ತುಂಬಾ ವರ್ಷಗಳ ಹಿಂದೆ ಕರಾವಳಿಯ ಹಳ್ಳಿಗಳಲ್ಲಿ ನಮ್ಮದೇ ಪ್ರಪಂಚದಲ್ಲಿ ಬೆಳೆಯುತ್ತಿದ್ದ ನಮಗೆ ಬೆಂಗಳೂರೆಂದರೆ ವಿಶೇಷ ಆಸಕ್ತಿ, ಒಬ್ಬರು ವಿದೇಶದಲ್ಲಿದ್ದಾರೆಂದರೆ ಅಚ್ಚರಿಯಿಲ್ಲ, ಅದೇ ಬೆಂಗಳೂರಲ್ಲಿ ಅಂದ್ರೆ, ಬೆಂಗಳೂರಾ..? ಎನ್ನುವ ಅಚ್ಚರಿ ತುಂಬಿದ ಕುತೂಹಲವೊಂದು ಇಣುಕುತ್ತಿತ್ತು.. ದೊಡ್ಡವರಾಗಿ ಬೆಳೆದಂತೆ ಮಾಧ್ಯಮಕ್ಷೇತ್ರದ ಆಕರ್ಷಣೆಗೆ ಒಳಗಾಗಿ ಬರಹವನ್ನು ಕೈಹಿಡಿದಾಗಿತ್ತು. ಸ್ನಾತಕೋತ್ತರವೂ ಮುಗಿದಿತ್ತು.. ಇನ್ನೇನು ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ವಿಸ್ತಾರವಾಗಿ ಬೆಳೆಯುತ್ತಿದ್ದ ಮಾಧ್ಯಮ ಕ್ಷೇತ್ರ ಕಣ್ಣಿಗೆ ಹಿತವಾಗಿತ್ತು. ಇಂಟರ್ನ್‍ಶಿಪ್ ನೆಪದೊಂದಿಗೆ ಬೆಂಗಳೂರಿನ ಬಸ್ ಹಿಡಿದಾಗಿತ್ತು..
ಮುಂಜಾನೆಯ ಚುಮು ಚುಮು ಚಳಿಯ ಅನುಭವವಾಗಿ, ಎದ್ದು ಕುಳಿತರೆ ಬೆಂಗಳೂರು ಹೊರವಲಯದ ಟೋಲ್‍ಗೇಟ್ ಹತ್ತಿರ ಬಸ್ ನಿಂತಿತ್ತು.. ಸೂರ್ಯನೂ ಕಣ್ಣುಬಿಟ್ಟಿಲ್ಲ.. ಆದರೆ ರಸ್ತೆಯ ಪೂರ್ತಿ ದಾರಿದೀಪದ ಬೆಳಕು ಆವರಿಸಿತ್ತು.. ಹೂವಿನ ಹಾರವನ್ನು ಹಿಡಿದುಕೊಂಡು ದಾವಣಿ ಹಾಕಿದ ಹುಡುಗಿ ರಸ್ತೆ ಬದಿಯಲ್ಲಿ ನಿಂತಿದ್ದಳು.. ಟೈಮ್ ನೋಡಿದರೆ ಐದಕ್ಕೆ ಇನ್ನೂ ಟೈಮ್ ಇದೆ.. ಸೂರ್ಯನಿಗಿಂತ ಮೊದಲು ಬೆಂಗಳೂರು ಎದ್ದಾಗಿತ್ತು.. ನಮ್ಮ ಹಳ್ಳಿಗಳಲ್ಲಿ ಜನ ಬೇಗ ಎದ್ದರೂ ಕೂಡಾ, ಗಡಿಬಿಡಿಯ ಬದುಕು ನಮ್ಮದಲ್ಲ.. ಆದರೆ ಬೆಂಗಳೂರಿನಲ್ಲಿ ಇವೆಲ್ಲವೂ ಅದಲು ಬದಲು..
ಬಸ್ ಇಳಿದಾಕ್ಷಣ ಬೆನ್ನು ಹಿಡಿವ ಆಟೋ ಚಾಲಕರು.. ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತಾರೆ. ನಮ್ಮೂರಿನಲ್ಲಿ ಬೆಂಗಳೂರು ಹೊರಡುವ ಮುನ್ನ ಒಂದು ಕಿವಿ ಮಾತು ಹೇಳಿ ಕಳುಹಿಸುತ್ತಾರೆ.. ‘ಏನೇ ಆದ್ರೂ ಮೆಜೆಸ್ಟಿಕ್‍ನಲ್ಲಿ ಆಟೋ ಹತ್ತೋಕೆ ಹೋಗಬೇಡ..’
ಒಂದೇ ತಿಂಗಳಲ್ಲಿ ಅರಿವಾಗಿಬಿಟ್ಟಿತ್ತು ಬೆಂಗಳೂರಿನ ನಿಜಸ್ವರೂಪ..ಇದಾದ ವರ್ಷಗಳ ನಂತರ ಉದ್ಯೋಗದೊಂದಿಗೆ, ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯೂ ಆಗಿ ಬೆಂಗಳೂರೇ ಇದೀಗ ಗಂಡನ ಮನೆಯಾಗಿಬಿಟ್ಟಿದೆ.
ಮಂಗಳೂರಿನಿಂದ ನನ್ನ ಕನಸು ಕೆ.ಎ.19 ಕೂಡಾ ಬೆಂಗಳೂರಿನ ಹಾದಿಯನ್ನು ಸವೆಸಿದೆ.. ಅಭಿವೃದ್ಧಿಯ ಗುರುತಿಗೆ ಮೆಟ್ರೋ ಹಾದಿ ತಲೆಯೆತ್ತರದಲ್ಲಿ ಹಾದುಹೋಗಿದೆ. ಮೆಟ್ರೋ ಪಥದ ಕೆಳಗೆ ಟ್ರಾಫಿಕ್ಕು ಸಿಗ್ನಲುಗಳಲ್ಲಿ ಬಲೂನು, ಕಾರ್ ಮ್ಯಾಟ್ರೆಸ್‍ಗಳನ್ನು ಮಾರುವ ಕುಟುಂಬಗಳ ನೀಲಿ ಸೂರುಗಳು ಮುದುಡಿಕೊಂಡಿವೆ. ಮಳೆ ಬಂದರೆ ಸಾಕು ಕೊಚ್ಚಿಕೊಂಡುವ ಹೋಗುವ ರಾಜಕಾಲುವೆಗಳ ತಡಿಯಲ್ಲಿ ಗುಡಿಸಲುಗಳು ಹರಡಿಕೊಂಡಿದೆ. ಎತ್ತರದ ಖಾಸಾಗಿ ಕಂಪನಿಗಳ ಬಾನೆತ್ತರದ ಬಿಲ್ಡಿಂಗುಗಳ ಮಧ್ಯೆ ಸರ್ಕಾರಿ ಕನ್ನಡ ಶಾಲೆಗಳು ಉಸಿರು ಕಟ್ಟಿಕೊಂಡು ಗಪ್‍ಚುಪ್ಪಾಗಿ ಕುಳಿತುಕೊಂಡಿದೆ.
ಇರುವೆ ನುಸುಳಲಾಗದ ಟ್ರಾಫಿಕ್ಕಿನ ಮಧ್ಯೆ ನೀಲಿ, ಕೆಂಪು ದೀಪದ ಆಂಬ್ಯುಲೆನ್ಸ್ ತೆವಳುತ್ತಾ ಮುಂದೆ ಸಾಗುತ್ತದೆ. ಪರವಾಗಿಲ್ಲ ಬೆಂಗಳೂರಿನಲ್ಲಿರುವ ಅಲ್ಪಸ್ವಲ್ಪ ಮಂದಿಗೂ ಮಾನವೀಯತೆ ಇದೆ ಎಂದು ಹಗುರಾಗುತ್ತೇನೆ.
ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸುವುದಂತೂ ಬೆಂಕಿಯಲ್ಲಿ ನಡೆದ ಹಾಗೆ.. ಮುಂದಿರುವ ಗಾಡಿಗೆ ನಮ್ಮ ಗಾಡಿ ಸ್ವಲ್ಪ ಸ್ಪರ್ಶಿಸಿದರೆ ಸಾಕು, ಗಾಡಿ ಅಪ್ಪಚ್ಚಿಯಾದಂತೆ ಮುಂದಿರುವ ಗಾಡಿಯವನ ಬಾಯಿಯಿಂದ ಕೇಳಲಾಗದ ಪದಗಳೆಲ್ಲ, ಕೇಳಿರದ ಪದಗಳೆಲ್ಲಾ ಕೇಳಬೇಕಾಗಬಹುದು.. ಹಿಂದೆ ಸ್ಪರ್ಶಿಸಿದ ಗಾಡಿ ಹುಡುಗಿಯರದ್ದಾದರೆ ಕೆಲವೊಮ್ಮೆ ಸ್ವಲ್ಪ ಎಕ್ಸ್‍ಕ್ಯೂಸ್..!
ಕನ್ನಡಿಗರನ್ನು ಇಲ್ಲಿ ಹುಡುಕಬೇಕಾದರೆ, ರೆಸ್ಯೂಮ್ ಕೇಳಬೇಕು ಅಷ್ಟೇ, ಅಲ್ಲಿ ತವರೂರ ಹೆಸರು ಅಚ್ಚಾಗಿರುತ್ತದೆ. ಕನ್ನಡ ಗೊತ್ತಿದ್ದರೂ ಇಂಗ್ಲೀಷು ಮಾತನಾಡುವ, ತಮಿಳು ಭಾಷಿಕರಾಗಿ ಕನ್ನಡ ಮಾತನಾಡುವ ಅನೇಕ ಗೊಂದಲಗಳ ಮನುಷ್ಯರು ಇಲ್ಲಿದ್ದಾರೆ. ಗೊಂದಲಗಳ ಮನುಷ್ಯರು ಯಾಕೆಂದರೆ ಇಲ್ಲಿ ತರಕಾರಿ ವ್ಯಾಪಾರಿಗಳ ಬಳಿಯೂ ಕನ್ನಡದಲ್ಲಿ ವ್ಯವಹರಿಸಬೇಕೋ, ಇಂಗ್ಲೀಷಿನಲ್ಲಿ ಮಾತನಾಡದಿದ್ದರೆ ಮರ್ಯಾದೆಯ ಪ್ರಶ್ನೆಯೋ ಎಂದು ಯೋಚಿಸುವ ಜನರಿದ್ದಾರೆ. ಕನ್ನಡಿಗರಾದರೂ ಕನ್ನಡಿಗರೊಂದಿಗೆ ಇಂಗ್ಲೀಷಿನಲ್ಲೇ ಮಾತನಾಡಿ ಮರ್ಯಾದೆ ಹೆಚ್ಚಿಸಿಕೊಂಡಂತೆ ಫೀಲ್ ಆಗುವ ಜನರಿದ್ದಾರೆ. ನಮ್ಮ ಕರಾವಳಿಗರೇ ಬೆಸ್ಟು..(ವಿಶ್ವೇಶ್ವರ ಭಟ್ಟರ ಲೇಖನವೊಂದರಲ್ಲಿ ಉಲ್ಲೇಖಿಸಿದಂತೆ) ಅವನು ವಿಶ್ವದ ಯಾವುದೇ ಮೂಲೆಯಲ್ಲಿರಲಿ, ಇನ್ನೊಬ್ಬ ತುಳುವ ಸಿಕ್ಕಿದರೆ ಸಾಕು ತುಳುವಿನಲ್ಲೇ ಮಾತನಾಡಿ ಪ್ರಪಂಚವನ್ನೇ ಮರೆತುಬಿಡುವ ಭಾಷಾಭಿಮಾನ ತುಳುವರದ್ದು..
ತಿನ್ನುವ ವಿಷಯಕ್ಕೆ ಬಂದರೆ ಇಲ್ಲಿ ಕುಳಿತು ತಿನ್ನುವ ವ್ಯವಧಾನವೂ ಯಾರಿಗಿಲ್ಲ. ಬೆಳಗ್ಗೆ ಎದ್ದು ರೆಡಿಯಾಗಿ ಬಂದು ಬಸ್ಸಿನಲ್ಲಿ ಬುತ್ತಿ ಬಿಚ್ಚುವ ಅನೇಕರಿದ್ದಾರೆ. ನಾವು ದುಡಿಯುವುದೇ ಹೊಟ್ಟೆಗಾಗಿ, ಅಂಥಾದ್ದರಲ್ಲಿ ಕುಳಿತು ತಿನ್ನುವುದಕ್ಕೇ ಇಲ್ಲಿ ಸಮಯವಿಲ್ಲ..ಸ್ವಾಮಿ..! ಕೆಲವೊಮ್ಮೆ ರಸ್ತೆ ಬದಿಯ ಗಾಡಿಯ ದೋಸೆ, ಇಡ್ಲಿಗಳೇ ಬೆಳಗ್ಗಿನ ಉಪಹಾರವಾಗಿಬಿಡುತ್ತೆ, ಮಧ್ಯಾಹ್ನವೂ ಗಾಡಿಯ ಊಟವೇ ಹೊಟ್ಟೆ ಸೇರುತ್ತದೆ. ಸಂಜೆಯಾದರೆ ಗೋಬಿ, ಎಗ್‍ರೈಸ್‍ಗಳು ನಾಲಿಗೆಗೆ ಸೆಟ್ಟಾಗಿವೆ. ಮೂಲೆ ಮೂಲೆಯಲ್ಲಿರುವ ಧಾರವಾಡ, ದಾವಣಗೆರೆ ಊರಿನ ಹೆಸರಿನ ರೊಟ್ಟಿ ಮನೆಗಳು, ತವರೂರು ಬಿಟ್ಟು ಕೆಲಸಕ್ಕೆ ಬಂದವರ ಹೃದಯ, ಹೊಟ್ಟೆಯನ್ನು ತಂಪಾಗಿಸುತ್ತೆ. ಖಾಸಗಿ ಕಂಪನಿಗಳ ಮುಂದೆ ಸ್ವಿಗ್ಗಿ, ಝೊಮ್ಯಾಟೋಗಳ ಪೆಟ್ಟಿಗೆಯಿಂದ ಬಿಸಿಯಾದ ತಿನಿಸುಗಳು ಹವಾನಿಯಂತ್ರಿತ ಕೊಠಡಿಯೊಳಗೆ ಸೇರಿ ತಣ್ಣಗಾಗಿ ಬಿಡುತ್ತವೆ.
ಬೆಂಗಳೂರಿನಲ್ಲಿ ಸ್ವಂತ ಮನೆ ಇರುವವರಿಗಾದರೋ ಯೋಚನೆಯಿಲ್ಲ. ಬಾಡಿಗೆ ಮನೆಯಲ್ಲಿರುವವರಿಗೆ ಪ್ರತಿವರ್ಷವೂ ಹೆಚ್ಚಾಗುವ ಬಾಡಿಗೆಯ ಭೀತಿ ಹೀಗಾಗಿ, ಬಾಡಿಗೆ ಮನೆಯೇ ನೆಚ್ಚಿಕೊಂಡಿರುವವರಿಗೆ, ಬೆಂಗಳೂರಿನ ಪ್ರತಿ ಏರಿಯಾಗಳೂ 20-30 ವರ್ಷಗಳಲ್ಲಿ ಪರಿಚಿತವಾಗಿಬಿಟ್ಟಿರುತ್ತದೆ. ಸ್ವಂತ ಮನೆಯ ಕನಸು ಬೆಚ್ಚಗೆ ಹೊದ್ದು ಮಲಗಿರುತ್ತದೆ. ಇನ್ನು ಬೆಂದಕಾಳೂರಿನಲ್ಲೇ ಪೂರ್ವಜರ ಕಾಲದಿಂದಲೂ ಇದ್ದ ಒಂದೆಕರೆ ಜಾಗದಲ್ಲಿ ಪುಟ್ಟ ಜೋಪಡಿ ಮಾಡಿಕೊಂಡು ಇನ್ನೂ ಬಡತನದಲ್ಲೇ ಬೇಯುತ್ತಿರುವ, ಬಲಿಷ್ಠವಾಗಿ ಸೂರು ಕಟ್ಟಿಕೊಳ್ಳಲಾಗದ ಎಷ್ಟೋ ಕುಟುಂಬಗಳಿವೆ.
ಇನ್ನು ಇಲ್ಲಿನ ಖಾಸಗಿ ಆಸ್ಪತ್ರೆಗಳಂತೂ ಯಮನಿಗೇ ಪ್ರೀತಿ. ಪರ್ಸ್ ಹಿಡಿದು ಹೋದರೆ ಖಾಲಿ ಪರ್ಸ್‍ನೊಂದಿಗೆ ಜೊತೆಯಾಗಿ ಇನ್ನೊಂದು ರೋಗವೂ ಬೆನ್ನುಹಿಡಿಯುತ್ತದೆ. ಆಶ್ಚರ್ಯವೆಂದರೆ ಇತ್ತೀಚೆಗೆ ನಮ್ಮ ಮನೆಯವರು ಡೆಂಟಲ್ ಕ್ಲಿನಿಕ್‍ಗೆ ಹೋದಾಗ ಅಲ್ಲಿ ಒಂದು ಸಣ್ಣ ಚಿಕಿತ್ಸೆಗಾಗಿ ಕೇಳಿದ ಮೊತ್ತ 12ಸಾವಿರ, ಅದೂ ಕೇಳಿ ಲೋನ್‍ಗಾಗಿ ಫೈನಾನ್ಸ್‍ನವರೂ ಪಕ್ಕದಲ್ಲೇ ಕುಳಿತಿದ್ದಾರೆ. ಆಸ್ಪತ್ರೆಯಲ್ಲೇ ಲೋನ್ ಕೊಡುವ ಫೈನಾನ್ಸ್‍ಗಳಿದ್ದಾವೆ ಇಲ್ಲಿ..! ಇದರ ನಡುವೆ ಎಲ್ಲೋ ಒಂದು ಕಡೆ ಹೃದಯವಂತ ಡಾಕ್ಟರುಗಳು ಕೂಡಾ ಇದ್ದಾರೆ, ಹುಡುಕಬೇಕಷ್ಟೇ..!
ಸಂಜೆಯಾದರೆ ಒಂದಿಷ್ಟು ಕೆಲಸದ ಒತ್ತಡಗಳನ್ನು ತಲೆಗಂಟಿಸಿಕೊಂಡು ಮರಳುವ ಜೋಲುಮುಖಗಳು, ಹಸಿರು ಬಸ್ಸಿನ ಕಿಟಕಿಗೆ ಎರಡೂ ಇಯರ್‍ಫೋನ್ ಸಿಕ್ಕಿಸಿಕೊಂಡು ಒರಗಿರುತ್ತದೆ. ಬೆವರುಮಿಶ್ರಿತ ವಾಸನೆಯೊಂದು ಬಸ್ಸಿನಲ್ಲಿ ಹರಡಿಕೊಂಡಿರುತ್ತದೆ. ಬಸ್ಸಿನ ಸರಳಿಗೆ ಕೈ ಇರಿಸಿ ಜೋತಾಡುವ ಮುಖದಲ್ಲಿ ನಾಳೆಯ ಬಗ್ಗೆ ಯೋಚನೆ ಮೂಡುತ್ತದೆ. ಇನ್ನು ಸ್ವಂತ ಗಾಡಿ ಇರುವವರಾದರೆ ಸಂಜೆಯ ಟ್ರಾಫಿಕ್ಕಿನ ಭೀತಿ ಸಂಜೆಯಾಗುತ್ತಿದ್ದಂತೆ ಆವರಿಸುತ್ತದೆ. ಸಾಗುವ ದಾರಿಯಲ್ಲಿ ಹಸಿರು ಸಿಗ್ನಲ್‍ಗೇ ಕಣ್ಣುಗಳು ಕಾತರಿಸುತ್ತದೆ.. ಸಾಗುವ ದಾರಿಯಲ್ಲಿ ಆಗಾಗ ನಮ್ಮೂರು ನೆನಪಾಗುತ್ತದೆ.. ಹೋಗಿಬಿಡಲೇ ಎನ್ನುತ್ತದೆ ಮನಸು ಆಗೋದಿಲ್ಲವೆನ್ನುತ್ತದೆ..ಈ ಬೆಂಗಳೂರು ಬಿಟ್ಟರೂ ಬಿಡಲಾಗದಂತಹ ಸೆಳೆತ. ಈ ಬೆಂಗಳೂರೇ ಹೀಗೆ ಟ್ರಾಫಿಕ್ಕು ಸಿಗ್ನಲ್‍ನಲ್ಲಿ ಪ್ಲಾಸ್ಟಿಕ್‍ನೊಳಗೆ ಅವಚಿ ಕುಳಿತ ಕೆಂಗುಲಾಬಿ ಮಾರುವ ಹುಡುಗಿಯ ಅಸಹನೆಯಂತೆ.. ಕಣ್ಣಲ್ಲಿನ ನಿರಾಸೆಯ ಹಿಂದೆ ಆಶಾಭಾವನೆಯೊಂದು ಅಡಗಿ ಕುಳಿತಂತೆ.. ಬೆಂದಕಾಳೂರಿನ ಒಡಲಲ್ಲೊ ಬೆಂದು ಹೋದ ಕನಸುಗಳಿವೆ. ಅರಳಿದ ಕನಸುಗಳಿದೆ.. ಕುಸಿದು ಹೋದ ಮನಸುಗಳಿದೆ.. ಬೇಸತ್ತ ಹಿರಿಯ ಹೃದಯಗಳಿವೆ..
Namma tulunade best marre
ReplyDeleteಹಾ..ಅಂದ್..
DeleteCasino City in East Ridge, SC Jobs - DrmCD
ReplyDeleteView 창원 출장샵 Jobs, Reviews, & Employment in Casino City, MD from DrmCD. View the Latest 세종특별자치 출장마사지 on jobs 의왕 출장안마 at Casino 정읍 출장마사지 City 부천 출장샵 in East Ridge, SC.