ಯ ದಾಟುವುದರೊಳಗೆ ತುಂಬಿಬಿಟ್ಟಿತ್ತು.. ಮುಡಿಕೊಟ್ಟ ಭಕ್ತಾದಿಗಳ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಗಂಧಪ್ರಸಾದದ ಪರಿಮಳ ಮೆಲುವಾಗಿ ಮೂಗನ್ನು ಸೋಕಿತ್ತು. ಸುಬ್ರಹ್ಮಣ್ಯ ದಾಟಿದ ತಕ್ಷಣವೇ ಎಲ್ಲರೂ ಬೋಗಿಯ ಬಾಗಿಲಲ್ಲಿ ಜಾಗ ಹುಡುಕಲು ಶುರು ಮಾಡುತ್ತಾರೆ...ಯಾಕೆ ಅಂತಿಯಾ ಹಸಿರು ಪ್ರಕೃತಿಯನ್ನು ಸವಿಯಲು..ಹೌದು ಪಶ್ಚಿಮ ಘಟ್ಟದ ಪ್ರಕೃತಿ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಸಿಗುವುದೊಂದೆ ಅವಕಾಶ.. ನನ್ನ ಪುಣ್ಯಕ್ಕೆ ಎಡಭಾಗದಲ್ಲೇ ಕಿಟಕಿಯ ಪಕ್ಕದ ಸೀಟು ನನ್ನದಾಗಿತ್ತು.. ರೈಲು ಪಶ್ಚಿಮ ಘಟ್ಟದ ಮಡಿಲೊಳಗೆ ಪ್ರವೇಶಿಸಿತ್ತು..
ನೀರವ ಕಾಡಿನೊಳಗೆ ಕಪ್ಪೆಯ ವಟರ್ ವಟರ್ ಸದ್ದು.. ಜೀ..ಎನ್ನುವ ಜೀರುಂಡೆಯ ಝೇಂಕಾರ.. ಕಿವಿಗೆ ಮಾತ್ರ ಕೇಳಿಸುತ್ತಿತ್ತು..
ಬೆಟ್ಟದ ಮೇಲಿಂದ ಇಳಿಯುವ ಸಣ್ಣ ಸಣ್ಣ ಜಲಪಾತದ ನೀರು ಬಲಭಾಗದ ಬಾಗಿಲಲ್ಲಿ ಕುಳಿತವರ ಕಾಲು ಒದ್ದೆ ಮಾಡುತ್ತಿತ್ತು.. ಹಸಿರನ್ನು ಕಣ್ತುಂಬಿಕೊಳ್ಳುತ್ತಾ ಹಸಿರ ಧಾನ್ಯದಲ್ಲಿ ತೊಡಗಿದ್ದರೆ, ಗಬಕ್ಕನೆ ಎದುರಾಗುವ ಸುರಂಗ ಮಾರ್ಗದ ಕತ್ತಲು, ಪ್ರಯಾಣಿಕರ ಖುಷಿಯ ಕಿರುಚಾಟ ಕೇಳಿ ಹಸಿರ ಧ್ಯಾನದಿಂದ ಬಂದು ಒಂದು ನಗುವ ನಕ್ಕು ಸುಮ್ಮನಾದೆ.. ಮತ್ತೆ ಹಸಿರು ಮತ್ತು ನನ್ನ ನಡುವೆ ಮಾತುಕತೆ ಶುರು..ಮಧ್ಯ ಮಧ್ಯ ಎದುರಾಗುವ ಸುರಂಗಮಾರ್ಗದ ಕತ್ತಲೆಗೆ ಯೋಚನೆಗೆ ಬ್ರೇಕ್ ಹಾಕುತ್ತಿತ್ತು..
ಹಸಿರ ಚಾದರದ ಮೇಲೆ ನಿಂತ ಮಳೆಹನಿ..ಮರಗಿಡಗಳ ಸವರಿಕೊಂಡು ಸಾಗುವ ಮಂಜು.. ಅಲ್ಲೆಲ್ಲೋ ಬೆಟ್ಟದ ಮೇಲೇರಿ ಕುಳಿತ ಮಳೆ ಮೋಡ, ಬೆಟ್ಟದ ಮೇಲಿಂದ ಇಳಿವ ಬಿಳಿನೊರೆಯ ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ತೆರೆದ ಕಿಟಕಿಯಿಂದ ಆಗಾಗ ಪಟಪಟನೆ ಬೀಳುವ ಮಳೆಹನಿಗಳು ಚಳಿಯನ್ನುಂಟು ಮಾಡುತ್ತಿತ್ತು.

ಇನ್ನೊಂದು ಕುತೂಹಲವಾಗಿ ದೃಷ್ಟಿಹಾಯಿಸುತ್ತಿದ್ದುದು ಕಾಡುಪ್ರಾಣಿಗಳೆಡೆಗೆ...ಒಂದಾದರೂ ಕಾಡು ಪ್ರಾಣಿಗಳು ಗೋಚರಿಸಬಹುದೇನೋ ಎಂದು ಆಸೆಯಿಂದ ಎದುರುನೋಡುತ್ತಿದೆ. ಕಣ್ಣಿಗೆ ಕಾಣಿಸುತ್ತಿದ್ದುದು.. ರೈಲ್ವೇ ಟ್ರ್ಯಾಕ್‍ಗಳ ಕೆಲಸ ಮಾಡುತ್ತಿದ್ದ ಮಾನವರು ಮಾತ್ರ. ನನ್ನ ಆಸೆಗೋ ಏನೋ ಪಶ್ಚಿಮ ಘಟ್ಟದ ಅಂಚಿನ ಸಕಲೇಶಪುರದವೆರೆಗೆ ಬಂದಾಗ ಹಲಸಿನ ಮರದಲ್ಲೊಂದು, ಯಾವುದೇ ಪರಿವೆಯಿಲ್ಲದೆ, ಕೋತಿಯೊಂದು ಹಲಸಿನ ಹಣ್ಣು ತಿನ್ನುತ್ತಿತ್ತು.. ಅಬ್ಬಾ.. ಕಡೆಗಾದರೂ ಒಂದು ಪ್ರಾಣಿಯನ್ನು ನೋಡಿದೆನಲ್ಲಾ ಎಂದು..

ಸಾವಿರಾರು ಅಪರಿಚಿತ ಮರಗಳ ನಡುವೆ ಪರಿಚಿತ ಹಲಸು, ತೇಗ, ಉಪ್ಪಳಿಗೆ, ಹೊಂಗೆ, ಇನ್ನಿತರ ಮರಗಳನ್ನು ನೋಡಿ, ಬಹುಕಾಲದ ಪರಿಚಯಸ್ಥರನ್ನು ನೋಡಿದಂತೆ ಖುಷಿಪಟ್ಟಿದ್ದೆ.. ಹೌದು ಅಜ್ಜಿಮನೆಯ ಹಳ್ಳಿಯ ವಾತಾವರಣದಲ್ಲಿ ಬೆಳೆದ ನನಗೆ ಈ ಮರಗಳೆಲ್ಲವುಗಳ ಹೆಸರು ಅಜ್ಜಿ, ಮಾವ ಹೇಳಿಕೊಟ್ಟಿದ್ದರು.. ಹೌದು ಕಾಡು, ಬೆಟ್ಟ, ತೋಟ, ಗದ್ದೆಯ ಅಂಗಳದಲ್ಲಿ ಬೆಳೆದವರಿಗೆ ಸಿಟಿ ಲೈಫ್‍ಗೆ ಅಡ್ಜಸ್ಟ್ ಆಗಿ ಲೈಫ್ ನಡೆಸೋದು ಸ್ವಲ್ಪ ಕಷ್ಟಾನೇ ಬಿಡಿ.. ನನ್ನ ಪ್ರಯಾಣದ ಸ್ಟೋರಿ ಹೇಳೋಕೆ ಹೋಗಿ ಎಲ್ಲೆಲ್ಲಿಗೂ ಹೋಗ್ತಾ ಇದ್ದೀನಿ.. ಅಂತೂ ಇಂತೂ ಸಕಲೇಶಪುರ ತಲುಪುವಷ್ಟರಲ್ಲಿ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅರ್ಧಮರ್ಧ ಸವಿದಂತೆ ಆಗಿತ್ತು.. ಯಾಕಂದ್ರೆ.. ಬರೀ ಕಿಟಕಿಯಿಂದ ಮಾತ್ರ ಹೊರಗಿಣುಕಬೇಕಿತ್ತು.. ಕೆಳಗಿಳಿಯುವ ಅವಕಾಶವೇ ಸಿಕ್ಕಿರಲಿಲ್ಲ.. ಜೀವನದಲ್ಲಿ ಒಮ್ಮೆಯಾದರೂ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೂ ರೈಲ್ವೇ ಟ್ರ್ಯಾಕ್‍ನಲ್ಲಿ ನಡೆಯಬೇಕೆನ್ನುವ ಕನಸನ್ನು ಹುಟ್ಟುಹಾಕಿದ್ದೇ ಈ ರೈಲು ಪ್ರಯಾಣ.. ಎಷ್ಟೋ ಜನ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಪ್ರಕೃತಿ ಸೌಂದರ್ಯವನ್ನು ನೋಡಲೆಂದೆ ಹಗಲು ರೈಲಿನಲ್ಲಿ ಬರುತ್ತಾರೆ. 
ವಿಷಾದವೆಂದರೆ: ರಾಜಕಾರಣಿಗಳು ಹಣ ತಿನ್ನಲೆಂದು ಮಾಡಿರುವ ‘ಎತ್ತಿನ ಹೊಳೆ ಯೋಜನೆ’ಗೆ ಸಿಲುಕಿ, ಕೆಡವಲ್ಪಟ್ಟ ಕಾಡುಗಳು, ಕೊರೆಸಿದ ಗುಡ್ಡಗಳು, ಭೀಮಗಾತ್ರದ ಪೈಪುಗಳು, ಹಸಿರ ಗದ್ದೆ, ತೋಟವನ್ನು ಕೆಡವಿ ಹಾಕಿದ ಪೈಪುಗಳನ್ನು ನೋಡಿ ಹೊಟ್ಟೆ ಚುರುಕ್ಕೆಂದಿತ್ತು.. ಯಾರು ತಡೆಯಬಲ್ಲವರೋ.. ಈ ಮೂರ್ಖ ರಾಜಕಾರಣಿಗಳನ್ನು...?

Friday 13 July 2018

ಮತ್ತೆ ಬರೆಯಬೇಕು..



ಪಿಯುಸಿ ಮುಗಿಸಿ, ಪತ್ರಿಕೋದ್ಯಮ ವಿಷಯವನ್ನು ಅವಚಿಕೊಂಡು ಪದವಿಯ ಮೆಟ್ಟಿಲು ಹತ್ತಿ, ಅದೇ ಪತ್ರಿಕೋದ್ಯಮವನ್ನು ಬಗಲಿಗೇರಿಸಿಕೊಂಡು ಸ್ನಾತಕೋತ್ತರ ಮೆಟ್ಟಿಲು ಹತ್ತಿದ್ದೆ. ಕನಸುಗಣ್ಣಿಗೆ ಕಾಣಿಸುತ್ತಿದ್ದುದು ಬರಿಯ ಬರವಣಿಗೆ.., ಬರೆಯಬೇಕೆನ್ನುವ ಹುಮ್ಮಸ್ಸಿನಲ್ಲಿ ಬರೆದ ಲೇಖನಗಳು, ಹನಿಯಾಗಿ ಸೇರುತ್ತಿದ್ದ ಹನಿಗವನಗಳು.. ಹೀಗೆ ಬರೆದೂ ಬರೆದೂ ಬರಹಗಾರ್ತಿಯಾಗಬೇಕೆನ್ನುವ ಬೆಟ್ಟದಷ್ಟು ಕನಸುಗಳನ್ನು ಹೊತ್ತು ಉದ್ಯೋಗಕ್ಕೆ ಕಾಲಿಟ್ಟಿದ್ದೆ ಮಾಧ್ಯಮ ಕ್ಷೇತ್ರಕ್ಕೆ..
ಮೊದಲಿಗೆ ಕ್ರೀಡಾ ಮಾಸಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದು, ನಂತರದಲ್ಲಿ ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಕಲಿಕಾ ಪತ್ರಕರ್ತೆಯಾಗಿ, ಬರವಣಿಗೆಯನ್ನು ಸಾಕಷ್ಟು ತಿದ್ದಿಕೊಂಡು, ನನಗೇ ಅಚ್ಚರಿಯಾಗುವಂತೆ ಬರೆಯಲಾರಂಭಿಸಿದ್ದೆ..ಆಕಸ್ಮಿಕವಾಗಿ ಪತ್ರಿಕೋದ್ಯಮ ಉಪನ್ಯಾಸಕಿಯಾದರೂ, ಬರವಣಿಗೆಗೆ ಸಮಯ ಸಾಲದೇ ಒಳಗೊಳಗೇ ಕೊರಗುತ್ತಿದ್ದೆ. ಮತ್ತೆ ಬರೆಯುವ ಕನಸು ಹೊತ್ತು ಕರಾವಳಿಯ ತೀರದಿಂದ ಮಹಾನಗರ ಬೆಂಗಳೂರಿಗೆ ಆಗಮಿಸಿದ್ದೆ.. ಮತ್ತೆ ಕೆಲಸದ ಹುಡುಕಾಟ.. ಸಿಕ್ಕಿದ್ದು ಒಂದು ವಾಹಿನಿಯಲ್ಲಿ.. ಆಸಕ್ತಿ ಇದ್ದಿದ್ದು ಬರವಣಿಗೆಯಲ್ಲಿ..!
ಒಂದು ವರ್ಷ..ಕಳೆದಿದೆ.. ಹೌದು ಒಂದು ವರ್ಷದಲ್ಲಿ ಮನಸ್ಸಿಗೆ ಇಷ್ಟವಾಗುವಂತೆ, ಸಮಾಧಾನವಾಗುವಂತೆ ಬರೆದಿದ್ದು ಒಂದು ಬರವಣಿಗೆಯೂ ಕಾಣುತ್ತಿಲ್ಲ.. ಮೂಲೆಗುಂಪಾಗಿದೆ ಯೋಚನೆಗಳು..ಪದಗಳು.. ನೋಯುತ್ತಿದೆ ಮನಸು...
ಒಮ್ಮೊಮ್ಮೆ ಅಳುತ್ತವೆ ನನ್ನೊಳಗೆ ಬಂಧಿಯಾಗಿರುವ ಪದಗಳು, ಹೊರಬರಲಾಗದೆ.. ಬರೆಯಬೇಕೆನಿಸುತ್ತಿದೆ.. ಬಾಲ್ಯದ ದಿನಗಳ ಬಗ್ಗೆ.. ಮರದ ಸೇತುವೆಯಿಂದ ಹಲಸಿನಹಣ್ಣು ಎತ್ತಿ ಹಾಕಿ ಹಲಸಿನ ಹಣ್ಣು ಸವಿದಿದ್ದು,  ಸೀತಾಫಲದ ಮರದಿಂದ ಬಿದ್ದು ಕಾಲಿನ ಮಾಂಸ ಕಿತ್ತು ಬಂದಿದ್ದು.. ಅಮ್ಮ ಕೋಲು ಹಿಡಿದು ಅಟ್ಟಾಡಿಸಿಕೊಂಡು ಬಂದ ಕಥೆ, ಮೊದಲ ಬಾರಿ ಕುತೂಹಲದಿಂದ ನೋಡಿದ ಕುರ್ಚಿಯ ಮೇಲೆ ಕೂರಿಸಿದ ಯಾರದೋ ಶವ.. ಹೊಸ ವರ್ಷದ ಆರಂಭಕ್ಕೆ ಹಿಂದಿನ ದಿನ ನಮ್ಮೂರ ಬಾರ್ ಮುಂದೆ ಕೂರಿಸಿದ ತಾತನ ಗೊಂಬೆಯ ಕೈಯ ಸ್ಪರ್ಶ.. ಬಾಲ್ಯದ ಆಟ ತುಂಟಾಟಗಳು.. ಮನೆಯಲ್ಲಿ ಮುದ್ದಾಗಿ ಸಾಕಿದ ಗಿಳಿರಾಮನ ದುರಂತ ಸಾವಿನ ಬಗ್ಗೆ.. ಹೀಗೆ ಬರೆಯಬೇಕೆನ್ನುತ್ತವೆ ಮನಸು.. ಬರೆಯಲಾಗುತ್ತಿಲ್ಲ.. ಪದಗಳೇ ಹೊಳೆಯುತ್ತಿಲ್ಲ..
ಹಿಂಬದಿಯ ಸವಾರಳಾಗಿ ಇನಿಯನೊಂದಿಗೆ ಹೋಗುವಾಗ ಜೋರಾಗಿ ಮಳೆಸುರಿಯುವಾಗ, ಬರಹವನು ನೆನೆದೊಮ್ಮೆ ಬಿಕ್ಕಿ ಅಳುತ್ತೇನೆ.. ಮಳೆಯೊಂದಿಗೆ ಕಣ್ಣ ಹನಿಯೂ ಸೇರಿ…ಕೆನ್ನೆಯಿಂದ ಇಳಿಯುತ್ತವೆ.. ಮನಸು ಹಗುರಾಗುತ್ತದೆ.. ನಾಳೆಯಿಂದ ಮತ್ತೆ ಏನಾದರೊಂದು ಬರೆಯಬೇಕು ಎಂದುಕೊಳ್ಳುತ್ತೇನೆ.. ಮನಸಿಗೆ ನೆಮ್ಮದಿಯಾಗುವಂತೆ.. ತೃಪ್ತಿಯಾಗುವಂತೆ ಬರೆಯಬೇಕು.. ನನ್ನೊಳಗಿನ ಭಾವನೆಗಳು ಅಕ್ಷರಗಳ ರೂಪ ಧರಿಸಬೇಕು.. ಮತ್ತೆ ಬರೆಯಬೇಕು.. ಬರೆಯುತ್ತಿದ್ದೇನೆ..

Monday 18 June 2018

ಮಾಲ್ ಯುಗದೊಳ್.. ಜನರೇಷನ್ ಗ್ಯಾಪುಗಳು...


ಸಾಲು ಸಾಲಾಗಿ ಜೋಡಿಸಿರುವ ಉಪ್ಪಿನಕಾಯಿ ಡಬ್ಬಗಳು, ತುದಿಯಲ್ಲೊಂದು ಕಡೆ ಗಾಜಿನ ಪೆಟ್ಟಿಯೊಳಗೆ ಕುಳಿತಿರುವ ಬೆಣ್ಣೆಯ ಬೆಟ್ಟ.. ಜೋಡಿಸಿಟ್ಟಿರುವ ಹಪ್ಪಳಗಳ ಪ್ಯಾಕೇಟು.. ಒಳಗೆ ದೃಷ್ಟಿ ಹಾಯಿಸಿದರೆ ಖಾಲಿ ಬಿದ್ದಿರುವ ಮರದ ಕಪಾಟುಗಳು ಧೂಳು ಹಿಡಿದು ಕೂತಿವೆ. ಖಾಲಿ ಬಿದ್ದಿರುವ ಬೆಣ್ಣೆ ಡಬ್ಬಗಳ ಮಧ್ಯದಲ್ಲೊಂದು ಕಬ್ಬಿಣದ ಚೇರಿನಲ್ಲಿ ಶೂನ್ಯ ದೃಷ್ಠಿಯಲ್ಲಿ ಕಾಣುತ್ತಿರುವ ಮುದಿ ಜೀವ.. ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು, ಈಚೆ ಮಕ್ಕಳಿಗೂ ಬೇಡವಾಗಿರುವ ಜೀವಕ್ಕೆ ಆಧಾರಕ್ಕೊಂದು ಮಾತ್ರ ಪುಟ್ಟ ಅಂಗಡಿ.. ಅದೂ ಈಗ ಆಧಾರ ಕಳೆದುಕೊಳ್ಳುವ ಹಂತದಲ್ಲಿದೆ.. ಇದೇನಪ್ಪಾ ಅಂದ್ರೆ ಹೇಳಲು ಹೊರಟಿರುವುದು ಭಾರತ್ ಸ್ಟೋರ್ ಸಿನಿಮಾದ ಕಥೆಯಲ್ಲ.. ವಾಸ್ತವ ಚಿತ್ರಣ..
ಎಂದೋ ಪರಿಚಯವಾಗಿರುವ ಈ ಮುದಿಜೀವವನ್ನು ಆಕಸ್ಮಿಕವಾಗಿ ಭೇಟಿ ನೀಡಿದ್ದೆ. ಹೇಗಿದೆ ಅಜ್ಜಿ ವ್ಯಾಪಾರ “ ಏನಮ್ಮಾ ಹೇಳೋದು.. ಈಗಿನ ಜನರೇಷನ್‍ಗೆ ಮಾಲ್‍ಗಳು ಒಗ್ಗಿಕೊಂಡು ಬಿಟ್ಟಿದೆ.. ರೇಟು ಜಾಸ್ತಿ ಆದ್ರೂ ಅದೇ ಪ್ರೆಸ್ಟೀಜು.. ಅಲ್ಲಿರುವ ಬ್ರಾಂಡ್ ಇಲ್ಲಿ ಸಿಗೋದಿಲ್ಲ. ಹಂಗೋ ಹಿಂಗೋ ನನ್ನ ಪರಿಚಯಸ್ಥ ಹಿರಿಯರು ಬರ್ತಾರೆ. ಕಾಲ ಬದಲಾಗ್ತಾ ಇದೆ. ನಾವು ಹೊಂದಿಕೊಂಡು ಹೋಗ್ಬೇಕು. ಬೇರೇನೂ ಮಾಡೋಕು ಸಾಧ್ಯ ಇಲ್ಲ” ಅಂದಾಗ ಅಜ್ಜಿಯ ಉತ್ತರಕ್ಕೆ ನಿರ್ಲಿಪ್ತಳಾಗಿದ್ದೆ.
ಹೌದು ವಿದೇಶಿ ಬಂಡವಾಳ ಹೂಡಿಕೆ ಯಾವಾಗ ಭಾರತಕ್ಕೆ ಕಾಲಿಟ್ಟಿತ್ತೋ, ಅಂದಿನಿಂದ ಜನರೇಷನ್ ಎನ್ನುವ ಪದವೂ ಹುಟ್ಟಿಕೊಂಡಿತ್ತೋ ಏನೋ.. ಅದಕ್ಕೆ ತಕ್ಕಂತೆ ನಗರಗಳಲ್ಲಿ ತಲೆ ಎತ್ತಿರುವ ಮಾಲ್‍ಗಳು.. ಜನರಿಗೊಂದಿಷ್ಟು ಮಂಕುಬೂದಿ ಎರಚಲು ಆಫರ್‍ಗಳು..ಡಿಸ್ಕೌಂಟುಗಳು.. ಹಿಂದೆ ಯಾವುದಾದರೊಂದು ಡ್ರೆಸ್ಸು ಧರಿಸುತ್ತಿದ್ದ ದೇಹಕ್ಕೀಗ ಬ್ರಾಂಡೆಡ್ ಡ್ರೆಸ್ಸುಗಳೇ ಬೇಕು.. ಇಲ್ಲದಿದ್ದರೆ ‘ಅನ್‍ಕಂಫರ್ಟೇಬಲ್’ ಎನ್ನುವ ಉತ್ತರಗಳು.. ಇಡ್ಲಿ, ದೋಸೆ ಮೆಲ್ಲುತ್ತಿದ್ದ ನಾಲಗೆಗಳು, ಪಿಜ್ಜಾ, ಬರ್ಗರ್ ಎಳೆಯುತ್ತಿದೆ.. ಮನೆದಾರಿ ಮಧ್ಯದ ಕಿರಾಣಿ, ಪೆಟ್ಟಿಗೆ ಅಂಗಡಿಗಳತ್ತ ದೃಷ್ಟಿ ಹಾಯಿಸಿದರೆ ನಮ್ಮ ಕಣ್ಣೇ ವ್ಯಂಗ್ಯವಾಡುತ್ತದೆ.. ಕಾಲ ಬದಲಾಗಿದೆ, ನಾವೂ ಬದಲಾಗಬೇಕು ಎನ್ನುವ ಸಮಜಾಯಿಷಿಗಳು ಎನ್ನುವ ಎದುರುತ್ತಗಳು ‘ಆ ಕಾಲದ’ ಹಿರಿಯರಿಗೆ ದಿನಪಾಠವಾಗಿದೆ. ಇದು ಮಾಲ್‍ಸಂಸ್ಕøತಿಯ ಉದಾಹರಣೆಗಳು.
ಇದರ ಜೊತೆಗೆ ಮಾನವೀಯತೆ, ಸಂಬಂಧಗಳೂ ಮುಕ್ಕಾಗುತ್ತಿದೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎನ್ನುವ ಕುತೂಹಲಗಳೂ ಬೇಡವಾಗಿದೆ. ಬೆಳಗೆದ್ದರೆ ಕಿವಿಗೆ ಹಿಯರ್‍ಫೋನ್ ತುರುಕಿಸಿ, ಪ್ರತಿದಿನ ಅದೇ ರಸ್ತೆಯ ಮೇಲೆ ಅಪರಿಚಿತರಂತೆ ನಡೆಯುತ್ತೇವೆ. ಮೆಟ್ರೋ, ಬಸ್ಸೋ ಹತ್ತುವ ಮನಸುಗಳಿಗೆ ಮತ್ತೇ ಹಿಯರ್‍ಫೋನ್‍ಗಳೇ ಸಂಗಾತಿಗಳು..ತುಂಬಿರುವ ಬಸ್ಸನ್ನು ಹಿರಿಯರಂತು ಹತ್ತಿದರೆ ಸಾಕು ಕಣ್ಮುಚ್ಚಿಕೊಂಡುವ ನಟಿಸುವ ಮಾನವೀಯತೆ ಮರೆತ ಹಸಿ ಮನಸುಗಳು..ರೇಜಿಗೆ ಹುಟ್ಟಿಸುತ್ತವೆ..ಇವು ಬದಲಾದ ಜೀವನದ ನಿದರ್ಶನಗಳು..
ಅದೇ ಉಪ್ಪಿನಕಾಯಿ ಅಂಗಡಿ ಅಜ್ಜಿಯ ಇನ್ನೊಂದು ವ್ಯಥೆ ಅಂಗಡಿ ಇರುವ ಕಟ್ಟಡವನ್ನು ಇನ್ನೆರಡು ತಿಂಗಳೊಳಗಾಗಿ ಬಿಟ್ಟುಹೋಗಬೇಕೆನ್ನುವುದು. ಕಾರಣ ಏನಪ್ಪಾ ಅಂದ್ರೆ ಆ ಜಾಗದಲ್ಲೀಗ ಹೊಸ ಅಪಾರ್ಟ್‍ಮೆಂಟ್ ಕಟ್ಟಬೇಕೆನ್ನುವ ನಿಲುವು ಮಾಲೀಕರದು. ಆ ಕಾರಣಕ್ಕೆ ಸೈಟು ಸೇಲ್ ಆಗಿದೆ.. ಅಚ್ಚರಿಯೆಂದರೆ 30 ವರ್ಷಗಳಿಂದ ಆ ಅಜ್ಜಿಯ ಅಂಗಡಿಗಿದ್ದ ಬಾಡಿಗೆ ಒಂದೂವರೆ ಸಾವಿರ ಅದೂ ಮಾನವೀಯತೆಯ ಆಧಾರದಲ್ಲಿ. ಇದೀಗ ಬಿಟ್ಟು ಹೋಗಿ ಎನ್ನುವ ಸಂಕಟ ಮಾಲೀಕರಿಗೆ. ಬೇರೆಲ್ಲಾದರೂ ಅಂಗಡಿ ಇಡೋಣ ಅಂದರೆ ಹದಿನೈದು ಸಾವಿರದವರೆಗೂ ಬಾಡಿಗೆ ನಾನು ಹೇಗೆ ಕೊಡಲಮ್ಮ ಎನ್ನುವ ನಿರಾಶೆಯ ಮಾತು..
ಹೌದು ಇದೀಗ ಬೆಂಗಳೂರಲ್ಲೇ ಸೈಟುಗಳ ಮೌಲ್ಯ ಜಾಸ್ತಿಯಾಗಿದೆ. ಖಾಲಿ ಬಿದ್ದಿರುವ ಜಾಗದಲ್ಲಿಗ ಕೋಟಿರೂಪಾಯಿಯ ಅಪಾರ್ಟ್‍ಮೆಂಟುಗಳ ನಕ್ಷೆ. ಹಳೆ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಏಳಂತಸ್ತಿನ ಪ್ಲ್ಯಾಟು..! ಹುಟ್ಟಿ ಬೆಳೆದ ಮನೆಯೊಂದಿಗಿನ ಅನುಭವಗಳು, ಸಂಬಂಧಗಳು ಈಗೀಗ ಹಣದ ಮುಂದೆ ಬೇಡವಾಗಿದೆ. ಹಿಂದೆ ಮನೆಮುಂದೆ ನಗುತ್ತಿದ್ದ ರಂಗೋಲಿಗೀಗ ಫ್ಲ್ಯಾಟ್‍ಗಳ ಮುಂದೆ ಜಾಗವಿಲ್ಲ. ನಗುವ ಹೂವುಗಳ ಜಾಗದಲ್ಲೀಗ ಮನಿಪ್ಲಾಂಟ್ ಗಿಡಗಳು ಹೂವಿಲ್ಲ.. ಬಣ್ಣವಿಲ್ಲ..
ವರ್ಷಕ್ಕೆರಡು ಬಾರಿ ಪ್ಲ್ಯಾಟಿನಿಂದ ಪ್ಲ್ಯಾಟ್‍ಗೆ ಜಂಪ್ ಮಾಡಿ, ಹಿರಿತಲೆಗಳನ್ನು ವೃದ್ಧಾಶ್ರಮದಲ್ಲಿಳಿಸಿ ಹೋಗುವ ವಿಭಕ್ತ ಕುಟುಂಬ. ಕಾಲ ಬದಲಾದಂತೆ ಮಾನವೀಯತೆ, ಸ್ನೇಹ ಸಂಬಂಧಗಳು, ಅನುಕಂಪ ನಮಗೇ ಅಪರಿಚಿತವಾಗಿದೆ. ಬೆಲೆ ಏರಿಕೆಯಾದರೆ  ಅಲ್ಲೊಮ್ಮೆ ಇಲ್ಲೊಮ್ಮೆ ಸ್ಟ್ರೈಕ್ ಮಾಡಿ ಸುಮ್ಮನಾಗಿ ಅದೇ ಬೆಲೆಗೆ ಕೊಳ್ಳುವ ಜನ ಮತ್ತದೇ ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇನ್ನೊಬ್ಬರ ಬಗ್ಗೆ ತಲೆಕಡಿಸಿಕೊಳ್ಳದ ಮನಸಿಗೆ ಅಯ್ಯೋ..ಪಾಪ ಎನ್ನುವ ಪದ ಮರೆತಿದೆ.. ಕಾಲ ಬದಲಾದಂತೆ ಬಾಹ್ಯ ಯೋಚನೆಗಳು ಬದಲಾಗಬೇಕೋ.. ಆಂತರಿಕ ಯೋಚನೆಗಳು ಬದಲಾಗಬೇಕೋ.. ನಾವೇ ಅರ್ಥೈಸಿಕೊಳ್ಳಬೇಕಿದೆ.. ಅಯ್ಯೋ ಯೋಚನೆ ಮಾಡೋದಿಕ್ಕೂ ಈವಾಗ ಟೈಮ್ ಎಲ್ಲಿದೆ ಬಿಡಿ.....!

Saturday 20 January 2018

ಕೈ ತುತ್ತು

ಇತ್ತೀಚಿಗೆ ಆತ್ಮೀಯರೊಬ್ಬರ ಮನೆಗೆ ಹೋಗಿದ್ದಾಗ ಹಿರಿಯರೆಲ್ಲರ ಊಟ ಮುಗಿದ ನಂತರ ಮಕ್ಕಳನ್ನೆಲ್ಲ ಊಟ ಮಾಡಲು ಕರೆದ್ರು. ಮಕ್ಕಳಂದ್ರೆ ಚಿಕ್ಕ ಮಕ್ಕಳಲ್ಲ, ಕಾಲೇಜು, ಊದ್ಯೋಗಕ್ಕೆ ಹೋಗೋವಂಥ ಮಕ್ಕಳು..  ಮನೆಯ ಚಿಕ್ಕಮ್ಮ ಎಲ್ಲರನ್ನು ಅವ್ರ ಸುತ್ತ ಕೂರಿಸಿ ಕೈತುತ್ತು ಕೊಡುವ ಕಾರ್ಯಕ್ರಮ.. ಮಕ್ಕಳ ಗುಂಪಿಗೆ ನನ್ನನ್ನೂ ಸೇರಿಸಿದ್ರು.. ನನ್ನ ಜೀವನದ ಮೊದಲ ಅನುಭವ ಅದು.. ಕುಟುಂಬದೊಂದಿಗೆ ನಾನು ಇನ್ನೂ ಹೆಚ್ಚು ಭಾವನಾತ್ಮಕವಾಗಿ ಹೊಂದಿಕೊಳ್ಳಲು ದಾರಿಯಾದ ಕ್ಷಣ ಅದು..
ಹೌದು.. ಇಂದಿನ ಮಕ್ಕಳಿಗೆ ಕೈತುತ್ತು ಬಿಡಿ, ಕೈಯಲ್ಲಿ ಊಟ ಮಾಡಲು ಕೂಡ ಅಭ್ಯಾಸ ಮಾಡಿರದ ಹೆತ್ತವರು ಇದ್ದಾರೆ. ದೋಸೆ ತಿನ್ನೋದಕ್ಕೆ ಕೂಡ ಸ್ಪೂನ್  ಕೊಡುವಂಥ ತಂದೆ ತಾಯಿ,. ಒಂದು ಕೈಯಲ್ಲಿ ಮೊಬೈಲ್ ಕುಟ್ಟುತ್ತಾ ಇನ್ನೊಂದು ಕೈಯಲ್ಲಿ ಹಾಗೆ ಏನೋ ತಿಂಡಿ ಬೇಕೋ, ಬೇಡವೋ ಅಂತ ಒಳಗೆ ಹೋಗುತ್ತಿರುತ್ತೆ..
 ಮನೆಯಲ್ಲಿರುವವರು ನಾಲ್ಕು ಜನ ಆದ್ರೂ ತಿನ್ನೋ ಟೈಮ್ ಕೂಡ ಬೇರೆ ಬೇರೆ ಆಗಿರುತ್ತೆ. ಯಾಂತ್ರಿಕತೆಯ ಯುಗದಲ್ಲಿ ತಿನ್ನುವ ಫುಡ್ ಕೂಡ ಯಾಂತ್ರಿಕವಾಗಿಯೇ ತಿನ್ತಾ ಇದ್ದಿವಿ..ಅಕ್ಕರೆ, ಭಾಂಧವ್ಯ  ಅನ್ನೋ ಪದಗಳನ್ನೇ ಮರೆತು  ಬಿಡ್ತಾ ಇದ್ದಿವಿ..

ಕೈತುತ್ತು ಕೊಡುವಾಗಿನ ಆತ್ಮೀಯತೆ ಮಕ್ಕಳೊಂದಿಗಿನ ಭಾಂಧವ್ಯವನ್ನ ಇನ್ನಷ್ಟು ಗಟ್ಟಿಗೊಳಿಸುತ್ತೆ.. ಮನೆಯಲ್ಲೇ ಒಂದು ಸಾರಿ ನೀವೂ ಟ್ರೈ ಮಾಡಿ ನೋಡಿ..ಪ್ರೀತಿಯ ತುತ್ತಿನೊಂದಿಗೆ  ಮಕ್ಕಳ ಹೊಟ್ಟೆನೂ ತುಂಬುತ್ತೆ.. ಕೈತುತ್ತಿನ ಅದ್ಭುತ ಅನುಭವ ನೀವೂ ಸವಿಯಿರಿ..

Tuesday 9 January 2018

ನೀನಿರಬೇಕಿತ್ತು ಜೊತೆಯಲ್ಲಿ..

351 ಕಿಲೋ ಮೀಟರ್ ದೂರದಲ್ಲಿರುವ ಅಮ್ಮ ನೆನಪಾಗುತ್ತಿದ್ದಾಳೆ.. ಜ್ವರದ ತಾಪ ಹೆಚ್ಚಾಗುತ್ತಿದ್ದಂತೆ ಅಮ್ಮನ ನೆನಪು ಕೂಡ ಹೆಚ್ಚಾಗುತ್ತಿದೆ. ಮಾತ್ರೆಗಳು, ಸಿರಪ್ ಕಂಡರೆ ಅಲರ್ಜಿಯಾಗುವ ನನಗೆ ಅಮ್ಮ ಮಾಡಿಕೊಡುವ ಹಿತ್ತಲ ಮದ್ದು ಜ್ವರದ ತಾಪ ನಿವಾರಿಸುವ ಮನೆಮದ್ದು. ಬೆಂಗಳೂರ ಕಾಂಕ್ರೀಟು ನೆಲದಲ್ಲಿ ಮನೆಯ ಹಿತ್ತಿಲು ಕಳೆದು ಹೋಗಿದೆ. ಮನೆಮದ್ದು ಇನ್ನೆಲ್ಲಿ ಹುಡುಕಲಿ ?. ಪ್ಲಾಸ್ಟಿಕ್ ಚೀಲದೊಳಗೆ ಒಣಗಿದ ಬೇರು ತಂದು ಕಷಾಯ ಮಾಡ ಹೊರಟರೆ, ಅದರಲ್ಲೂ ಅಮ್ಮ      ಮಾಡಿಕೊಡುವ ಕಷಾಯದ ಘಮ ಹುಡುಕುತ್ತೇನೆ.. ಮತ್ತೆ ನೆನಪಾಗುತ್ತಾಳೆ ಅಮ್ಮ..

ಅಮ್ಮನಿಂದ ದೂರದಲ್ಲಿದ್ದು ದುಡಿಮೆಯಲ್ಲಿ ಹೆಣಗುತ್ತಿರುವ ಮಕ್ಕಳ  ಕಥೆಯೇ ಇದೇನಾ..?

Friday 5 January 2018

ಹೇಳುವುದು ಇಷ್ಟೇ..

ನಾನು ಬರಹಗಾರ್ತಿಯೂ ಅಲ್ಲ.. ಕವಯತ್ರಿಯೂ  ಅಲ್ಲ. ಒಮ್ಮೊಮ್ಮೆ ಮಹಾ ಮಸ್ತಿಷ್ಕಕ್ಕೆ ಹೊಳೆಯುವ ಅಮೂಲ್ಯ ಸಾಲುಗಳು ಕಳೆದುಹೋಗದಂತೆ ಈ ಬ್ಲಾಗ್ ಮೂಲಕ ಜೋಪಾನವಾಗಿ ಇರಿಸುವ ಪ್ರಯತ್ನ ಅಷ್ಟೇ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...