Tuesday 13 October 2020

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

 

 

ಕೆಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬುಕ್‌ ನಿಂದ ಹಿಡಿದು ಫೋನ್‌ ಪೇ ಯುಪಿಐ ಪಿನ್‌ ನಂಬರ್‌ವರೆಗೂ ಇದ್ದ ಬದ್ದ ಪಾಸ್‌ವರ್ಡ್‌ಗಳನ್ನೆಲ್ಲಾ ಕಳೆದುಕೊಂಡು ಕಂಗಾಲಾಗಿದ್ದೆ.. ಫೋನ್‌ ನಂಬರ್‌ಗಳು ಹೋದರೆ ಹೋಗಲಿ ಬಿಡಿ.. ಈ ಪಾಸ್‌ವರ್ಡ್‌ಗಳದ್ದೇ ದೊಡ್ಡ ರಗಳೆಯಾಗಿತ್ತು. ಇನ್ನೊಂದು ಫೋನ್‌ ಬಂತು, ಗೂಗಲ್‌ ಡ್ರೈವ್‌, ಸಿಮ್‌ನಲ್ಲಿ ಸೇವ್‌ ಆಗಿದ್ದ ನಂಬರ್‌ಗಳೆಲ್ಲಾ ಹೇಗೋ ಬಂತು.. ಆದರೆ ಈ ಪಾಸ್‌ವರ್ಡ್‌ಗಳಿಂದಾಗಿ ಗಂಡನ ಕೈಯಲ್ಲಿ ಉಗಿಸಿಕೊಂಡಿದ್ದೇ ಆಯ್ತು..😛 

ನೆನಪಾಗಲಿ ಅಂತ ಕೆಲವು ಸರಳವಾಗಿರೋ ಪಾಸ್‌ವರ್ಡ್‌ಗಳನ್ನು ಇಟ್ಟುಕೊಂಡರೂ ಕನ್‌ಫ್ಯೂಶನ್‌..! ಯಾವುದೋ ಪಾಸ್‌ವರ್ಡ್ ಇನ್ಯಾವುದಕ್ಕೋ ಹಾಕಿ, 24 ಗಂಟೆ ಬ್ಲಾಕ್‌ ಆದ ಫೋನ್‌ಪೇ..! ಫಾರ್‌ಗಾಟ್‌ ಪಾಸ್‌ವರ್ಡ್ ಕೊಟ್ಟರೆ ನನ್ನ ಇಮೇಲ್‌ಗೆ ಬರುವ ಪಾಸ್‌ವರ್ಡ್‌ ಆದೂ ಈ ಇ-ಮೇಲ್‌ ಪಾಸ್‌ವರ್ಡ್‌ ಕೂಡಾ ನೆನಪಿರಬೇಕಲ್ಲಾ..! ಫೇಸ್‌ಬುಕ್‌ ಅಂತೂ ಯಾವುದೋ ಕಾಲದಲ್ಲಿ ಹಳೆಯ ಯಾಹೂ ಮೇಲ್‌ನಿಂದ ಕ್ರಿಯೇಟ್‌ ಮಾಡಿದ್ದು, ಅದರದ್ದೂ ಕೂಡಾ ಪಾಸ್‌ವರ್ಡ್‌ ನೆನಪಿರಬೇಕೆ..?. ಥೂ.. ಅಂದುಕೊಂಡಿದ್ದೆ.. ಪುಣ್ಯಕ್ಕೆ ಕೊನೆಯ ಬಾರಿ ಪಾಸ್‌ವರ್ಡ್‌ ನೆನಪಾಗಿದ್ದು ಹಾಕಿ ಈ-ಮೇಲ್‌ ಓಪನ್‌ ಆದಾಗ ಉಸ್ಸಪ್ಪಾ ಅಂದಿದ್ದೆ.. 

ಇತ್ತೀಚೆಗೆ ಅಗತ್ಯಕ್ಕಾಗಿ  KBL App ಯೂಸ್‌ ಮಾಡಬೇಕಾಗಿತ್ತು, ಫೋನ್‌ ಹಾಳಾದ ಮೇಲೆ ಇನ್ನೊಂದು ಫೋನ್‌ಗೆ ಕರ್ನಾಟಕ ಬ್ಯಾಂಕ್‌ app ಹಾಕಿರ್ಲಿಲ್ಲ, ಮತ್ತೆ ಇನ್ಸ್ಟಾಲ್‌ ಮಾಡಬೇಕಾಯ್ತು.. ಅದೇನೋ ಮಾಡಿದ್ದಾಯ್ತು..ಮತ್ತೆ MPIN ಪಿನ್‌ ಚಿಂತೆ.. ನೆನಪಿಲ್ಲ. ಮರೆತುಬಿಟ್ಟಿದ್ದೆ..  ಒಂದು ಬಾರಿ ರಾಂಗ್‌ ಬಂದಿದ್ದು, ಇನ್ನೊಂದು ಬಾರಿ ಹಾಕೋ ಮುಂಚೆ ಸರಿ ನೆನಪು ಮಾಡ್ಕೋ ಇಲ್ಲಾಂದ್ರೆ ನನ್‌ಕೈಲಿ ಚೆನ್ನಾಗಿ ಉಗಿಸ್ಕೋತಿಯಾ ಅಂತ ಪತಿದೇವ್ರು ಕಣ್ಣು ಊರಗಲ ಮಾಡಿ ಇನ್ನಷ್ಟು ಹೆದರಿಸೋ ಥರ ಮುಂದೆ ಕುಳಿತಿದ್ರು.. ಏನಪ್ಪಾ ಮಾಡ್ಲಿ.. ಬಾಯಿಗೆ ಬಂದ ನಂಬರುಗಳನ್ನೆಲ್ಲಾ ಹೇಳ್ತಾ ಇದ್ದೆ.. ಜೊತೆಗೆ ನೆನಪಾಗಿದ್ದು ಇದೂ ಇರಲಿ ಅಂತ ಒಂದು ನಂಬರ್‌ ಹೇಳಿ  ಯಜಮಾನರನ್ನ ಬೆಸ್ತು ಬೀಳಿಸಿದ್ದೆ, ಅದೇ ಬೆಸ್ಕಾಂ ಹೆಲ್ಫ್‌ಲೈನ್‌ ನಂಬರ್‌.. 1912..! ಕರೆಂಟು ಕೈಕೊಟ್ಟಾಗೆಲ್ಲಾ ಡಯಲ್‌ ಮಾಡೋದು ಅದೇ ನಂಬರ್‌.. ಅದೂ ನೆನಪಾಗಿ ಹೇಳಿ ಮಂಗಳಾರತಿಯೂ ಆಯ್ತು. ಎರಡನೇ ಬಾರಿಯೂ ರಾಂಗ್‌ ಪಿನ್‌..! ಮೂರನೇ ಬಾರಿ ಕೊರಗಜ್ಜನನ್ನು ನೆನೆಸಿಕೊಂಡು ಅಂದಾಜಿಗೆ ನೆನಪಿಗೆ ಬಂದ ನಂಬರ್‌ ಟೈಪಿಸಿದಾಕ್ಷಣ ಗೂಗಲ್‌ ಪೇ ಓಪನ್‌ ಆಗೋಯ್ತು.. ಅಜ್ಜನಿಗೊಂದು ಮನಸಲ್ಲೇ ನಮಸ್ಕಾರ ಹಾಕಿದೆ, ಗಂಡನ ಬೈಗುಳದಿಂದ ಬಚಾವ್‌ ಆಗಿದ್ದಕ್ಕೆ..!

ಇದೆಲ್ಲಾ ಹೋಗ್ಲಿ ಬಿಡಿ.. ಎಟಿಎಂ ಪಿನ್‌ ನಂಬರ್‌ ಕೂಡಾ ಮರೆತು ಹೋಗೋದು ನನ್ನ ಕರ್ಮ.. ಅದೇನೋ ಮರೆವಿನ ಖಾಯಿಲೆ ಇದೆಯೋ ಗೊತ್ತಿಲ್ಲ..! ಎರಡು ಬ್ಯಾಂಕ್‌ ಅಕೌಂಟ್‌ ಇದ್ದು, ಒಂದರ ಪಿನ್‌ ಇನ್ನೊಂದು ಎಟಿಎಂ ಕಾರ್ಡ್‌ಗೆ ಹಾಕಿ, ಇನ್‌ಕರೆಕ್ಟ್‌ ಪಿನ್‌ ಬಂದಾಕ್ಷಣ ಫೋನಾಯೊಸೋದು ಮತ್ತೆ ಗಂಡನಿಗೆ..! ಮೊದಲು ಬೈಯುವ ಶಾಸ್ತ್ರ ಮಾಡಿ ಪಿನ್‌ ನಂಬರ್‌ ಹೇಳಿಬಿಡುತ್ತಾರೆ. 

ಪ್ರತಿತಿಂಗಳ ಆಸ್ಪತ್ರೆ ಭೇಟಿ ಸಮಯದಲ್ಲಿ ಪ್ರತಿಬಾರಿ ಇದು ಇದ್ದಿದ್ದೇ, ಒಮ್ಮೊಮ್ಮೆ ನನ್ನ ಎಟಿಎಂ ಪಿನ್‌ ಮರೆತುಬಿಟ್ರೆ ಕೆಲವೊಮ್ಮೆ ಯಜಮಾನರ ಎಟಿಎಂ ಪಿನ್‌ ನಂಬರ್‌ ಮರೆತು, ಅಲ್ಲಿ ಬಿಲ್‌ ಮಾಡುವ ಹುಡುಗಿ'' ಮೇಡಂ, ರಾಂಗ್‌ ಪಿನ್‌'' ಅಂದಾಗ ಬೆವರಿಳಿದುಬಿಡುತ್ತದೆ..! ಮತ್ತೆ ಗಂಡನಿಗೆ ಫೋನ್‌ ರೀ.. ಎಟಿಎಂ ಪಾಸ್‌ವರ್ಡ್‌ ಏನು ಅಂದಾಕ್ಷಣ ಆ ಕಡೆಯಿಂದ.. ''ನನ್‌ಮಗನೇ( ಯಜಮಾನರ ಬಾಯಿಯಿಂದ ಹೊರ ಬರುವ ಮೊದಲ ಮುದ್ದಾದ ಬೈಯ್ಗುಳ ಇದೇ..) ಎಷ್ಟು ಸಾರಿ ನಿನ್ಗೆ ಹೇಳೋದು.. ಬಾ ನೀನು ಹೊರಗೆ..'' ಅನ್ನುವ ಬೈಯ್ಗುಳ ಪ್ರತಿಬಾರಿ ಸಾಮಾನ್ಯ..! ಬಿಲ್ಲು ಮಾಡುವ ಹುಡುಗಿಯತ್ತ ಒಂದು ನಕಲಿ ಸ್ಮೈಲ್‌ ಕೊಟ್ಟು ಪತಿ ಹೇಳಿದ ಪಿನ್‌ ಟೈಪಿಸಿ ಹೊರಗೆ ಬಂದು ಗಪ್‌ಚುಪ್ಪಾಗಿ ಇದ್ದು ಬಿಡುತ್ತೇನೆ, ಆ ಕಡೆಯಿಂದ ಕ್ರೂರದೃಷ್ಟಿ  ಮಾತ್ರ ಬೀಳುತ್ತೇ. ಇನ್ನೊಂದು ಸಾರೀ ಹೀಗೆ ಆದ್ರೆ...ಅಷ್ಟೇ.. ಗದರಿಸಿ ಹೇಳಿ ನಡೆಯುತ್ತಾರೆ. ಒಂದು ಸಾರಿ ಅಲ್ಲ.. ಪ್ರತಿಸಾರಿಯೂ ನಡೆಯೋದು ಇದೇನೆ..! 

ನಿಮ್ಗೂ ಹೀಗೆ ಪಾಸ್‌ವರ್ಡ್‌, ಪಿನ್‌ಗಳೆಲ್ಲಾ ಮರೆತು ಹೋಗೋದಿದ್ರೆ ಎಲ್ಲಾದ್ರೂ ಒಂದು ಕಡೆ ನಿಮಗೆ ಅರ್ಥ ಆಗೋ ಹಾಗೇ, ಬೇರೆಯವರಿಗೆ ಅರ್ಥ ಆಗದ ಹಾಗೇ ನೋಟ್‌ ಮಾಡಿ ಇಟ್ಕೊಳ್ಳಿ, ಯಾಕಂದ್ರೆ ನಾನ್‌ ನೋಟ್‌  ಮಾಡ್ಕೊಂಡಿರೋ ಪಾಸ್‌ವರ್ಡ್‌, ಪಿನ್‌ ನಂಬರ್‌ಗಳು ಬೇರೆಯವರಿಗೆ ಅಲ್ಲ , ಕೆಲವೊಮ್ಮೆ.. ಅಲ್ಲಲ್ಲಾ.. ಯಾವಾಗ್ಲೂನೂ ನನ್ಗೇ ಅರ್ಥ ಆಗಲ್ಲ..!😜

 

Sunday 19 May 2019

ಬರಹ ಹುಟ್ಟುವ ಪರಿ ಹೀಗೆ..


        ಬರಹ.. ನಾನು ಇಷ್ಟ ಪಡುವ ಸಂಗಾತಿ.. ಬರಹ ಒಂಟಿತನದ ಜೊತೆಗಾತಿ.. ಬರಹಕ್ಕೆ ಇಂತಿಷ್ಟೇ ವಿಷಯಗಳು ಬೇಕೆಂದಿಲ್ಲ ಎನ್ನುವುದು ನನ್ನ ಅನಿಸಿಕೆ.. ಸೀರಿಯಸ್ ವಿಷಯಗಳ ಬಗ್ಗೆ ಬರೆದು ಓದುಗರನ್ನು ಇನ್ನಷ್ಟು ಸೀರಿಯಸ್ ಮಾಡುವ ಬರಹಗಳು ಬೇಕಾಗಿಲ್ಲ.. ಇಂದಿನವರಿಗೆ ಓದುವ ಪರಿಪಾಠವೂ ಇಲ್ಲ ಬಿಡಿ.. ಓದುತ್ತಾರೆಂದು ಬರೆದರೆ, ಆ ಬರಹದ ಆತ್ಮ ಸೊರಗಿ ಹೋಗಬಹುದು..
   ಓದುವವರಿಗೋಸ್ಕರ ಬರೆಯುವ ವರ್ಗ ಒಂದಾದರೆ, ತಮ್ಮತನವನ್ನು ಕಳೆದುಕೊಳ್ಳಲು ಇಷ್ಟಪಡಲಾರದೆ, ಬರಹದಲ್ಲೇ ತೃಪ್ತಿಯನ್ನು ಕಾಣುವ ಕೈಗಳ ವರ್ಗ ಒಂದಿದೆ. ಇಂತಹ ಕೆಟಗರಿಗೆ ಸೇರಿದವಳು ನಾನು..

      ನಾ ಬರೆಯುವ ಸಾಲು ನನ್ನ ಮನಸಿನಿಂದ ಬರುವ ಸಾಲುಗಳು, ಎಲ್ಲೋ ಓದಿ ನೆನಪಿಟ್ಟುಕೊಂಡು, ಒಟ್ಟು ಸೇರಿಸಿಕೊಂಡು ಮನೆಕಟ್ಟುವಂತೆ ಬರೆವ ಪದಗಳಲ್ಲಿ ಭಾವುಕತೆಯನ್ನು ತುಂಬಲು ಸಾಧ್ಯವಿಲ್ಲ.. ಮಾತು ನಿರರ್ಗಳವಾದಂತೆ, ಪದಗಳೂ ಕೈಗೆ ಸಿಲುಕಿ, ಕಣ್ಣು ಕುಕ್ಕುವ ಲ್ಯಾಪ್‍ಟಾಪ್ ಪರದೆಯಲ್ಲಿ(ಈಗೀಗ ಪೆನ್ನು, ಪುಸ್ತಕ ಹುಡುಕಿದರೂ ಸಿಗುವುದಿಲ್ಲ) ಚಂದದ ಪದವಾಗಿ, ಪುಟಗಳಲ್ಲಿ ಪೋಣಿಕೊಂಡಂತಿದ್ದರೆ ಮನಸಿಗೂ ನೆಮ್ಮದಿ..ಆತ್ಮತೃಪ್ತಿಯೂ..

   ಗಡಿಬಿಡಿಯ ಕೆಲಸದಲ್ಲೂ ಬರೆಯುವ ಆಸೆ ಇಣುಕಿದರೂ, ಸಮಯ 24 ಅಷ್ಟೇ. ಮೆಟ್ರೋ ಮೌನದಲ್ಲಿ ಆಗಾಗ ನೆನಪಾಗುವ ಸಾಲುಗಳನ್ನು ಬರೆದಿಡಬೇಕೆನಿಸುತ್ತದೆ, ಆದರೆ ತಣ್ಣಗಿನ ಗೂಡಿನೊಳಗಿಂದ ಬೆಚ್ಚನೆಯ ವಾತಾವರಣಕ್ಕೆ ಮರಳುವಾಗ ನೆನಪಾದ ಸಾಲುಗಳೂ ಮಾಯ.. ಯೋಚನಾಲಹರಿಯಲ್ಲಿ ಆ ಸಾಲುಗಳೂ ಮುಳುಗಿರುತ್ತವೆ.. 

    ಯೋಚನೆ ಅಂದಾಗ ನೆನಪು ಬಂತು ನೋಡಿ, ಚಿಕ್ಕವಳಿದ್ದಾಗ ಮನೆಯ ಹತ್ತಿರದ ಗುಡ್ಡದ ಮೇಲಿರುವ ಕಲ್ಲಿನ ಮೇಲೆ ಪರೀಕ್ಷೆಗೆ ಓದಲು ಕುಳಿತರೆ, ಪುಸಕ್ತದ ಹಾಳೆ ಗಾಳಿಗೆ ಹಾರುತ್ತಿತ್ತೇ ಹೊರತು, ಕಣ್ಣುಗಳು ಮಾತ್ರ ಶೂನ್ಯ ದೃಷ್ಟಿಯೊಂದಿಗೆ ಇಂತಹುದೇ ಸಾಲುಗಳನ್ನು ಮನದೊಳಗಡೇ ಬಿತ್ತುತ್ತಿತ್ತು.. ಆಗಲೇ ಬರಹಗಾರ್ತಿಯಾಗಬೇಕೆಂಬ ಕನಸು ಮೊಳೆತಿತ್ತು. ನಾನು ಚಿಕ್ಕವಳಿಂದಾಗಿನಿಂದ ಹಿಡಿದು ಕಾಲೇಜು ಓದುವವರೆಗೂ ಅದೇ ಕಲ್ಲಿನ ಮೇಲೆ ಕುಳಿತು ಓದುವ ನೆಪದಲ್ಲಿ ಜಗತ್ತನ್ನೇ ಮರೆಯುತ್ತಿದ್ದೆ.. ತಮಾಷೆ ಏನಪ್ಪಾ ಅಂದ್ರೆ ಎಂಸಿಜೆ ಮಾಡ್ತಾ ಇದ್ದ ಕಾಲದಲ್ಲಿ ನಾನು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲೆ ಯಾರೋ ಒಬ್ಬ ಐ ಲವ್ ಯೂ ಅಂತ ಒಂದು ಚೀಟಿಯಲ್ಲಿ ಬರೆದು ಫೋನ್ ನಂಬರ್ ಕೂಡ ಬರೆದಿಟ್ಟಿದ್ದ, ಆ ಅಪರಿಚಿತ ಪ್ರಾಣಿ ಯಾರೆಂಬುದು ಇದುವರೆಗೂ ಗೊತ್ತಾಗಿಲ್ಲ, ಹುಡುಕಲೂ ಹೋಗಿಲ್ಲ.. ಹುಡುಕುವ ಕುತೂಹಲವೂ ನನಗಿರಲಿಲ್ಲ.. ಹೀಗೆ ನಡೆದು ಹೋದ ಸಣ್ಣ ಸಣ್ಣ ಘಟನೆಗಳೇ ಮೂಲೆಯಿಂದ ಹೊರಬಂದು ಬರೆಯಲು ಪ್ರೇರೇಪಿಸುತ್ತದೆ.. ಮತ್ತೆ ಮತ್ತೆ..
       ಸುಮ್ಮನೆ ಕುಳಿತಾಗ, ಬೇಜಾರಾದಾಗ ಏನಾದ್ರೂ ಬರಿ.. ಬೇಜಾರು ಹೋಗತ್ತೆ ಎಂದು ಸ್ಫೂರ್ತಿ ತುಂಬುವ ಪತಿ. ಪ್ರತಿಬಾರಿ ಬ್ಲಾಗ್ ಬರೆದಾಗಲೂ ನನ್ನ ಬಗ್ಗೆ ಬರಿಯೇ ಎಂದು ಬರೆಯಲು ನೆನಪಿಸುವ ತಮ್ಮ, ಅಕ್ಷರ, ವ್ಯಾಕರಣಗಳು ತಪ್ಪಾದರೂ ಪ್ರತಿರಾತ್ರಿ 10 ಗಂಟೆಯ ಮೇಲೆ, ಎಲ್ಲರೂ ಮಲಗಿದ ಮೇಲೆ ಆ ದಿನ ನಡೆದ ಕೋಪ, ತಾಪವನ್ನೆಲ್ಲಾ ಡೈರಿಯೊಳಗಡೆ ಬರೆದಿಡುತ್ತಿದ್ದ ಅಜ್ಜ, ಬೇಸಿಗೆಯಲ್ಲಿ ಬೆವರಿಳಿಸಿದರೂ, ಮಳೆಗಾಲದಲ್ಲಿ ತಂಪಾಗಿಸುವ ನನ್ನೂರು ಕರಾವಳಿಯ ತೋಟ, ಗದ್ದೆ, ಬಯಲು, ಯಕ್ಷಗಾನ, ಕೋಲ, ನಾಗರ ಪಂಚಮಿ.. ಇಂದಿಗೂ ನೆನಪಿಸಿಕೊಂಡು ಎಂಜಾಯ್ ಮಾಡುವ ಬಾಲ್ಯ ಇವೆಲ್ಲವೂ ಬರಹಕ್ಕೆ ಸ್ಪೂರ್ತಿ ನೀಡುತ್ತದೆ..
    ಕೆಲವೊಮ್ಮೆ ಕತ್ತಲರಾತ್ರಿಯಲ್ಲೂ ಮಿನುಗುವ ಬೆಂಗಳೂರು, ಹಗಲಿನ ಬೆಳಕಲ್ಲಿ ಬೆತ್ತಲಾಗಿ, ಅವ್ಯವಸ್ಥೆಗಳ ವಿರಾಟ್ ರೂಪವನ್ನು ತೋರಿಸುವ ಬೆಂದಕಾಳೂರು ಕೂಡಾ ಬರೆಯುವಂತೆ ಪ್ರೇರೇಪಿಸುತ್ತದೆ. 
      ಖುಷಿಗಳಷ್ಟೇ ಸಾಕೇ..? ಇಲ್ಲ.. ಒಮ್ಮೊಮ್ಮೆ ಮಡುಗಟ್ಟಿದ ದುಃಖ ಅಕ್ಷರ ರೂಪದಲ್ಲಿ ಉಕ್ಕಿ ಬರಲು ಉತ್ತೇಜಿಸುವುದು.. ಎಲ್ಲವನ್ನೂ ಅಕ್ಷರಗಳಲ್ಲಿ ಕಕ್ಕಿದ ಮೇಲೆ ಮಳೆ ನಿಂತು ಹೋದಂಥ ಭಾವ.. ನಿರಾಳತೆ.. ಅನುಭವಿಸಲು ಅದು ಆ ಬರಹಗಾರನಿಗೆ ಮಾತ್ರ ಸಾಧ್ಯ.
     ನನ್ನ ಬರಹಗಳನ್ನು ನೋಡಿ ಓದಿದ ಓದುಗರು ಒಮ್ಮೊಮ್ಮೆ ಬರೀತಾ ಇರಿ ಹೀಗೆ ಅನ್ನೊದುಂಟು, ಹಾಗಂದ ಮಾತ್ರಕ್ಕೆ ಬರೆಯಲು ಸಾಧ್ಯವೇ..? ಇಲ್ಲ.. ಓದುಗರಿಗಾಗಿ ಬರೆದರೆ ಆತ್ಮಕ್ಕೂ ಶಾಂತಿ ದಕ್ಕದು.. ಎನ್ನುವುದು ನನ್ನ ಭಾವ.. ನನ್ನೊಳಗಿನ ಭಾವಗಳೇ ಬರವಣಿಗೆಯಾಗಬೇಕು, ಭಾವಗಳೇ ಕೈ ಹಿಡಿದು ಬರೆಸಬೇಕು. ಭಾವಗಳು ತುಂಬಿದ ಬರಹವೇ ನನ್ನೊಳಗೆ ಇನ್ನೂ ಬರೆಯಬೇಕೆಂಬ ಭಾವ ಹುಟ್ಟಿಸುವುದು.. 
 ಅತ್ತಿಯ ಹೂವರಳಲೂ ಕತ್ತಲಾಗಬೇಕಂತೆ..ಹಾಗೇನೆ ಚಂದದ ಪದಗಳು ಅರಳಬೇಕಾದರೆ, ಮನಸಾಗಬೇಕು.. ಭಾವಗಳು ಮೂಡಬೇಕು..  

Wednesday 1 May 2019

ದೇವಪ್ಪಣ್ಣನ ಅಂಗಡಿ..



ಸುಮಾರು 20 ವರ್ಷಗಳ ಹಿಂದೆ ನಮ್ಮೂರು ಅಷ್ಟೇನೂ ಪ್ರಗತಿ ಕಾಣದ ಊರು. ಮಂಗಳೂರಿನಿಂದ ಸುಮಾರು 23 ಕಿಲೋ.ಮೀ ದೂರದಲ್ಲಿದ್ದ ಪುಟ್ಟ ಊರು ಮುಡಿಪು. ಆ ಕಡೆಯಿಂದ ವಿಟ್ಲ, ಈ ಕಡೆ ಬಿಸಿರೋಡ್, ಇನ್ನೊಂದು ಕಡೆ ಮಂಗಳೂರು ಈ ಮೂರು ಪಟ್ಟಣಗಳಿಗೆ ಕೊಂಡಿಯಂತಿರುವ ಊರು ನಮ್ಮೂರು.
ಮುಡಿಪು ಎಂಬ ಊರನ್ನು ಗುರುತಿಸಲು ಮಧ್ಯದಲ್ಲಿ ಒಂದು ಅರಳೀಮರದ ಕಟ್ಟೆ, ಅದರ ಸುತ್ತಲೂ ಕಟ್ಟೆಯಂದನ್ನು ಕಟ್ಟಿ ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಆಸರೆಯಾಗಿಸಿದ್ದರು. ಪ್ರತಿ ವರ್ಷವೂ ಗಣೇಶಚತುರ್ಥಿಯಂದು ಆ ಕಟ್ಟೆಗೆ ಬಣ್ಣ ಕೂಡಾ ಬಳಿಯುತ್ತಾರೆ. ಇಂದಿಗೂ ಕೂಡಾ. 

ಇನ್ನೊಂದು ಆ ಕಾಲದ ಗುರುತೆಂದರೆ ದೇವಪ್ಪಣ್ಣನ ಅಂಗಡಿ, ಕುರ್ನಾಡು ಗ್ರಾಮಕ್ಕೆ ಮಾತ್ರವಲ್ಲ ಕುರ್ನಾಡು ಗ್ರಾಮದ ಮನೆ ಮನೆಯ ನೆಂಟರಿಷ್ಟರಿಗೂ ಚಿರಪರಿಚಿತ ದೇವಪ್ಪಣ್ಣನ ಅಂಗಡಿ. ಮರದ ಗೂಡಂಗಡಿಯೊಳಗೆ ಗಾಜಿನ ಬಾಟಲಿಯೊಳಗೆ ಕುಳಿತ ಮಿಠಾಯಿಗಳು, ಪಾರ್ಲೆಜಿ, ಟೈಗರ್, ಕ್ರ್ಯಾಕ್‍ಜ್ಯಾಕ್ ಬಿಸ್ಕತ್ತಿನ ಐದು ರೂಪಾಯಿಯ ಪುಟ್ಟ ಪ್ಯಾಕೆಟ್‍ಗಳು ಸಾಲಾಗಿ ಹಿಂದೆ ಜೋಡಿಸಿಟ್ಟಿರುತ್ತಿದ್ದರು ದೇವಪ್ಪಣ್ಣ. ಮರದ ಬುಟ್ಟಿಯಲ್ಲಿ ತರಕಾರಿಗಳು.. ಬೀಡಿ, ಬೆಂಕಿಪೊಟ್ಟಣ್ಣ, ಇವಿಷ್ಟೇ ದೇವಪ್ಪಣ್ಣನ ಅಂಗಡಿಯ ಆಸ್ತಿಗಳು.
.
ಅಂಗಡಿಯ ಮುಂದೆ ಎರಡು ಮರದ ಕಂಬಗಳನ್ನು ಹಾಕಿ ತಗಡಿನ ಶೀಟು ಹಾಕಿ ನೆರಳಿರುವಂತೆ ನೋಡಿಕೊಂಡಿದ್ದರು. ಎರಡು ಮರದ ಬೆಂಚು, ಒಂದು ಬೆಂಚಿನ ಮುರಿದ ಕಾಲಿನ ಬದಲು ಎರಡು ಕಲ್ಲುಗಳನ್ನು ಇಟ್ಟಿದ್ದ ನೆನಪು.. 

ಅಂದ ಹಾಗೆ ದೇವಪ್ಪಣ್ಣ ಎರಡೆರಡು ವೃತ್ತಿಗಳನ್ನು ನಿಭಾಯಿಸಿ ಜೀವನ ಮುನ್ನಡೆಸುತ್ತಿರುವವರು. ಪೋಸ್ಟ್‍ಮ್ಯಾನ್ ಆಗಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ, ಬೆಳಗ್ಗೆ ಮನೆಗೆ ಬಂದು ಮತ್ತೆ ತಮ್ಮ ಹಳೆಯ ಎಂ80ಯಲ್ಲಿ ಅಂಗಡಿಗೆ ತೆರಳಿದರೆ, ಪಕ್ಕಾ ವ್ಯಾಪಾರಸ್ಥರು.. ಊರಿನವರಿಗೆಲ್ಲಾ ತುಂಬಾ ಆತ್ಮೀಯರು ಮಾತ್ರವಲ್ಲದೇ, ಪರವೂರಿನವರಿಗೂ ಪರಿಚಿತರು ನಮ್ಮ ದೇವಪ್ಪಣ್ಣ.. ನಮ್ಮ ಏರಿಯಾದವರೇ ಆದುದರಿಂದ ನಾನಂತೂ ಅವರನ್ನು ದೇವಪ್ಪಮಾಮ ಅಂತ ಕರೆಯುತ್ತಿದ್ದೆ.. ಅವರ ಪುಟ್ಟ ಗೂಡಂಗಡಿಯ ಹಿಂದೆ ಎರಡು ಕಟ್ಟದ ಕೋಳಿಗಳನ್ನು ಕಟ್ಟುತ್ತಿದ್ದ ನೆನಪು..

ಈಗ 20 ವರ್ಷಗಳ ಹಿಂದಿಂದ್ದ ಊರಿನಂತಿಲ್ಲ ನಮ್ಮೂರು ಅಭಿವೃದ್ಧಿಯ ನೆಪದಲ್ಲಿ ಪ್ರಗತಿ ಕಾಣುತ್ತಿರುವ ಊರು, ಊರಿನ ಪಕ್ಕದಲ್ಲೇ ತಲೆ ಎತ್ತಿರುವ ಇನ್ಫೋಸಿಸ್ ಊರಿಗೊಂದು ಈಗೀಗ ಕಳೆಕೊಟ್ಟಿದೆ. ಅಂದ ಹಾಗೆ ದೇವಪ್ಪಣ್ಣನ ಅಂಗಡಿಯೂ ಈಗಿಲ್ಲ ರೋಡು ಅಗಲೀಕರಣದ ನೆಪದಲ್ಲಿ ಅಲ್ಲಿಂದ ಎತ್ತಂಗಡಿಯಾಗಿದೆ. ಯಾವುದೋ ಕಾಂಪ್ಲೆಕ್ಸಿನ ಮೂಲೆಯೊಂದರಲ್ಲಿ ತರಕಾರಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಈಗೀಗ ಬೇರೆ ಊರಿಂದ ಬಂದ ನೆಂಟರಿಗೆ ಬದಲಾದ ನಮ್ಮೂರು ಗುರುತು ಹಿಡಿಯಲು ಸ್ವಲ್ಪ ಸಮಯ ಬೇಕೆ ಬೇಕು, ಹಿಂದೆ ಆಗಿದ್ದರೆ ದೇವಪ್ಪಣ್ಣನ ಅಂಗಡಿ ಇತ್ತು.. ಬೇಗ ಗುರುತು ಸಿಕ್ತಾ ಇತ್ತು.. ಈಗ ತುಂಬಾ ಡೆವಲಪ್  ಆಗಿದೆ ಎನ್ನುವವರಿಗಂತೂ ಲೆಕ್ಕವಿಲ್ಲ. ಹಾಗೇನೆ ಮುಡಿಪಿನ ಕಟ್ಟೆ ವರ್ಷವೂ ಬಣ್ಣ ಹಚ್ಚಿಕೊಳ್ಳುವುದಂತೂ ಮರೆಯುವುದಿಲ್ಲ.  

ಕಾಲ ಬದಲಾಗಿದೆ, ನಮ್ಮೂರು ಬದಲಾಗಿದೆ.. ದೇವಪ್ಪಣ್ಣನ ಅಂಗಡಿ ಬದಲಾಗಿದೆ, ಆದರೆ ದೇವಪ್ಪಣ್ಣ ಮಾತ್ರ ಬದಲಾಗಿಲ್ಲ. 2ಜಿಯಿಂದ 5ಜಿಯತ್ತ ಕಾಲ ಬದಲಾದರೂ ದೇವಪ್ಪಣ್ಣ ಮಾತ್ರ ಮೊಬೈಲು ಇಟ್ಟುಕೊಂಡಿಲ್ಲ. ಮೆಸೇಜ್, ಈಮೇಲ್, ವಾಟ್ಸ್ಯಾಪ್, ಸ್ನ್ಯಾಪ್‍ಚಾಟ್ ಬಂದರೂ ದೇವಪ್ಪಣ್ಣ ಅಂಚೆ ಪ್ರೀತಿಗೆ ಅವೆಲ್ಲವೂ ಮಾರು ದೂರ ನಿಂತಿದೆ. ಮೊಬೈಲ್ ಇಲ್ಲದೇ ದಿನವೇ ನಡೆಯಲ್ಲ ಅನ್ನುವ ಮಂದಿಗೆ ಮಾದರಿಯಾಗಿ ದೇವಪ್ಪಣ್ಣ ಇಂದಿಗೂ ಮೊಬೈಲ್ ಇಲ್ಲದೆಯೇ ವ್ಯವಹಾರ ನಡೆಸುತ್ತಾರೆ. ಇಂದಿಗೂ ಬ್ರಹ್ಮಚಾರಿಯಾಗಿ ಬದುಕು ನಡೆಸುತ್ತಿರುವ ದೇವಪ್ಪಣ್ಣ ತಮ್ಮ ವೃತ್ತಿ ಪ್ರೀತಿ, ವೃತ್ತಿಯ ಮೇಲಿನ ಗೌರವವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಮೊಬೈಲ್ ಇಲ್ಲದೇ ಸಂತೋಷವಾಗಿರುವ ದೇವಪ್ಪ ಮಾಮ ನಾ ಕಂಡ ವ್ಯಕ್ತಿಗಳ ಸಾಲಿನಲ್ಲಿ  ವಿಶೇಷ ಸ್ಥಾನ ಪಡೆದಿದ್ದಾರೆ. ಬಹುಶಃ ಇಂತಹ ಅಂಚೆ ವೃತ್ತಿ ಪ್ರಿಯರಿಂದಲೇ ಪೋಸ್ಟ್ ಆಫೀಸುಗಳು ಇನ್ನೂ ಉಳಿದುಕೊಂಡಿದೆ. 

ಒಳಮನಸಿನ ವಿಷಾದಗಳು..


ಪ್ರೀತಿಯ ಕೈಹಿಡಿದು ಒಳಗೆ ಕಾಲಿಟ್ಟ ಮನಸ್ಸಿನಲ್ಲಿದ್ದಿದ್ದು ನೂರೊಂದು ಕನಸುಗಳು.. ದಿನಗಳುರುಳಿದಂತೆ ಕಂಡಿದ್ದು ಕನ್ನಡಿಯೊಳಗಿನ ಕಾಣದ ಪ್ರತಿಬಿಂಬಗಳು.. ನನ್ನದಲ್ಲದ ಭಾಷೆಯ ಒತ್ತಡಗಳು.. ಪ್ರೀತಿಯೆಂಬ ಭಕ್ತಿ ಇದ್ದರೆ ಸಾಕು ಭಗವಂತನೊಲಿವ ಎನ್ನುವ ಮನಸಿಗೆ, ಮಂತ್ರಗಳು, ಪೂಜೆಗಳೆಂಬ ಭಯಸಹಿತ ಭಕ್ತಿ ಗಂಟಲಿನಲ್ಲಿ ಸಿಕ್ಕು ಚಡಪಡಿಸುತಿರಲು, ಮನದೊಳಗಿನ ದೇವನೂ ಕಂಗಾಲು.. 

ಕುತೂಹಲದಿ ಕ್ಲೈಮ್ಯಾಕ್ಸ್‍ಗೆ ಕಾಯುವಷ್ಟರಲ್ಲಿ, ಬದಲಾದ ಟಿವಿ ಪರದೆಗಳು.. ಬಹುಶಃ ಹೆಣ್ಣಿನ ದಿನಚರಿಯೇ ಕ್ಲೈಮ್ಯಾಕ್ಸ್ ಇರದ ಕಥೆಯಂತೆ.. ಬರೆಯುತ್ತಾ ಹೋದಂತೆ ಫುಲ್‍ಸ್ಟಾಪ್ ಇರದ ಲೇಖನದಂತೆ.. 
ಜಠರಾಗ್ನಿ ಕುದಿದಂತೆ, ಇನ್ನೂ ಕುದಿಸುವ ತುತ್ತುಗಳು.. ಪಂಚೇಂದ್ರಿಯಗಳಲ್ಲೂ ನೀರೋ ನೀರು.. ಎಡಗಣ್ಣಲ್ಲಿ ನೀರು ಸುರಿದರೆ ನೋವಂತೆ.. ಇದುವರೆಗೂ ಬಲಗಣ್ಣಲ್ಲಿ ನೀರು ಸುರಿದಿಲ್ಲ ಯಾಕೆ ಎಂದು ಮನಸ್ಸಿನ ಮೂಲೆಯಲ್ಲೊಂದು ಕೂಗು ಎದ್ದಿದೆ.. ಮತ್ತೆ ಎಡಗಣ್ಣು ತೇವವಾಗಿದೆ.. 
ಅಪಘಾತ ಆಘಾತವಾಗಿ ಬದುಕು ಬದಲಿಸಬಹುದು, ಕಣ್ತೆರೆಸಬಹುದು. ಕಣ್ತೆರೆದಿದೆ.. ಅತೃಪ್ತ ಬಯಕೆಗಳು ಹೊರಗೆ ಬಂದಿದೆ.. ಒಳ್ಳೆಯದಕ್ಕೆ ಕಾರಣ ನಾನಾದರೂ ಬೆನ್ನ ಹಿಂದೆ ಕಾಣದಾಗಬಹುದು, ಆದರೆ ಕೆಟ್ಟದಕ್ಕೆಲ್ಲವೂ ಕಾರಣ ನಾನಾಗಬಹುದು.. ಸತ್ಯ ಕಣ್ಣ ಮುಂದೆ ಕುಸಿದು ಕುಳಿತರೂ, ಸುಳ್ಳಿನ ಬೆನ್ನೇರಿ ಹೊರಟು ಬಿಡುವವರಿಗೆ ಸತ್ಯವೆನ್ನುವುದು ಕಾಣಿಸದು..
ನೀನಿನ್ನು ಸ್ವತಂತ್ರ ಎಂದು ರೆಕ್ಕೆ ಕತ್ತರಿಸಿ ಹಾರಿಸಿದರೆ, ಹಕ್ಕಿ ಹಾರುವುದೇ..? ಹೆತ್ತಾಕೆಗೆ ಮಗನೆಂಬ ವಾತ್ಸಲ್ಯ.. ನೀನೆ ನನ್ನ ಸರ್ವಸ್ವ ಎಂದು ಬಂದಾಕೆಗೆ ಪ್ರೀತಿಯೇ ಬಂಧನವಾದರೆ, ಬದುಕಿನ ಹಾಳೆಗಳಿಗೆ ಹೇಗೆ ಬಣ್ಣ ಹಚ್ಚುವುದೆಂದು?. ಕೊರಳಸೆರೆ ಹರಿದು ಬಂದರೂ ಧ್ವನಿ ಹೊರಡದಂತೆ ನಾಲ್ಕು ಗೋಡೆಗಳ ಮಧ್ಯೆ ಮೌನವಾಗಬೇಕು.. ಖಾಲಿ ಗೋಡೆಗಳನ್ನು ದಿಟ್ಟಿಸುತ್ತಾ ನಾಳೆಯ ಚಿತ್ರಗಳನ್ನು ಕಲ್ಪಿಸಿಕೊಳ್ಳಬೇಕು..
ಕಾಂಚಾಣದ ಮೇಲೆ ಜೀವನ ತೂಗುಯ್ಯಾಲೆಯಾಡುತಿದೆ. ಇಷ್ಟವಿಲ್ಲದ ಕೆಲಸ, ಕಷ್ಟಪಟ್ಟು ಮಾಡಹೊರಟರೆ, ಮೂಲೆಯಲ್ಲಿರುವ ಲೇಖನಿ ಅಳುತ್ತದೆ.. ನೋವೆಂದರೂ ಬಿಡದ ವರ್ಕೋಹಾಲಿಕ್ ಮನೋಸ್ಥಿತಿಗಳು.. ಮೆಟ್ರೋ ಸದ್ದೊಳಗೆ ನೋವು ಮೌನವಾಗಿ ಹುದುಗಿಹೋಗುತ್ತದೆ. ಮನಸೂ ಯಂತ್ರವಾಗಿದೆ.. ಬದುಕು ಯಾಂತ್ರಿಕವಾಗಿದೆ. ಅಡ್ಜಸ್ಟ್ ಎನ್ನುವ ಪದಗಳು ಲೈಫ್ ಡಿಕ್ಷನರಿಯ ಪುಟಗಳನ್ನು ಆವರಿಸಿದೆ. 
ಅಡ್ಜಸ್ಟ್ ಎನ್ನುವ ಪದಗಳು ಮನಸಿಂದ ಹೊರಬಂದ ಲಾವಾರಸವನ್ನೂ ತಣ್ಣಗಾಗಿಸಿದೆ. ಅಡ್ಜಸ್ಟ್ ಎನ್ನುವ ಪದ ಎಲ್ಲದಕೂ ಅಡ್ಡಗಾಲು ಹಾಕಿ, ಮನಸಿನ ಮಾತು ಆಚೆ ಬರದಂತೆ ಮಾಡಿದೆ. ನಿನ್ನಿಂದಲೇ ಎನ್ನುವ ಮಾತು ಈಗೀಗ ಹೊರಬರುತಿದೆ. ಬಿಕ್ಕಳಿಸಲೂ ಕೇಳಿ ಬಿಕ್ಕಳಿಸಬೇಕು, ಪ್ರೀತಿಯೆಂಬ ಸಂಕೋಲೆ ಎಲ್ಲವನ್ನೂ ಬಂಧಿಸಿದೆ.. ಮನಸಲ್ಲಿ ಮೂಡಿದ ಪದಗಳನ್ನು ಬರೆಯುವುದಕ್ಕೂ ಕೇಳಬೇಕಿದೆ. ಈಗೀಗ  ಪುಟ್ಟ ಹೆಜ್ಜೆ ಗುರುತೊಂದನು ಮನದಲಿ ಮೂಡಿಸುವಾಸೆ.. ಮತ್ತದೇ ಕೈಗಳು ಬಂಧಿಸಿದೆ.. ಹೊರಬರದಂತೆ..

Monday 31 December 2018

ಅರಿವಿನ ಮೊದಲ ಗುರು ನಮ್ಮಜ್ಜ..

ಜಗವೆಲ್ಲ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ನಮ್ಮ ಕುಟುಂಬಕ್ಕೆ ಮಾತ್ರ ಹೊಸ ವರ್ಷ ಆಘಾತ ತಂದಿತ್ತು. ಅದೇ ನಮ್ಮೆಲ್ಲರ ಪ್ರೀತಿಯ ಅಜ್ಜನ ಮರಣ. ಜನವರಿಗೆ 2ಕ್ಕೆ ಅಜ್ಜ ನಮ್ಮನ್ನಗಲಿ 2ವರ್ಷ.. ನಮ್ಮೂರು, ಕರಾವಳಿ, ಮಂಗಳೂರು, ಬೆಂಗಳೂರಿನ ಬಗ್ಗೆ ಬರೆದ ನನಗೆ ಅಜ್ಜನ ಬಗ್ಗೆ ಬರೆಯದೇ ಹೋದರೆ ಆದೀತೇ. ನನ್ನಲ್ಲಿ ಬರವಣಿಗೆ, ಓದಿನ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿದವರೆ ನಮ್ಮಜ್ಜ ಎಂದರೆ ತಪ್ಪಾಗಲಾರದು..

ಮೊದಲನೇಯ ಪ್ರೀತಿಯ ಮೊಮ್ಮಗಳಾಗಿದ್ದ ನನಗೆ ಅಜ್ಜ ಪೇಪರ್‍ನಲ್ಲಿ ಕಟ್ಟಿಸಿಕೊಂಡು ತರುತ್ತಿದ್ದ ಕಡಲೇ, ಚಾಕಲೇಟುಗಳ ಜೊತೆಗೆ ಸಣ್ಣ ಪೇಪರ್‍ನ ತುಂಡುಗಳು ಓದುವ ಗೀಳು ಹತ್ತಿಸಿತ್ತು.  ಎರಡನೇ ಕ್ಲಾಸ್ ಓದಿದ್ದ ತಾತನಿಗೆ ಡೈರಿ ಬರೆಯುವುದೆಂದರೆ ಬಹಳ ಅಚ್ಚುಮೆಚ್ಚು.. ಪ್ರತಿದಿನ ನಡೆದ ಘಟನೆಗಳನ್ನ ಅಕ್ಷರಗಳ ರೂಪದಲ್ಲಿ ಜೋಡಿಸುತ್ತಿದ್ದರು. ತಮಾಷೆಯೆಂದರೆ ಆ ದಿನ ಮಾಡಿ ಕೊಟ್ಟ ತಿಂಡಿಯನ್ನು ಕೂಡ ನನಗಿವತ್ತು ಇಷ್ಟೇ ದೋಸೆ ಹಾಕಿಕೊಟ್ಟಿದ್ದು ಎಂದೂ ತಮ್ಮ ಕೋಪವನ್ನೂ ಅಕ್ಷರಗಳ ಮೂಲಕ ಹೊರಹಾಕುತ್ತಿದ್ದರು ಅಜ್ಜ. ನಾನು, ಚಿಕ್ಕಮಾವ ಡೈರಿಯನ್ನು ಕದ್ದು ಓದಿ ನಕ್ಕಿದ್ದೂ ಇದೆ. ಅಸಹನೆ, ಕೋಪ, ಯೋಚನೆಗಳನ್ನು ಡೈರಿಯ ಮೂಲಕ ಬರೆದಿಡುತ್ತಿದ್ದ ಅವರ ದಿನಚರಿಯನ್ನು ಇಂದಿನ ಕಾಲದಲ್ಲಿ ಪಾಲಿಸುವವರು ತುಂಬಾ ವಿರಳ ಯಾಕೆಂದರೆ, ಕೆಲಸ ಮುಗಿಸಿ ಬರೋವಾಗಲೇ ತಡರಾತ್ರಿ, ಇನ್ನು ಮಲಗುವಾಗ ಎಲ್ಲರ ವಾಟ್ಸ್ಯಾಪ್ ಸ್ಟೇಟಸ್‍ಗಳನ್ನು ನೋಡುವಾಗ ನಿದ್ದೆ ಆವರಿಸುತ್ತದೆ. ಅಲ್ಲವೇ..?
ಓದಿನ ವಿಚಾರಕ್ಕೆ ಬಂದರೆ ಕಾದಂಬರಿ ಓದುವ ಹುಚ್ಚು ನಮ್ಮಜ್ಜನಿಗೆ.. ಚಿಕ್ಕ ಮಾವ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಲೈಬ್ರೆರಿಯಿಂದ ತರುತ್ತಿದ್ದ ಕಾದಂಬರಿಗಳಿಗೆ ನಮ್ಮೊಳಗೇ ಎಷ್ಟೋ ಜಗಳಗಳಾಗುತ್ತಿದ್ದವು. ಆ ಕಾಲದಲ್ಲಿ ಕರೆಂಟೂ ಇರಲಿಲ್ಲ. ಚಿಮಿಣಿ ದೀಪದ ಬೆಳಕಿನಲ್ಲಿ ಮರದ ಚೇರ್‍ನಲ್ಲಿ, ಟೇಬಲ್ ಮೇಲೆ ಕಾದಂಬರಿಯನ್ನಿಟ್ಟು, ಕಪ್ಪು ಕನ್ನಡಕ ಹಾಕಿ ಪುಸ್ತಕದೊಳಗೆ ಮುಳುಗಿ ಹೋಗುತ್ತಿದ್ದ ಅಜ್ಜನಿಗೆ ಸಮಯದ ಅರಿವೇ ಇರ್ತಾ ಇರ್ಲಿಲ್ಲ.. ಕೆಲವೊಮ್ಮೆ ಮಧ್ಯರಾತ್ರಿ ಎರಡು, ಮೂರು ಗಂಟೆಯೂ ಆಗುತ್ತಿದ್ದದ್ದುಂಟು. ಈಗೀಗ ನಮ್ಗೆ ಓದಲೂ ಟೈಮಿಲ್ಲ, ಲೈಬ್ರೆರಿಯ ಹಾದಿ ಗೊತ್ತಿಲ್ಲ. ಕಾಲೇಜಿನ ದಿನಗಳಲ್ಲಿ ಶಪಥ ಮಾಡಿದ್ದುಂಟು ಜಾಬ್ ಸಿಕ್ಕಮೇಲೆ ಪ್ರತಿ ತಿಂಗಳ ಸಂಬಳದಲ್ಲೂ ಒಂದೊಂದು ಪುಸ್ತಕ ತಗೋಬೇಕು, ಮನೆಯನ್ನೇ ಲೈಬ್ರರಿ ಮಾಡಬೇಕೆನ್ನುವ ಕನಸು. ಎರಡು ವರ್ಷ ಪಾಲಿಸಿದ್ದೆನಷ್ಟೇ. ಕೊಂಡ ಪುಸ್ತಕಗಳನ್ನು ಆಸಕ್ತ ಓದುಗರಿಗೆ ಕೊಟ್ಟು ಎಷ್ಟೋ ಪುಸ್ತಕ ಇಂದಿಗೂ ಹಿಂತಿರುಗಿ ಬಂದಿಲ್ಲ..ಎನ್ನುವ ಸಂಕಟ ಹೊಟ್ಟೆಯೊಳಗೆ ಇನ್ನೂ ಇದೆ.
ಇನ್ನೊಂದು ವಿಷಯ ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಮಲೆನಾಡಿನವರು, ಅಜ್ಜಿ ಹೇಳಿದ ಹಾಗೆ ಶಿವಮೊಗ್ಗದಲ್ಲಿ ಅಜ್ಜನ ಅಮ್ಮ ಇದ್ದಿದ್ದಂತೆ. ಅಜ್ಜನ ಅಪ್ಪ ಅಂದರೆ ನನ್ನ ಮುತ್ತಜ್ಜ ಎರಡನೇ ಮದುವೆಯಾಗಿದ್ದರಂತೆ.. ಅಜ್ಜಿಯನ್ನು ಮದುವೆಯಾದ ಬಳಿಕ ಮರಳಿ ಘಟ್ಟದ ಕೆಳಗೆ ಬಂದ ನಮ್ಮಜ್ಜ ಬೆಳ್ತಂಗಡಿಯ ಗೇರುಕಟ್ಟೆಯ ಶಾಂತಿಕೊಡಿಯಲ್ಲಿ ತಮ್ಮ ಸುದೀರ್ಘ ಜೀವನವನ್ನು ಕಳೆದಿದ್ದಾರೆ. ಹೇಳಬೇಕೆಂದರೆ ನಮ್ಮಜ್ಜ ಅಪ್ಪಟ ಕೃಷಿಕ ಒಂದು ರೀತಿಯಲ್ಲಿ ಅಜಾನುಬಾಹು. ಮುಂಜಾನೆ ಅವರನ್ನು ಕಾಣುತ್ತಿದ್ದುದೇ ಒಂದು ಕೈಯಲ್ಲಿ ಹಾರೆ ಅಥವಾ ಗುದ್ದಲಿ, ಬಿಳಿ ಪಂಚೆಯಲ್ಲಿ. . ಸೂರ್ಯ ಎದ್ದು ಸ್ವಲ್ಪ ದೂರ ಹೋದ ನಂತರವೇ ತೋಟದಿಂದ ಬಂದು ಕೈಕಾಲು ತೊಳೆದು ಅವರದೇ ದೊಡ್ಡದಾದ ಸ್ಟೀಲ್ ಲೋಟದಲ್ಲಿ ಚಹಾ, ತಿಂಡಿ ತಂದಿಟ್ಟು, ಅದನ್ನು ತಿಂದರೆಂದರೆ ಬೆಳಗ್ಗಿನ ಕೆಲಸ ಅರ್ಧ ಆಗಿಹೋಗುತ್ತಿತ್ತು, ಆದಿನ ಕೊಯ್ದ ತರಕಾರಿಯನ್ನು ಒಂದು ಚೀಲದೊಳಗೆ ಹಾಕಿ ಬಿಳಿ ಪಂಚೆ, ಬಿಳಿ ಶರಟು ಹಾಕಿ ಅಂಗಡಿಗೆ ಹೊರಟರೆಂದರೆ ಮರಳಿ ಬರುವಾಗ ಮಕ್ಕಳಿಗೆಂದೇ ಕಡಲೇ ಅಥವಾ ಚಾಕಲೇಟು ಮಾಮೂಲಿ. ತರದೇ ಹೋದರೆ, ಮರದ ಟೇಬಲ್‍ನ ಕಪಾಟಿನೊಳಗೆ ಕೀ ಹಾಕಿದರೆಂದರೆ ಚಾಕಲೇಟು ಅದರಲ್ಲಿ ಇದ್ದೇ ಇರುತ್ತಿತ್ತು.
ಸ್ವಲ್ಪ ದೊಡ್ಡವರಾದ ಮೇಲೆ ನಮ್ಮನ್ನೂ ಅಲಸಂದೆ ಕೀಳಲು, ನೀರು ಹಾಕಲು ಕರೆದುಕೊಂಡು ಹೋಗ್ತಾ ಇದ್ದ ನಮ್ಮಜ್ಜನಿಗೆ ಮನಸ್ಸಲ್ಲೇ ಎಷ್ಟು ಬೈಯುತ್ತಿದ್ದೆನೋ ಗೊತ್ತಿಲ್ಲ, ಹೊಟ್ಟೆಯೊಳಗೆ ಹುಳ ಚುರು ಚುರು ಎನ್ನುತ್ತಿದ್ದಂತೆ ಆಯ್ತಾ.. ಆಯ್ತಾ, ಸಾಕಾ.. ಅಜ್ಜಾ ಎನ್ನುವ ಮಾತುಗಳು ಅಳುಮುಖದೊಂದಿಗೇ ಬರುತ್ತಿತ್ತು. ಅಜ್ಜ ಸಾಕು ಎಂದರೆ ಸಾಕು ಅಬ್ಬಾ ಎಂದು ಮನೆಗೆ ಓಡುತ್ತಿದ್ದವು. ಬೆಳಗ್ಗೆಯಿಂದ ಸೂರ್ಯ ಮುಳುಗಿ ಇನ್ನೇನು ಕಾಣುತ್ತಿಲ್ಲ ಕತ್ತಲು ಅನ್ನೋವರೆಗೂ ತೋಟದಲ್ಲೇ ಕಳೆಯುತ್ತಿದ್ದರು ನಮ್ಮಜ್ಜ.
ನಮ್ಮ ಅಮ್ಮ, ಚಿಕ್ಕಮ್ಮ, ಮಾವಂದಿರೆಲ್ಲಾ ಚಿಕ್ಕವರಿರಬೇಕಾದರೆ ತುಂಬಾ ಜೋರಿದ್ದರಂತೆ ಅಜ್ಜ. ಒಮ್ಮೆ ನಾನು ಪ್ರೈಮರಿಯಲ್ಲಿ ಓದುತ್ತಿದ್ದಾಗ ಗಣಿತ ಹೇಳಿಕೊಡುತ್ತಿದ್ದ ಚಿಕ್ಕಮ್ಮ ಸ್ಕೇಲ್‍ನಿಂದ ಹೊಡೆದಿದ್ದರು, ಆಕಾಶ ಭೂಮಿ ಒಂದಾಗುವಂತೆ ಅತ್ತಿದ್ದನ್ನು ನೋಡಿ ನಮ್ಮಜ್ಜ ಇನ್ನುಮೇಲೆ ಯಾರಾದ್ರೂ ಹೊಡೆದ್ರೆ ಜಾಗೃತೆ ಎಂದು ಬೈದಿದ್ದರು. ಅಂದೇ ಕೊನೆ ಇದುವರೆಗೂ ಯಾರು ನನ್ನ ಹೊಡೆದದ್ದಿಲ್ಲ. ಅಷ್ಟು ಮುದ್ದಿನಿಂದ ನೋಡಿಕೊಂಡಿದ್ದರು ಮೊಮ್ಮಗಳನ್ನು. ವಯಸ್ಸಾಗುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಕೋಪ, ತಾಪಗಳೆಲ್ಲ ಕಡಿಮೆಯಾಗುತ್ತಿತ್ತು. ಒಂದೊಂದೇ ಹಲ್ಲು ಬೀಳುತ್ತಿತ್ತು. ಅಜ್ಜ ಪ್ರೀತಿಯಿಂದ ನನ್ನನ್ನು ಬಂಗಾರು ಎಂದು ಕರೀತಿದ್ರು. ಕಾಲೇಜು ಓದುತ್ತಿರುವಾಗ ಒಮ್ಮೆ ಬಸ್ಸಿಳಿದು ರೋಡು ದಾಟುತ್ತಿದ್ದೆ, ನಮ್ಮ ಬಸ್‍ಸ್ಟಾಪ್‍ನಲ್ಲೊಂದು ಪುಟ್ಟ ಅಂಗಡಿ, ಮೂರ್ನಲ್ಕು ಆಟೋ ರಿಕ್ಷಾ, ಸಂಜೆಯಾದರೆ ಮಾತುಕತೆಗೆ ಒಂದಷ್ಟು ಜನ ಸೇರಿರುತ್ತಿದ್ದರು. ಆ ಸಂಜೆ ನಮ್ಮ ಅಜ್ಜ ಅಲ್ಲಿದ್ದಿದ್ದು ನೋಡಿರಲಿಲ್ಲ, ಅವರೇ ನನ್ನನ್ನು ನೋಡಿ ಬಂಗರೂ ಎಂದು ಜೋರಾಗಿ ಕರೆದಿದ್ದರು, ಎಲ್ಲರಿಗೂ ಕೇಳಿಸಿತ್ತು.. ಆಮೇಲಿಂದ ಅಲ್ಲಿ ಎಲ್ಲರೂ ನನ್ನನ್ನು ಬಂಗರೂ ಎಂದೇ ಕರೆಯುತ್ತಾರೆ, ಈಗಲೂ ಕೂಡಾ.. ಅಜ್ಜ ಉಳಿಸಿಹೊದ ಹಸಿರಾದ ನೆನಪುಗಳು..
ವಯಸ್ಸಾದಂತೆ ವಯೋಸಹಜ ಖಾಯಿಲೆ ಆವರಿಸಿಬಿಟ್ಟಿತ್ತು.. ಹೃದಯದ ಸಮಸ್ಯೆ ಬೇರೆ, ಕೊನೆಗಾಲದಲ್ಲಿ ಡಯಾಬಿಟಿಸ್ ಕೂಡಾ ಕಿತ್ತು ತಿನ್ನಲು ಬಂದಿತ್ತು. ಒಂದು ಪಾಶ್ರ್ವ ಬಲವಿಲ್ಲದಂತಾಗಿತ್ತು. ಆದರೂ ಒಂದೇ ಕೈಯಲ್ಲಿ ಹಾರೆ, ಗುದ್ದಲಿ ಹಿಡಿದು ನಡೆಯುತ್ತಿದ್ದರು. ಸ್ವಲ್ಪ ಹಠವೂ ಜಾಸ್ತಿಯಾಗಿತ್ತು. ವಯಸ್ಸಾದಂತೆ ಮತ್ತೆ ಮಕ್ಕಳಂತಾಗುತ್ತಾರೆ ಎಂದು ಮಾವ ಹೇಳಿದ್ದ ನೆನಪು.. ನಮ್ಮಜ್ಜ ಸ್ವಲ್ಪ ಯಡಿಯೂರಪ್ಪನವರನ್ನು ಹೋಲುತ್ತಿದ್ದುದರಿಂದ ಯಡಿಯೂರಪ್ಪ ಎಂದು ಹೇಳಿ ನಗಿಸುತ್ತಿದ್ದೆವು, ಬೊಚ್ಚು ಬಾಯಲ್ಲಿ ಒಂದೇ ಹಲ್ಲು ಮಿನುಗುತ್ತಿತ್ತು ಕೂಡಾ. ಡಯಾಬಿಟೀಸ್ ಬಂದ ಮೇಲೆ ಎರಡು ಹೊತ್ತು ಚಪಾತಿ ಅಭ್ಯಾಸವಾಗಿಬಿಟ್ಟಿತ್ತು. ಅದೂ ನಾನು ಮಾಡುವ ಆಕಾರವಿರದ ಚಪಾತಿಯೆಂದರೆ ಸ್ವಲ್ಪ ಇಷ್ಟವೇ.. ಮಾವನೂ ನಾನು ಅಜ್ಜಿ ಮನೆಗೆ ಹೋದರೆ ಸಾಕು, ಅಜ್ಜನಿಗೆ ಇವತ್ತು ನೀನೇ ಚಪಾತಿ ಮಾಡು ಎಂದು ಅವರ ಕೆಲಸ ನನಗೇ ವರ್ಗಾಯಿಸುತ್ತಿದ್ದರು. ಪಾಶ್ರ್ವವಾಯು ಇದ್ದುದರಿಂದ ಕೈ ಕಾಲಿನ ಉಗುರುಗಳನ್ನೂ ಮೊಮ್ಮಕ್ಕಳೇ ಒಮ್ಮೊಮ್ಮೆ ತೆಗೆಯುತ್ತಿದ್ದೆವು. ಕೊನೆಗಾಲದಲ್ಲಿ ಮಗುವಿನಂತಾಗಿದ್ದರು ನಮ್ಮಜ್ಜ. ಅಂಗಡಿಗೆ ಹೋಗಲು ಕಾಲು ತಡವರಿಸುತ್ತಿದ್ದುದರಿಂದ ಮನೆಯಲ್ಲೇ ಚಡಪಡಿಸುತ್ತಿದ್ದರು ಪಾಪ.. ಅಜ್ಜಿ, ಮಾವನ ಕಣ್ಣು ತಪ್ಪಿಸಿ ಬೀಡಿ ಸೇದುತ್ತಿದ್ದರು.
ಕದ್ದು ಬೀಡಿ ಸೇದಿ ತೆಂಗಿನಮರವನ್ನೇ ಸುಟ್ಟು ಹಾಕಿದ್ದರು..! ಅಂದು ನಡೆದಿದ್ದು ಇಷ್ಟೇ ಮನೆಯ ಕೆಳಗೆ ಶೆಡ್‍ನಲ್ಲಿ ಬೀಡಿ ಸೇದಲು ಹೋಗಿ, ಉಳಿದ ಬೀಡಿಯ ತುಂಡನ್ನು ಹೊರಗೆ ಎಸೆದಿದ್ದರು. ಮಟ ಮಟ ಮಧ್ಯಾಹ್ನ ಬೇರೆ ಬಿಸಿಲಿಗೆ ಕಾದ ಹುಲ್ಲಿಗೆ ಕಿಡಿ ಅಂಟಿಕೊಂಡು ಕೆಳಗೆ ಬಾಗಿದ್ದ ತೆಂಗಿನ ಗರಿಗೆ ಅಂಟಿಕೊಂಡ ಬೆಂಕಿ ತೆಂಗಿನ ಮರವನ್ನು ಏರಿತ್ತು. ಬಿಸಿಲಿಗೆ ಬೆಂಕಿ ಧಗಧಗನೇ ಉರಿದಿತ್ತು. ಈ ವಿಷಯ ನಮಗೆ ಗೊತ್ತಾಗಿದ್ದರೂ ಅಜ್ಜನನ್ನು ಕೇಳಲು ಹೋಗಿರಲಿಲ್ಲ. ಅಷ್ಟರಮಟ್ಟಿಗೆ ಮೂರನೇ ಮಾವ, ಅಜ್ಜಿ ಅಜ್ಜನನ್ನು ಮಗುವಿನಂತೆ ನೋಡಿಕೊಂಡಿದ್ದರು. ಮಕ್ಕಳು ಮೊಮ್ಮಕ್ಕಳು ಅಜ್ಜಿ ಮನೆಗೆ ಹೋದರೆ ಸಾಕು ಖುಷಿಯಿಂದ ಮಾತನಾಡುತ್ತಾ ಇರುತ್ತಿದ್ದರು ಅಜ್ಜ, ಮನೆಗೆ ಕಾಲಿಟ್ಟ ತಕ್ಷಣವೇ ಕೆನ್ನೆಗೊಂದು ಮುತ್ತು ಕೊಡುತ್ತಿದ್ದರು ನಮ್ಮಜ್ಜ, ಹೊರಡುತ್ತಿದ್ದಂತೆ ಕಣ್ಣು ಕೆಂಪಾಗಿ ಅಳು ಉಕ್ಕಿ ಬಂದು ಕಣ್ಣೀರು ಇಳಿಯುತ್ತಿತ್ತು.
ಆ ದಿನ ಕೂಡ ಹೀಗೆ ಆಗಿತ್ತು. ಕ್ರಿಸ್‍ಮಸ್ ರಜಕ್ಕೆಂದು ನಾನು ಸೇರಿ ಮೂರು ಮೊಮ್ಮಕ್ಕಳು ಅಜ್ಜಿ ಮನೆಯಲ್ಲಿದ್ದೆವು. ಹೊಸ ವರ್ಷದಂದು ಕಾಲೇಜಿಗೆ ರಜೆ ಇತ್ತು, ಆ ದಿನ ಅಜ್ಜನಿಗೆ ನಾನೇ ಚಪಾತಿ ಮಾಡಿಕೊಟ್ಟಿದ್ದೆ, ತಂಗಿಯೊಬ್ಬಳು ಅಜ್ಜನಿಗೆ ಚಹಾ ತಿಂಡಿ ಕೊಟ್ಟಿದ್ದಳು, ಹಿಂದಿನ ದಿನ ಕಾಲ್ಬೆರಳು, ಕೈಯ ಉಗುರು ಕೂಡಾ ತೆಗೆದಿದ್ದವು. ಆ ದಿನ ಮೂವರೂ ಅವರವರ ಮನೆಗೆ ಹೊರಟಿದ್ದೆವು ಜನವರಿ 1, ಅಂದೂ ತಾತ ಅತ್ತಿದ್ದರು.. ಭಾರವಾದ ಹೃದಯದಿಂದಲೇ ಹೊರಟಿದ್ದೆವು. ಆ ದಿನ ಮಾತ್ರೆಗಳು ಮುಗಿದಿದ್ದರೂ ಮಾವನಿಗೆ ಹೇಳಿರಲಿಲ್ಲ ಅಜ್ಜ, ಸ್ವಲ್ಪ ಎದೆನೋವು ಎಂದು ಹೇಳಿದಾಗಲೇ ಮಾವನಿಗೆ ಗೊತ್ತಾಗಿದ್ದು, ರಾತ್ರಿ ಊಟ ಮುಗಿಸಿ ಮಲಗಿದ್ದಂತೆ, ಮೂರು ಗಂಟೆ ರಾತ್ರಿಗೆ ಹೃದಯಾಘಾತವಾಗಿತ್ತು. ಮಾವ, ಅಜ್ಜಿ ಪಕ್ಕದಲ್ಲೇ ಕಳೆದಿದ್ದರು, ಫೋನ್ ಬಂದಿತ್ತು.. ಗಡಿಬಿಡಿಯಿಂದಲೇ ಧಾವಿಸಿದ್ದೆವು..ನಿಶ್ಚಲವಾಗಿ ಬಿಳಿಯ ಹೊದಿಕೆಯಲ್ಲಿ ಮಲಗಿದ್ದರು ನಮ್ಮಜ್ಜ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...