Friday 30 November 2018

ನಾ ಕಂಡಂತೆ ಬೆಂಗಳೂರು..

ತುಂಬಾ ವರ್ಷಗಳ ಹಿಂದೆ ಕರಾವಳಿಯ ಹಳ್ಳಿಗಳಲ್ಲಿ ನಮ್ಮದೇ ಪ್ರಪಂಚದಲ್ಲಿ ಬೆಳೆಯುತ್ತಿದ್ದ ನಮಗೆ ಬೆಂಗಳೂರೆಂದರೆ ವಿಶೇಷ ಆಸಕ್ತಿ, ಒಬ್ಬರು ವಿದೇಶದಲ್ಲಿದ್ದಾರೆಂದರೆ ಅಚ್ಚರಿಯಿಲ್ಲ, ಅದೇ ಬೆಂಗಳೂರಲ್ಲಿ ಅಂದ್ರೆ, ಬೆಂಗಳೂರಾ..? ಎನ್ನುವ ಅಚ್ಚರಿ ತುಂಬಿದ ಕುತೂಹಲವೊಂದು ಇಣುಕುತ್ತಿತ್ತು.. ದೊಡ್ಡವರಾಗಿ ಬೆಳೆದಂತೆ ಮಾಧ್ಯಮಕ್ಷೇತ್ರದ ಆಕರ್ಷಣೆಗೆ ಒಳಗಾಗಿ ಬರಹವನ್ನು ಕೈಹಿಡಿದಾಗಿತ್ತು. ಸ್ನಾತಕೋತ್ತರವೂ ಮುಗಿದಿತ್ತು.. ಇನ್ನೇನು ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದ್ದ ಮಾಧ್ಯಮ ಕ್ಷೇತ್ರ ಕಣ್ಣಿಗೆ ಹಿತವಾಗಿತ್ತು. ಇಂಟರ್ನ್‍ಶಿಪ್ ನೆಪದೊಂದಿಗೆ ಬೆಂಗಳೂರಿನ ಬಸ್ ಹಿಡಿದಾಗಿತ್ತು..

ಮುಂಜಾನೆಯ ಚುಮು ಚುಮು ಚಳಿಯ ಅನುಭವವಾಗಿ, ಎದ್ದು ಕುಳಿತರೆ ಬೆಂಗಳೂರು ಹೊರವಲಯದ ಟೋಲ್‍ಗೇಟ್ ಹತ್ತಿರ ಬಸ್ ನಿಂತಿತ್ತು.. ಸೂರ್ಯನೂ ಕಣ್ಣುಬಿಟ್ಟಿಲ್ಲ.. ಆದರೆ ರಸ್ತೆಯ ಪೂರ್ತಿ ದಾರಿದೀಪದ ಬೆಳಕು ಆವರಿಸಿತ್ತು.. ಹೂವಿನ ಹಾರವನ್ನು ಹಿಡಿದುಕೊಂಡು ದಾವಣಿ ಹಾಕಿದ ಹುಡುಗಿ ರಸ್ತೆ ಬದಿಯಲ್ಲಿ ನಿಂತಿದ್ದಳು.. ಟೈಮ್ ನೋಡಿದರೆ ಐದಕ್ಕೆ ಇನ್ನೂ ಟೈಮ್ ಇದೆ.. ಸೂರ್ಯನಿಗಿಂತ ಮೊದಲು ಬೆಂಗಳೂರು ಎದ್ದಾಗಿತ್ತು.. ನಮ್ಮ ಹಳ್ಳಿಗಳಲ್ಲಿ ಜನ ಬೇಗ ಎದ್ದರೂ ಕೂಡಾ, ಗಡಿಬಿಡಿಯ ಬದುಕು ನಮ್ಮದಲ್ಲ.. ಆದರೆ ಬೆಂಗಳೂರಿನಲ್ಲಿ ಇವೆಲ್ಲವೂ ಅದಲು ಬದಲು..
ಬಸ್ ಇಳಿದಾಕ್ಷಣ ಬೆನ್ನು ಹಿಡಿವ ಆಟೋ ಚಾಲಕರು.. ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತಾರೆ. ನಮ್ಮೂರಿನಲ್ಲಿ ಬೆಂಗಳೂರು ಹೊರಡುವ ಮುನ್ನ ಒಂದು ಕಿವಿ ಮಾತು ಹೇಳಿ ಕಳುಹಿಸುತ್ತಾರೆ.. ‘ಏನೇ ಆದ್ರೂ ಮೆಜೆಸ್ಟಿಕ್‍ನಲ್ಲಿ ಆಟೋ ಹತ್ತೋಕೆ ಹೋಗಬೇಡ..’ 
ಒಂದೇ ತಿಂಗಳಲ್ಲಿ ಅರಿವಾಗಿಬಿಟ್ಟಿತ್ತು ಬೆಂಗಳೂರಿನ ನಿಜಸ್ವರೂಪ..ಇದಾದ ವರ್ಷಗಳ ನಂತರ ಉದ್ಯೋಗದೊಂದಿಗೆ, ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯೂ ಆಗಿ ಬೆಂಗಳೂರೇ ಇದೀಗ ಗಂಡನ ಮನೆಯಾಗಿಬಿಟ್ಟಿದೆ. 
ಮಂಗಳೂರಿನಿಂದ ನನ್ನ ಕನಸು ಕೆ.ಎ.19 ಕೂಡಾ ಬೆಂಗಳೂರಿನ ಹಾದಿಯನ್ನು ಸವೆಸಿದೆ.. ಅಭಿವೃದ್ಧಿಯ ಗುರುತಿಗೆ ಮೆಟ್ರೋ ಹಾದಿ ತಲೆಯೆತ್ತರದಲ್ಲಿ ಹಾದುಹೋಗಿದೆ. ಮೆಟ್ರೋ ಪಥದ ಕೆಳಗೆ ಟ್ರಾಫಿಕ್ಕು ಸಿಗ್ನಲುಗಳಲ್ಲಿ ಬಲೂನು, ಕಾರ್ ಮ್ಯಾಟ್ರೆಸ್‍ಗಳನ್ನು ಮಾರುವ ಕುಟುಂಬಗಳ ನೀಲಿ ಸೂರುಗಳು ಮುದುಡಿಕೊಂಡಿವೆ. ಮಳೆ ಬಂದರೆ ಸಾಕು ಕೊಚ್ಚಿಕೊಂಡುವ ಹೋಗುವ ರಾಜಕಾಲುವೆಗಳ ತಡಿಯಲ್ಲಿ ಗುಡಿಸಲುಗಳು ಹರಡಿಕೊಂಡಿದೆ. ಎತ್ತರದ ಖಾಸಾಗಿ ಕಂಪನಿಗಳ ಬಾನೆತ್ತರದ ಬಿಲ್ಡಿಂಗುಗಳ ಮಧ್ಯೆ ಸರ್ಕಾರಿ ಕನ್ನಡ ಶಾಲೆಗಳು ಉಸಿರು ಕಟ್ಟಿಕೊಂಡು ಗಪ್‍ಚುಪ್ಪಾಗಿ ಕುಳಿತುಕೊಂಡಿದೆ. 
ಇರುವೆ ನುಸುಳಲಾಗದ ಟ್ರಾಫಿಕ್ಕಿನ ಮಧ್ಯೆ ನೀಲಿ, ಕೆಂಪು ದೀಪದ ಆಂಬ್ಯುಲೆನ್ಸ್ ತೆವಳುತ್ತಾ ಮುಂದೆ ಸಾಗುತ್ತದೆ. ಪರವಾಗಿಲ್ಲ ಬೆಂಗಳೂರಿನಲ್ಲಿರುವ ಅಲ್ಪಸ್ವಲ್ಪ ಮಂದಿಗೂ ಮಾನವೀಯತೆ ಇದೆ ಎಂದು ಹಗುರಾಗುತ್ತೇನೆ.
ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸುವುದಂತೂ ಬೆಂಕಿಯಲ್ಲಿ ನಡೆದ ಹಾಗೆ.. ಮುಂದಿರುವ ಗಾಡಿಗೆ ನಮ್ಮ ಗಾಡಿ ಸ್ವಲ್ಪ ಸ್ಪರ್ಶಿಸಿದರೆ ಸಾಕು, ಗಾಡಿ ಅಪ್ಪಚ್ಚಿಯಾದಂತೆ ಮುಂದಿರುವ ಗಾಡಿಯವನ ಬಾಯಿಯಿಂದ ಕೇಳಲಾಗದ ಪದಗಳೆಲ್ಲ, ಕೇಳಿರದ ಪದಗಳೆಲ್ಲಾ ಕೇಳಬೇಕಾಗಬಹುದು.. ಹಿಂದೆ ಸ್ಪರ್ಶಿಸಿದ ಗಾಡಿ ಹುಡುಗಿಯರದ್ದಾದರೆ ಕೆಲವೊಮ್ಮೆ ಸ್ವಲ್ಪ ಎಕ್ಸ್‍ಕ್ಯೂಸ್..! 
ಕನ್ನಡಿಗರನ್ನು ಇಲ್ಲಿ ಹುಡುಕಬೇಕಾದರೆ, ರೆಸ್ಯೂಮ್ ಕೇಳಬೇಕು ಅಷ್ಟೇ, ಅಲ್ಲಿ ತವರೂರ ಹೆಸರು ಅಚ್ಚಾಗಿರುತ್ತದೆ. ಕನ್ನಡ ಗೊತ್ತಿದ್ದರೂ ಇಂಗ್ಲೀಷು ಮಾತನಾಡುವ, ತಮಿಳು ಭಾಷಿಕರಾಗಿ ಕನ್ನಡ ಮಾತನಾಡುವ ಅನೇಕ ಗೊಂದಲಗಳ ಮನುಷ್ಯರು ಇಲ್ಲಿದ್ದಾರೆ. ಗೊಂದಲಗಳ ಮನುಷ್ಯರು ಯಾಕೆಂದರೆ ಇಲ್ಲಿ ತರಕಾರಿ ವ್ಯಾಪಾರಿಗಳ ಬಳಿಯೂ ಕನ್ನಡದಲ್ಲಿ ವ್ಯವಹರಿಸಬೇಕೋ, ಇಂಗ್ಲೀಷಿನಲ್ಲಿ ಮಾತನಾಡದಿದ್ದರೆ ಮರ್ಯಾದೆಯ ಪ್ರಶ್ನೆಯೋ ಎಂದು ಯೋಚಿಸುವ ಜನರಿದ್ದಾರೆ. ಕನ್ನಡಿಗರಾದರೂ ಕನ್ನಡಿಗರೊಂದಿಗೆ ಇಂಗ್ಲೀಷಿನಲ್ಲೇ ಮಾತನಾಡಿ ಮರ್ಯಾದೆ ಹೆಚ್ಚಿಸಿಕೊಂಡಂತೆ ಫೀಲ್ ಆಗುವ ಜನರಿದ್ದಾರೆ. ನಮ್ಮ ಕರಾವಳಿಗರೇ ಬೆಸ್ಟು..(ವಿಶ್ವೇಶ್ವರ ಭಟ್ಟರ ಲೇಖನವೊಂದರಲ್ಲಿ ಉಲ್ಲೇಖಿಸಿದಂತೆ) ಅವನು ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಇನ್ನೊಬ್ಬ ತುಳುವ ಸಿಕ್ಕಿದರೆ ಸಾಕು ತುಳುವಿನಲ್ಲೇ ಮಾತನಾಡಿ ಪ್ರಪಂಚವನ್ನೇ ಮರೆತುಬಿಡುವ ಭಾಷಾಭಿಮಾನ ತುಳುವರದ್ದು..
ತಿನ್ನುವ ವಿಷಯಕ್ಕೆ ಬಂದರೆ ಇಲ್ಲಿ ಕುಳಿತು ತಿನ್ನುವ ವ್ಯವಧಾನವೂ ಯಾರಿಗಿಲ್ಲ. ಬೆಳಗ್ಗೆ ಎದ್ದು ರೆಡಿಯಾಗಿ ಬಂದು ಬಸ್ಸಿನಲ್ಲಿ ಬುತ್ತಿ ಬಿಚ್ಚುವ ಅನೇಕರಿದ್ದಾರೆ. ನಾವು ದುಡಿಯುವುದೇ ಹೊಟ್ಟೆಗಾಗಿ, ಅಂಥಾದ್ದರಲ್ಲಿ ಕುಳಿತು ತಿನ್ನುವುದಕ್ಕೇ ಇಲ್ಲಿ ಸಮಯವಿಲ್ಲ..ಸ್ವಾಮಿ..! ಕೆಲವೊಮ್ಮೆ ರಸ್ತೆ ಬದಿಯ ಗಾಡಿಯ ದೋಸೆ, ಇಡ್ಲಿಗಳೇ ಬೆಳಗ್ಗಿನ ಉಪಹಾರವಾಗಿಬಿಡುತ್ತೆ, ಮಧ್ಯಾಹ್ನವೂ ಗಾಡಿಯ ಊಟವೇ ಹೊಟ್ಟೆ ಸೇರುತ್ತದೆ. ಸಂಜೆಯಾದರೆ ಗೋಬಿ, ಎಗ್‍ರೈಸ್‍ಗಳು ನಾಲಿಗೆಗೆ ಸೆಟ್ಟಾಗಿವೆ. ಮೂಲೆ ಮೂಲೆಯಲ್ಲಿರುವ ಧಾರವಾಡ, ದಾವಣಗೆರೆ ಊರಿನ ಹೆಸರಿನ ರೊಟ್ಟಿ ಮನೆಗಳು, ತವರೂರು ಬಿಟ್ಟು ಕೆಲಸಕ್ಕೆ ಬಂದವರ ಹೃದಯ, ಹೊಟ್ಟೆಯನ್ನು ತಂಪಾಗಿಸುತ್ತೆ. ಖಾಸಗಿ ಕಂಪನಿಗಳ ಮುಂದೆ ಸ್ವಿಗ್ಗಿ, ಝೊಮ್ಯಾಟೋಗಳ ಪೆಟ್ಟಿಗೆಯಿಂದ ಬಿಸಿಯಾದ ತಿನಿಸುಗಳು ಹವಾನಿಯಂತ್ರಿತ ಕೊಠಡಿಯೊಳಗೆ ಸೇರಿ ತಣ್ಣಗಾಗಿ ಬಿಡುತ್ತವೆ. 
ಬೆಂಗಳೂರಿನಲ್ಲಿ ಸ್ವಂತ ಮನೆ ಇರುವವರಿಗಾದರೋ ಯೋಚನೆಯಿಲ್ಲ. ಬಾಡಿಗೆ ಮನೆಯಲ್ಲಿರುವವರಿಗೆ ಪ್ರತಿವರ್ಷವೂ ಹೆಚ್ಚಾಗುವ ಬಾಡಿಗೆಯ ಭೀತಿ ಹೀಗಾಗಿ, ಬಾಡಿಗೆ ಮನೆಯೇ ನೆಚ್ಚಿಕೊಂಡಿರುವವರಿಗೆ, ಬೆಂಗಳೂರಿನ ಪ್ರತಿ ಏರಿಯಾಗಳೂ 20-30 ವರ್ಷಗಳಲ್ಲಿ ಪರಿಚಿತವಾಗಿಬಿಟ್ಟಿರುತ್ತದೆ. ಸ್ವಂತ ಮನೆಯ ಕನಸು ಬೆಚ್ಚಗೆ ಹೊದ್ದು ಮಲಗಿರುತ್ತದೆ. ಇನ್ನು ಬೆಂದಕಾಳೂರಿನಲ್ಲೇ ಪೂರ್ವಜರ ಕಾಲದಿಂದಲೂ ಇದ್ದ ಒಂದೆಕರೆ ಜಾಗದಲ್ಲಿ ಪುಟ್ಟ ಜೋಪಡಿ ಮಾಡಿಕೊಂಡು ಇನ್ನೂ ಬಡತನದಲ್ಲೇ ಬೇಯುತ್ತಿರುವ, ಬಲಿಷ್ಠವಾಗಿ ಸೂರು ಕಟ್ಟಿಕೊಳ್ಳಲಾಗದ ಎಷ್ಟೋ ಕುಟುಂಬಗಳಿವೆ.
ಇನ್ನು ಇಲ್ಲಿನ ಖಾಸಗಿ ಆಸ್ಪತ್ರೆಗಳಂತೂ ಯಮನಿಗೇ ಪ್ರೀತಿ. ಪರ್ಸ್ ಹಿಡಿದು ಹೋದರೆ ಖಾಲಿ ಪರ್ಸ್‍ನೊಂದಿಗೆ ಜೊತೆಯಾಗಿ ಇನ್ನೊಂದು ರೋಗವೂ ಬೆನ್ನುಹಿಡಿಯುತ್ತದೆ. ಆಶ್ಚರ್ಯವೆಂದರೆ ಇತ್ತೀಚೆಗೆ ನಮ್ಮ ಮನೆಯವರು ಡೆಂಟಲ್ ಕ್ಲಿನಿಕ್‍ಗೆ ಹೋದಾಗ ಅಲ್ಲಿ ಒಂದು ಸಣ್ಣ ಚಿಕಿತ್ಸೆಗಾಗಿ ಕೇಳಿದ ಮೊತ್ತ 12ಸಾವಿರ, ಅದೂ ಕೇಳಿ ಲೋನ್‍ಗಾಗಿ ಫೈನಾನ್ಸ್‍ನವರೂ ಪಕ್ಕದಲ್ಲೇ ಕುಳಿತಿದ್ದಾರೆ. ಆಸ್ಪತ್ರೆಯಲ್ಲೇ ಲೋನ್ ಕೊಡುವ ಫೈನಾನ್ಸ್‍ಗಳಿದ್ದಾವೆ ಇಲ್ಲಿ..! ಇದರ ನಡುವೆ ಎಲ್ಲೋ ಒಂದು ಕಡೆ ಹೃದಯವಂತ ಡಾಕ್ಟರುಗಳು ಕೂಡಾ ಇದ್ದಾರೆ, ಹುಡುಕಬೇಕಷ್ಟೇ..!

ಸಂಜೆಯಾದರೆ ಒಂದಿಷ್ಟು ಕೆಲಸದ ಒತ್ತಡಗಳನ್ನು ತಲೆಗಂಟಿಸಿಕೊಂಡು ಮರಳುವ ಜೋಲುಮುಖಗಳು, ಹಸಿರು ಬಸ್ಸಿನ ಕಿಟಕಿಗೆ ಎರಡೂ ಇಯರ್‍ಫೋನ್ ಸಿಕ್ಕಿಸಿಕೊಂಡು ಒರಗಿರುತ್ತದೆ. ಬೆವರುಮಿಶ್ರಿತ ವಾಸನೆಯೊಂದು ಬಸ್ಸಿನಲ್ಲಿ ಹರಡಿಕೊಂಡಿರುತ್ತದೆ. ಬಸ್ಸಿನ ಸರಳಿಗೆ ಕೈ ಇರಿಸಿ ಜೋತಾಡುವ ಮುಖದಲ್ಲಿ ನಾಳೆಯ ಬಗ್ಗೆ ಯೋಚನೆ ಮೂಡುತ್ತದೆ. ಇನ್ನು ಸ್ವಂತ ಗಾಡಿ ಇರುವವರಾದರೆ ಸಂಜೆಯ ಟ್ರಾಫಿಕ್ಕಿನ ಭೀತಿ ಸಂಜೆಯಾಗುತ್ತಿದ್ದಂತೆ ಆವರಿಸುತ್ತದೆ. ಸಾಗುವ ದಾರಿಯಲ್ಲಿ ಹಸಿರು ಸಿಗ್ನಲ್‍ಗೇ ಕಣ್ಣುಗಳು ಕಾತರಿಸುತ್ತದೆ.. ಸಾಗುವ ದಾರಿಯಲ್ಲಿ ಆಗಾಗ ನಮ್ಮೂರು ನೆನಪಾಗುತ್ತದೆ.. ಹೋಗಿಬಿಡಲೇ ಎನ್ನುತ್ತದೆ ಮನಸು ಆಗೋದಿಲ್ಲವೆನ್ನುತ್ತದೆ..ಈ ಬೆಂಗಳೂರು ಬಿಟ್ಟರೂ ಬಿಡಲಾಗದಂತಹ ಸೆಳೆತ. ಈ ಬೆಂಗಳೂರೇ ಹೀಗೆ ಟ್ರಾಫಿಕ್ಕು ಸಿಗ್ನಲ್‍ನಲ್ಲಿ ಪ್ಲಾಸ್ಟಿಕ್‍ನೊಳಗೆ ಅವಚಿ ಕುಳಿತ ಕೆಂಗುಲಾಬಿ ಮಾರುವ ಹುಡುಗಿಯ ಅಸಹನೆಯಂತೆ.. ಕಣ್ಣಲ್ಲಿನ ನಿರಾಸೆಯ ಹಿಂದೆ ಆಶಾಭಾವನೆಯೊಂದು ಅಡಗಿ ಕುಳಿತಂತೆ.. ಬೆಂದಕಾಳೂರಿನ ಒಡಲಲ್ಲೊ ಬೆಂದು ಹೋದ ಕನಸುಗಳಿವೆ. ಅರಳಿದ ಕನಸುಗಳಿದೆ.. ಕುಸಿದು ಹೋದ ಮನಸುಗಳಿದೆ.. ಬೇಸತ್ತ ಹಿರಿಯ ಹೃದಯಗಳಿವೆ.. 

Wednesday 21 November 2018

ಮನದಲ್ಲೊಂದು ಧಿಗಿಣ..


ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸುಮ್ಮನೇ ಮೊಬೈಲ್‍ಗೆ ಕುಟ್ಟುತ್ತಾ ಕುಳಿತಿದ್ದಾಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ  ಯಕ್ಷಗಾನದ ಚೆಂಡೆಯ ಕಿವಿಗೆ ಸದ್ದು ಅಪ್ಪಳಿಸಿತ್ತು.. ಅದೇ ಅಳುವ ಸೀರಿಯಲ್, ನಾಟಕೀಯ ರಿಯಾಲಿಟಿ ಷೋಗಳನ್ನು ನೋಡಿ ಬೇಜಾರಾಗುವ ನನ್ನಪ್ಪನಿಗೆ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಸಮಯದ ಮಿತಿಯಿಲ್ಲದೇ ಪ್ರಸಾರ ಮಾಡುವ ಯಕ್ಷಗಾನವನ್ನು ನೋಡುವುದೆಂದರೆ ತುಂಬಾ ಇಷ್ಟ.. ನಾನು ಅಪ್ಪನೊಂದಿಗೆ ಕುಳಿತು ನೋಡುತ್ತಿದ್ದೆ..


ನನ್ನ ಅದ್ಭುತವಾದ ಬಾಲ್ಯವನ್ನು ಹೆಚ್ಚಾಗಿ ಕಳೆದಿದ್ದೇ ಅಜ್ಜಿಮನೆಯಲ್ಲಿ. ಆಗೆಲ್ಲಾ ಕುಟುಂಬ ಸಮೇತ ತೆಂಗಿನ ಗರಿಯ ಸೂಟೆ ಮಾಡಿ ಬೆಂಕಿ ಹತ್ತಿಸಿಕೊಂಡು ಗದ್ದೆಯ ಬದುವಿನಲ್ಲಿ ಸೂಟೆ ಗಾಳಿಯಲ್ಲಿ ಹಾರಿಸಿಕೊಂಡು ನಾಯಕನಂತೆ ಹಿರಿಯರೊಬ್ಬರು ನಡೆದರೆ ಅವರ ಹಿಂದೆ ಬ್ಯಾಟರಿ ಹಿಡಿದುಕೊಂಡು ಬೆಳದಿಂಗಳಿಗೆ ಸ್ಪರ್ಧೆಯನ್ನೊಡ್ಡುತ್ತಾ ಹೆಜ್ಜೆ ಹಾಕುತ್ತಿದ್ದೆವು.  ತಣ್ಣನೆಯ ಗಾಳಿ ಮೈಗವಚಿಕೊಂಡು, ಎದೆಯಲ್ಲೊಂದು ಕತ್ತಲಿನ ಭಯ ಆವರಿಸುತ್ತಿತ್ತು. ಕಿವಿಗೆ ಅಲ್ಲೆಲ್ಲೋ ಚೆಂಡೆಯ ಶಬ್ದ ಕೇಳಿಸಿದರೆ ಸಾಕು..ಹೋ ಯಕ್ಷಗಾನ ಶುರುವಾಗಿಬಿಟ್ಟಿದೆ, ನೀವೆಲ್ಲಾ ಹೊರಡುವಾಗ ತಡ ಮಾಡಿದ್ರಿ ಎನ್ನುವ ಅಸಹನೆಯೊಂದು ಹಿರಿಯರಲ್ಲಿ ಶುರುವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದುದು ನೆನಪಿದೆ. ಬಹುಶಃ ಈ ಉತ್ಸಾಹ ಈಗೀಗ ಈಗಿನ ಜನರೇಷನ್‍ನಲ್ಲಿ ಕಾಣೆಯಾಗಿಬಿಟ್ಟಿದೆ.
ಹಿಂದೆ ದೊಡ್ಡ ಮೈದಾನದ ಮಧ್ಯೆ, ಇಲ್ಲದಿದ್ದರೆ ಗದ್ದೆಯ ಮಧ್ಯೆ ನಾಲ್ಕು ಕಂಬಗಳ ರಂಗಸ್ಥಳದಲ್ಲಿ ಚೆಂಡೆಯ ಸದ್ದಿಗೆ ಯಕ್ಷಪಾತ್ರಗಳು ಅಬ್ಬರಿಸಿ ಕುಣಿಯುತ್ತಿದ್ದರೆ ರಂಗಸ್ಥಳವೇ ನಡುಗುತ್ತಿತ್ತು. ಈಗ ಅವೆಲ್ಲಿದೆ ಬಿಡಿ.. ನಗರಗಳಲ್ಲಿ ಹವಾನಿಯಂತ್ರಿಯ ಸಂಭಾಗಣದ ಸಿಮೆಂಟು ವೇದಿಕೆಯ ಮೇಲೆ ಜಗಮಗಿಸುವ ಬೆಳಕಿನಲ್ಲಿ ರಂಗಸ್ಥಳವನ್ನು ಮಾಡಿರುತ್ತಾರೆ. ಆಸಕ್ತ ಯಕ್ಷಗಾನ ಪ್ರಿಯರು ಬೆರಳೆಣಿಕೆಯವರಾದರೆ ಆಮಂತ್ರಿತರ ಮುಖ ಮೊಬೈಲ್‍ನಲ್ಲಿ ತೆರೆದಿರುವ ಫೇಸ್‍ಬುಕ್, ವಾಟ್ಸ್ಯಾಪ್ ಪೇಜ್‍ನ ಬೆಳಕಿನಲ್ಲಿ ಹೊಳೆಯುತ್ತಿರುತ್ತದೆ. ನಮ್ಮಂತಹ ಕರಾವಳಿಯ ಯಕ್ಷಗಾನ ಪ್ರಿಯರಿಗೆ ಆ ಬೆಳಕು ಕೆಲವೊಮ್ಮೆ ಎದೆಗೆ ಚುಚ್ಚಿದಂತಾಗುತ್ತದೆ.
ನನಗೆ ಯಕ್ಷಗಾನದಲ್ಲಿ ತುಂಬಾ ಇಷ್ಟವಾಗುವ ಯಕ್ಷಗಾನದ ಕಥೆಯೆಂದರೆ ದೇವಿ ಮಹಾತ್ಮೆ. ರಾತ್ರಿ ಎಂಟು ಒಂಭತ್ತು ಗಂಟೆಗೆ ಶುರುವಾದ ಯಕ್ಷಗಾನವನ್ನು ತೂಕಡಿಸುತ್ತಲೇ ನೋಡುತ್ತೇವೆ. ತೂಕಡಿಸಿದರೂ ಚೆಂಡೆಯ ಸದ್ದು ಬಡಿದೆಬ್ಬಿಸುತ್ತವೆ. ಇನ್ನೂ ಭಾಗವತರ ಬಗ್ಗೆ ಎಷ್ಟು ವಿಚಾರ ಹೇಳಿದರೂ ಸಾಲದು.. ಬಾಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಲಯಬದ್ಧವಾಗಿ ಗಣೇಶ ಸ್ತುತಿಯಿಂದ ಯಕ್ಷಗಾನವನ್ನು ಪ್ರಾರಂಭಿಸಿದರೆ ಅವರ ಬಾಯಿಂದ ಹೊರಟ ಶುಶ್ರಾವ್ಯಭರಿತ ಆವೇಶದ ನಾದ ಇಡೀ ಊರೆಲ್ಲಾ ಪಸರಿಸಿರುತ್ತದೆ.. ಯಕ್ಷಗಾನದಲ್ಲಿ ಕೊನೆಯವರೆಗೂ ಕಾಯುವ ಘಟ್ಟವೆಂದರೆ ಮಹಿಷಾಸುರ ಪ್ರವೇಶ.. ಹೋ.. ಎಂದು ಆವೇಶದಿಂದ ಅಬ್ಬರಿಸುತ್ತಾ ಕೈಯಲ್ಲಿ ಹಿಡಿವ ದೊಂದಿಗೆ ಭಸ್ಮ ಚೆಲ್ಲಿದರೆ ಹಾರುವ ಬೆಂಕಿ ಎದೆಯಲ್ಲಿ ಭಯವನ್ನು ಹುಟ್ಟಿಸುತ್ತದೆ. ನಿದ್ದೆಯನ್ನು ಹೊಡೆದೋಡಿಸುತ್ತದೆ. ಕೆಳಗೆ ಸಾಲಾಗಿ ಕುಳಿತಿರುವ ಮಕ್ಕಳತ್ತ ಕೆಂಗಣ್ಣು ಬಿಟ್ಟರೆ ಸಾಕು ಮಕ್ಕಳೋ ಚೆಲ್ಲಾಪಿಲ್ಲಿ, ಅಮ್ಮಂದಿರ, ಅಜ್ಜಿಯಂದಿರ ತೋಳತೆಕ್ಕೆಯಲ್ಲಿ ಬಂದು ಪಿಳಿಪಿಳಿ ಕಣ್ಣುಬಿಡುತ್ತದೆ.
ಇನ್ನು ರಂಗಸ್ಥಳದ ಮೇಲೆ ದೇವಿಯ ಪ್ರವೇಶವಾದರೆ ಸಾಕು, ಸಾಕ್ಷಾತ್ ದೇವಿಯೇ ಅವತರಿಸಿದ ಧನ್ಯತಾ ಭಾವ. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಯಕ್ಷಗಾನವೆಂದರೆ ಭಕ್ತಿ ಕೂಡಾ. ಇತ್ತೀಚೆಗೆ ಎಲ್ಲೋ ನಗರದಲ್ಲಿ ಒಂದು ಕಡೆ ಮದುವೆಯ ಮನೆಯಲ್ಲಿ ತಮ್ಮ ಶ್ರೀಮಂತಿಕೆ ಪ್ರದರ್ಶಿಸಿಕೊಳ್ಳಲು, ಮುಗ್ಧ ವ್ಯಕ್ತಿಗಳಿಬ್ಬರಿಗೆ ಯಕ್ಷಗಾನದ ವೇಷಭೂಷಣ ಹಾಕಿಸಿ ನಿಲ್ಲಿಸಿದುದು ಕರಾವಳಿಗರ ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಖ್ಯಾತ ಖಾಸಗಿ ವಾಹಿನಿಯೊಂದು ಯಕ್ಷಗಾನದ ಹೆಜ್ಜೆಗೆ ಯಾವುದೋ ಹಿಂದಿ ಸಂಗೀತವನ್ನು ಹಾಕಿಸಿ ಪುಟ್ಟ ಮಕ್ಕಳಿಗೆ ವೇಷ ಹಾಕಿಸಿ ಕುಣಿಸಿದ್ದುದ್ದು, ಯಕ್ಷಪ್ರೇಮಿಗಳನ್ನು ಕೆರಳಿಸಿತ್ತು. ತದನಂತರ ವಾಹಿನಿಯೂ ಕ್ಷಮೆ ಕೋರಿದಂತಹ ಘಟನೆ ನಡೆದಿತ್ತು. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಆರಾಧನೆಯೂ ಕೂಡಾ, ಹರಕೆಯ ರೂಪದಲ್ಲೂ ಯಕ್ಷಗಾನ ಬಯಲಾಟವನ್ನು ಆಡಿಸುವವರೂ ಇದ್ದಾರೆ.
ಹಿಂದೆಲ್ಲಾ ಯಕ್ಷಗಾನಕ್ಕೆ ಹೋಗುವುದೆಂದರೆ ಮನೆಯವರಿಗೆಲ್ಲಾ ಸಂಭ್ರಮ, ಒಟ್ಟಿಗೆ ಸಿನಿಮಾ ನೋಡಲು ಹೋಗದಿದ್ದರೂ, ಯಕ್ಷಗಾನಕ್ಕೆ ಮಾತ್ರ ಇಡೀ ಕುಟುಂಬ ಸಮೇತ ಯಕ್ಷಗಾನ ನಡಯುವ ಸ್ಥಳದಲ್ಲಿ ಹಾಜರ್. ಈಗೀಗ ಮಗಳಿಗೆ ಎಕ್ಸಾಂ, ಮಗನ ಹೋಂವರ್ಕ್ ಆಗಿಲ್ಲ, ನಿದ್ದೆ ಕೆಟ್ಟರೆ ನಾಳೆ ಕೆಲಸಕ್ಕೆ ಹೋಗುವುದಕ್ಕಾಗಲ್ಲ.. ಈ ರೀತಿಯ ನೆಪಗಳು ಮನೆಯಲ್ಲೇ ಉಳಿಯುವಂತೆ ಮಾಡುತ್ತದೆ. ಯಾರಾದರೂ ಹೋಗುವವರಿದ್ದರೆ ಸಾಯುವ ಕಾಲದಲ್ಲಿ ಒಂದು ಯಕ್ಷಗಾನ ಆದರೂ ನೋಡಿದ ಹಾಗಾಗುತ್ತಿತ್ತು ಎನ್ನುವ ದನಿಯೊಂದು ಮೂಲೆಯಲ್ಲಿ ಕುಳಿತ ಅಜ್ಜ/ಅಜ್ಜಿಯ ಬಾಯಿಂದ ಕೇಳಿ ಬರುತ್ತದೆ.
ಇನ್ನೊಂದು ಏನೆಂದರೆ ನಮ್ಮೂರ ಯಕ್ಷಗಾನ ಚುರುಮುರಿಗಳ ಸ್ಟಾಲ್‍ಗಳಿಲ್ಲದೇ ಕಂಪ್ಲೀಟೇ ಆಗಲ್ಲ. ಯಕ್ಷಾಗಾನದ ಅಂಗಣದೊಳಗೆ ಚೆಂಡೆ, ಮದ್ದಳೆಯ ಸದ್ದಾದರೆ ಸ್ವಲ್ಪ ಆಚೆಗೆ ಬಂದರೆ ಫೈಬರ್ ಟೇಬಲ್ ಮೇಲೆ ಖಾರ, ಮಾವಿನಕಾಯಿ, ಕ್ಯಾರೆಟ್ ತುರಿ, ಮಂಡಕ್ಕಿಯನ್ನು ಸ್ಟೀಲ್ ಪಾತ್ರೆಯೊಳಗೆ ಹಾಕಿ ಸೌಟಿನಿಂದ ಕಲಸುವ ಟಣ್ ಟಣ್ ಸದ್ದು ಇನ್ನೂ ಆತ್ಮೀಯ.. ಚುರುಮುರಿಯ ಘಮ ಮೂಗಿನ ಹೊಳ್ಳೆಯನ್ನು  ಪ್ರವೇಶಿಸಿ, ಚುರುಮುರಿಗಾಗಿ ಅಜ್ಜನೋ, ಮಾವನನ್ನೋ ಪೀಡಿಸುತ್ತಿದ್ದೆವು.(ಈಗೀಗ ಚುರುಮುರಿ ಸ್ಟಾಲ್‍ನ ಟೇಬಲ್‍ನ ಬದಿಯಲ್ಲಿ ಸಿಗರೇಟು, ಪಾನ್ ಮಸಾಲ ಪಾಕೀಟುಗಳೂ ತನ್ನ ಸ್ಥಾನವನ್ನಲಂಕರಿಸುತ್ತಿದೆ) ಇನ್ನೊಂದು ಬಾಯಲ್ಲಿ ನೀರೂರಿಸುವ ಸುಕುನಪ್ಪ, ನೆಯ್ಯಪ್ಪ.. (ಇದರ ಟೇಸ್ಟ್‍ಗಾಗಿ ಇನ್ನೂ ಹುಡುಕುತ್ತಿದ್ದೇನೆ ಅಂದಿನ ರುಚಿ ಮಾತ್ರ ಸಿಕ್ಕಿಲ್ಲ).. ನಮ್ಮೂರಲ್ಲಿ ಎಲ್ಲೇ ಯಕ್ಷಗಾನವಾದರೂ ಸುಕುನಪ್ಪ ಮಾರುವ ಅಜ್ಜಿಯೊಬ್ಬರು ಹಾಜರಾಗುತ್ತಿದ್ದರು. ಮಧ್ಯದಲ್ಲಿ ಸೀಮೆಎಣ್ಣೆಯ ಚಿಮಣಿ ದೀಪ ಸುತ್ತಲೂ ಸುಕುನಪ್ಪ, ನೆಯ್ಯಪ್ಪಗಳನ್ನು ಅಗಲವಾದ ಬುಟ್ಟಿಯಲ್ಲಿ ಜೋಡಿಸಿಟ್ಟಿರುತ್ತಿದ್ದುದು ಇನ್ನೂ ನೆನಪಿದೆ. ಅವರು ಮಾರುತ್ತಿದ್ದ ಸುಕುನಪ್ಪ, ನೆಯ್ಯಪ್ಪಗಳ ಪರಿಮಳದೊಂದಿಗೆ ಸೀಮೆಎಣ್ಣೆಯ ಘಾಟೂ ಇರುತ್ತಿತ್ತು. ಆಕೆಯೂ ಈಗ ಕಾಣೆ.. ಈಗೀಗ ವಿವಿಧ ಐಸ್‍ಕ್ರೀಮ್‍ಗಳ ಗಾಡಿಗಳೂ, ಅದರಲ್ಲಿ ನೇತಾಡುತ್ತಾ, ಐಸ್‍ಕ್ರೀಂ ಮಾರುವವರಷ್ಟೇ ಕಾಣಸಿಗುತ್ತಾರೆ. ಈಗಿನ ಮಕ್ಕಳಿಗೆ ಸುಕುನಪ್ಪಕ್ಕಿಂತ, ಕೋನ್, ಚೋಕೋಬಾರ್ ಐಸ್‍ಕ್ರೀಂಗಳೇ ಬೇಗ ಕಾಣಿಸುತ್ತವೆ.
ಮಹಿಷಾಸುರನ ಅಂತ್ಯವಾಗುವುದರೊಂದಿಗೆ ತ್ರಿಮೂರ್ತಿಗಳು, ದೇವತೆಗಳು ಪ್ರತ್ಯಕ್ಷವಾಗಿ ಮಂಗಳಹಾಡುವುದರೊಂದಿಗೆ ಅಂದಿನ ಯಕ್ಷಗಾನಕ್ಕೆ ತೆರೆಬೀಳುತ್ತವೆ. ಅಲ್ಲಿವರೆಗೂ ಒಂದೇ ಕಡೆ ಕುಳಿತಿದ್ದ ದೇಹ ಎದ್ದು ನಿಂತು ನಟಿಗೆ ಮುರಿಯುತ್ತದೆ.. ಪೂರ್ವದಲ್ಲಿ ಸೂರ್ಯ ಉದಯಿಸುವ ಸುದ್ದಿಗಾಗಿ ಕೆಂಬಣ್ಣದ ಕಿರಣಗಳು ಎದ್ದು ಧಾವಿಸುತ್ತದೆ. ಮುಂಜಾನೆಯ ಮಂಜು ದಟ್ಟವಾಗಿ ಆವರಿಸಿರುತ್ತದೆ. ಬೆಳೆದ ಹಸಿರು ಪೈರುಗಳ ತುಂಬೆಲ್ಲಾ ಮಂಜಿನ ಮುತ್ತಿನ ಶೃಂಗಾರ.. ಅದನ್ನು ಬರಿಗಾಲಲ್ಲಿ ಮೆಲ್ಲನೆ ಸ್ಪರ್ಶಿಸಿದರೆ ತಣ್ಣನೆಯ ಮಿಂಚೊಂದು ನೆತ್ತಿಗೇರುತ್ತದೆ. ಅಂಗೈಯಲ್ಲಿ ರಾತ್ರಿ ಮೆದ್ದ ಚುರುಮುರಿಯ ಘಮ ಅಂಟಿಕೊಂಡಿರುತ್ತದೆ. ಅಜ್ಜಿಯ ಕೈಯಲ್ಲೆರಡು ಮಂಡಕ್ಕಿಯ ಪ್ಯಾಕೇಟುಗಳು ಭದ್ರವಾಗಿ ಕುಳಿತಿರುತ್ತದೆ. ಅಂದಿನ ಬೆಳಗ್ಗಿನ ಬಿಸಿಬಿಸಿ ಚಹಾಗೆ ಕೊಬ್ಬರಿ, ಸಕ್ಕರೆ, ಈರುಳ್ಳಿ ಬೆರೆಸಿ ಮಾಡುವ ಮಂಡಕ್ಕಿ ಒಗ್ಗರಣೆ ಗಂಟಲೊಳಗೆ ಇಳಿಯುತ್ತಿದ್ದರೆ, ಮನೆತುಂಬೆಲ್ಲಾ ಯಕ್ಷಗಾನ ಪಾತ್ರಗಳದ್ದೇ ಮಾತುಕತೆ.
ರಾತ್ರಿಯೆಲ್ಲಾ ನಿದ್ದೆಕೆಟ್ಟು ಯಕ್ಷಗಾನ ನೋಡಿ, ಹಗಲೆಲ್ಲಾ ಗಡದ್ದಾಗಿ ನಿದ್ದೆ ಹೊಡೆಯುವ ಹಿರಿಯರ ಕಣ್ತಪ್ಪಿಸಿ, ಚಿಕ್ಕಮ್ಮನ ಕಾಡಿಗೆ ಮುಖದ ತುಂಬಾ ಹಚ್ಚಿಕೊಂಡು, ಅಕ್ಕನ ಚೂಡಿದಾರದ ಶಾಲು ಹೊದೆದುಕೊಂಡು, ತೂತು ಕೊಡಪಾನದ ಮೇಲೆ ಕೋಲು ಹಿಡಿದು ಚೆಂಡೆಗೂ ಮೀರಿ ಬಡಿಯುವ ಚಿಲ್ಟಾರಿಗಳ ಸದ್ದು ಕೇಳಿ.. ಮಲಗಿದ್ದವರೂ ಎದ್ದು ಬರುವುದುಂಟು..ಒಮ್ಮೊಮ್ಮೆ..
ನಾವೆಲ್ಲಾ ಪುರಾಣ ಕಥೆಗಳನ್ನು ಅರ್ಧಕ್ಕರ್ಧ ತಿಳಿದುಕೊಂಡಿದ್ದು ಈ ಯಕ್ಷಗಾನಗಳನ್ನು ನೋಡಿಯೇ, ಶ್ವೇತಕುಮಾರನ ಚರಿತ್ರೆ, ಅಶ್ವಮೇಧಯಾಗ, ಶಿಶುಪಾಲ ವಧೆ ಹೀಗೆ ಪುರಾಣ ಕಥೆಗಳನ್ನು ವಿವರವಾಗಿ ವಿವರಿಸಿದ್ದು ಯಕ್ಷಗಾನಗಳೇ.. ಈಗೆಲ್ಲಾ ಮಕ್ಕಳು ಕಾರ್ಟೂನ್ ಕಥೆ ಕೇಳುತ್ತಾರೆ ಹೊರತು, ಯಕ್ಷಗಾನದ ಕಥೆಗಳನ್ನಲ್ಲ..
ಈಗೀಗ ಬೆಂಗಳೂರಲ್ಲೂ ಕರಾವಳಿಯ ಯಕ್ಷಗಾನ ಪ್ರೇಮಿಗಳು, ಯಕ್ಷಗಾನ ಪ್ರಸಂಗವನ್ನು ಆಡಿಸುತ್ತಾರೆ. ಮಹಾನಗರದ ಎಲ್ಲೋ ಮೂಲೆಯಲ್ಲಿ ನಡೆಯುವ ಯಕ್ಷಗಾನ ನೋಡಲು ಹೊರಟರೆ ಟ್ರಾಫಿಕ್ಕು, ಕಿವಿ ಸೀಳುವ ಹಾರನ್‍ಗಳ ಮಧ್ಯೆ ಯಕ್ಷಗಾನ ನೋಡಲು ಹೋಗುವಷ್ಟರಲ್ಲಿ ತಾಳ್ಮೆಯೂ ಕೆಟ್ಟು ಹೋಗಿರುತ್ತದೆ. ಅಷ್ಟರಲ್ಲಿ ಅರ್ಧ ಪ್ರಸಂಗವೇ ನಡೆದು ಹೋಗಿರುತ್ತದೆ. ಏನಿದ್ದರೂ ನಮ್ಮ ಬಾಲ್ಯಕಾಲದಲ್ಲಿ ನಮ್ಮೂರಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳೇ ಅಚ್ಚಳಿಯದೇ ನೆನಪುಗಳ ಪುಟದಲ್ಲಿ ಮಾಸದೇ ಉಳಿಯುತ್ತದೆ..

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...