ಸುಮಾರು 20 ವರ್ಷಗಳ ಹಿಂದೆ ನಮ್ಮೂರು ಅಷ್ಟೇನೂ ಪ್ರಗತಿ ಕಾಣದ ಊರು. ಮಂಗಳೂರಿನಿಂದ ಸುಮಾರು 23 ಕಿಲೋ.ಮೀ ದೂರದಲ್ಲಿದ್ದ ಪುಟ್ಟ ಊರು ಮುಡಿಪು. ಆ ಕಡೆಯಿಂದ ವಿಟ್ಲ, ಈ ಕಡೆ ಬಿಸಿರೋಡ್, ಇನ್ನೊಂದು ಕಡೆ ಮಂಗಳೂರು ಈ ಮೂರು ಪಟ್ಟಣಗಳಿಗೆ ಕೊಂಡಿಯಂತಿರುವ ಊರು ನಮ್ಮೂರು.
ಮುಡಿಪು ಎಂಬ ಊರನ್ನು ಗುರುತಿಸಲು ಮಧ್ಯದಲ್ಲಿ ಒಂದು ಅರಳೀಮರದ ಕಟ್ಟೆ, ಅದರ ಸುತ್ತಲೂ ಕಟ್ಟೆಯಂದನ್ನು ಕಟ್ಟಿ ಬಸ್ಸಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಆಸರೆಯಾಗಿಸಿದ್ದರು. ಪ್ರತಿ ವರ್ಷವೂ ಗಣೇಶಚತುರ್ಥಿಯಂದು ಆ ಕಟ್ಟೆಗೆ ಬಣ್ಣ ಕೂಡಾ ಬಳಿಯುತ್ತಾರೆ. ಇಂದಿಗೂ ಕೂಡಾ.
ಇನ್ನೊಂದು ಆ ಕಾಲದ ಗುರುತೆಂದರೆ ದೇವಪ್ಪಣ್ಣನ ಅಂಗಡಿ, ಕುರ್ನಾಡು ಗ್ರಾಮಕ್ಕೆ ಮಾತ್ರವಲ್ಲ ಕುರ್ನಾಡು ಗ್ರಾಮದ ಮನೆ ಮನೆಯ ನೆಂಟರಿಷ್ಟರಿಗೂ ಚಿರಪರಿಚಿತ ದೇವಪ್ಪಣ್ಣನ ಅಂಗಡಿ. ಮರದ ಗೂಡಂಗಡಿಯೊಳಗೆ ಗಾಜಿನ ಬಾಟಲಿಯೊಳಗೆ ಕುಳಿತ ಮಿಠಾಯಿಗಳು, ಪಾರ್ಲೆಜಿ, ಟೈಗರ್, ಕ್ರ್ಯಾಕ್‍ಜ್ಯಾಕ್ ಬಿಸ್ಕತ್ತಿನ ಐದು ರೂಪಾಯಿಯ ಪುಟ್ಟ ಪ್ಯಾಕೆಟ್‍ಗಳು ಸಾಲಾಗಿ ಹಿಂದೆ ಜೋಡಿಸಿಟ್ಟಿರುತ್ತಿದ್ದರು ದೇವಪ್ಪಣ್ಣ. ಮರದ ಬುಟ್ಟಿಯಲ್ಲಿ ತರಕಾರಿಗಳು.. ಬೀಡಿ, ಬೆಂಕಿಪೊಟ್ಟಣ್ಣ, ಇವಿಷ್ಟೇ ದೇವಪ್ಪಣ್ಣನ ಅಂಗಡಿಯ ಆಸ್ತಿಗಳು.
.
ಅಂಗಡಿಯ ಮುಂದೆ ಎರಡು ಮರದ ಕಂಬಗಳನ್ನು ಹಾಕಿ ತಗಡಿನ ಶೀಟು ಹಾಕಿ ನೆರಳಿರುವಂತೆ ನೋಡಿಕೊಂಡಿದ್ದರು. ಎರಡು ಮರದ ಬೆಂಚು, ಒಂದು ಬೆಂಚಿನ ಮುರಿದ ಕಾಲಿನ ಬದಲು ಎರಡು ಕಲ್ಲುಗಳನ್ನು ಇಟ್ಟಿದ್ದ ನೆನಪು..
ಅಂದ ಹಾಗೆ ದೇವಪ್ಪಣ್ಣ ಎರಡೆರಡು ವೃತ್ತಿಗಳನ್ನು ನಿಭಾಯಿಸಿ ಜೀವನ ಮುನ್ನಡೆಸುತ್ತಿರುವವರು. ಪೋಸ್ಟ್‍ಮ್ಯಾನ್ ಆಗಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ, ಬೆಳಗ್ಗೆ ಮನೆಗೆ ಬಂದು ಮತ್ತೆ ತಮ್ಮ ಹಳೆಯ ಎಂ80ಯಲ್ಲಿ ಅಂಗಡಿಗೆ ತೆರಳಿದರೆ, ಪಕ್ಕಾ ವ್ಯಾಪಾರಸ್ಥರು.. ಊರಿನವರಿಗೆಲ್ಲಾ ತುಂಬಾ ಆತ್ಮೀಯರು ಮಾತ್ರವಲ್ಲದೇ, ಪರವೂರಿನವರಿಗೂ ಪರಿಚಿತರು ನಮ್ಮ ದೇವಪ್ಪಣ್ಣ.. ನಮ್ಮ ಏರಿಯಾದವರೇ ಆದುದರಿಂದ ನಾನಂತೂ ಅವರನ್ನು ದೇವಪ್ಪಮಾಮ ಅಂತ ಕರೆಯುತ್ತಿದ್ದೆ.. ಅವರ ಪುಟ್ಟ ಗೂಡಂಗಡಿಯ ಹಿಂದೆ ಎರಡು ಕಟ್ಟದ ಕೋಳಿಗಳನ್ನು ಕಟ್ಟುತ್ತಿದ್ದ ನೆನಪು..
ಈಗ 20 ವರ್ಷಗಳ ಹಿಂದಿಂದ್ದ ಊರಿನಂತಿಲ್ಲ ನಮ್ಮೂರು ಅಭಿವೃದ್ಧಿಯ ನೆಪದಲ್ಲಿ ಪ್ರಗತಿ ಕಾಣುತ್ತಿರುವ ಊರು, ಊರಿನ ಪಕ್ಕದಲ್ಲೇ ತಲೆ ಎತ್ತಿರುವ ಇನ್ಫೋಸಿಸ್ ಊರಿಗೊಂದು ಈಗೀಗ ಕಳೆಕೊಟ್ಟಿದೆ. ಅಂದ ಹಾಗೆ ದೇವಪ್ಪಣ್ಣನ ಅಂಗಡಿಯೂ ಈಗಿಲ್ಲ ರೋಡು ಅಗಲೀಕರಣದ ನೆಪದಲ್ಲಿ ಅಲ್ಲಿಂದ ಎತ್ತಂಗಡಿಯಾಗಿದೆ. ಯಾವುದೋ ಕಾಂಪ್ಲೆಕ್ಸಿನ ಮೂಲೆಯೊಂದರಲ್ಲಿ ತರಕಾರಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಈಗೀಗ ಬೇರೆ ಊರಿಂದ ಬಂದ ನೆಂಟರಿಗೆ ಬದಲಾದ ನಮ್ಮೂರು ಗುರುತು ಹಿಡಿಯಲು ಸ್ವಲ್ಪ ಸಮಯ ಬೇಕೆ ಬೇಕು, ಹಿಂದೆ ಆಗಿದ್ದರೆ ದೇವಪ್ಪಣ್ಣನ ಅಂಗಡಿ ಇತ್ತು.. ಬೇಗ ಗುರುತು ಸಿಕ್ತಾ ಇತ್ತು.. ಈಗ ತುಂಬಾ ಡೆವಲಪ್ ಆಗಿದೆ ಎನ್ನುವವರಿಗಂತೂ ಲೆಕ್ಕವಿಲ್ಲ. ಹಾಗೇನೆ ಮುಡಿಪಿನ ಕಟ್ಟೆ ವರ್ಷವೂ ಬಣ್ಣ ಹಚ್ಚಿಕೊಳ್ಳುವುದಂತೂ ಮರೆಯುವುದಿಲ್ಲ.
ಕಾಲ ಬದಲಾಗಿದೆ, ನಮ್ಮೂರು ಬದಲಾಗಿದೆ.. ದೇವಪ್ಪಣ್ಣನ ಅಂಗಡಿ ಬದಲಾಗಿದೆ, ಆದರೆ ದೇವಪ್ಪಣ್ಣ ಮಾತ್ರ ಬದಲಾಗಿಲ್ಲ. 2ಜಿಯಿಂದ 5ಜಿಯತ್ತ ಕಾಲ ಬದಲಾದರೂ ದೇವಪ್ಪಣ್ಣ ಮಾತ್ರ ಮೊಬೈಲು ಇಟ್ಟುಕೊಂಡಿಲ್ಲ. ಮೆಸೇಜ್, ಈಮೇಲ್, ವಾಟ್ಸ್ಯಾಪ್, ಸ್ನ್ಯಾಪ್‍ಚಾಟ್ ಬಂದರೂ ದೇವಪ್ಪಣ್ಣ ಅಂಚೆ ಪ್ರೀತಿಗೆ ಅವೆಲ್ಲವೂ ಮಾರು ದೂರ ನಿಂತಿದೆ. ಮೊಬೈಲ್ ಇಲ್ಲದೇ ದಿನವೇ ನಡೆಯಲ್ಲ ಅನ್ನುವ ಮಂದಿಗೆ ಮಾದರಿಯಾಗಿ ದೇವಪ್ಪಣ್ಣ ಇಂದಿಗೂ ಮೊಬೈಲ್ ಇಲ್ಲದೆಯೇ ವ್ಯವಹಾರ ನಡೆಸುತ್ತಾರೆ. ಇಂದಿಗೂ ಬ್ರಹ್ಮಚಾರಿಯಾಗಿ ಬದುಕು ನಡೆಸುತ್ತಿರುವ ದೇವಪ್ಪಣ್ಣ ತಮ್ಮ ವೃತ್ತಿ ಪ್ರೀತಿ, ವೃತ್ತಿಯ ಮೇಲಿನ ಗೌರವವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಮೊಬೈಲ್ ಇಲ್ಲದೇ ಸಂತೋಷವಾಗಿರುವ ದೇವಪ್ಪ ಮಾಮ ನಾ ಕಂಡ ವ್ಯಕ್ತಿಗಳ ಸಾಲಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಬಹುಶಃ ಇಂತಹ ಅಂಚೆ ವೃತ್ತಿ ಪ್ರಿಯರಿಂದಲೇ ಪೋಸ್ಟ್ ಆಫೀಸುಗಳು ಇನ್ನೂ ಉಳಿದುಕೊಂಡಿದೆ.

No comments:
Post a Comment