Wednesday 21 November 2018

ಮನದಲ್ಲೊಂದು ಧಿಗಿಣ..


ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸುಮ್ಮನೇ ಮೊಬೈಲ್‍ಗೆ ಕುಟ್ಟುತ್ತಾ ಕುಳಿತಿದ್ದಾಗ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ  ಯಕ್ಷಗಾನದ ಚೆಂಡೆಯ ಕಿವಿಗೆ ಸದ್ದು ಅಪ್ಪಳಿಸಿತ್ತು.. ಅದೇ ಅಳುವ ಸೀರಿಯಲ್, ನಾಟಕೀಯ ರಿಯಾಲಿಟಿ ಷೋಗಳನ್ನು ನೋಡಿ ಬೇಜಾರಾಗುವ ನನ್ನಪ್ಪನಿಗೆ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಸಮಯದ ಮಿತಿಯಿಲ್ಲದೇ ಪ್ರಸಾರ ಮಾಡುವ ಯಕ್ಷಗಾನವನ್ನು ನೋಡುವುದೆಂದರೆ ತುಂಬಾ ಇಷ್ಟ.. ನಾನು ಅಪ್ಪನೊಂದಿಗೆ ಕುಳಿತು ನೋಡುತ್ತಿದ್ದೆ..


ನನ್ನ ಅದ್ಭುತವಾದ ಬಾಲ್ಯವನ್ನು ಹೆಚ್ಚಾಗಿ ಕಳೆದಿದ್ದೇ ಅಜ್ಜಿಮನೆಯಲ್ಲಿ. ಆಗೆಲ್ಲಾ ಕುಟುಂಬ ಸಮೇತ ತೆಂಗಿನ ಗರಿಯ ಸೂಟೆ ಮಾಡಿ ಬೆಂಕಿ ಹತ್ತಿಸಿಕೊಂಡು ಗದ್ದೆಯ ಬದುವಿನಲ್ಲಿ ಸೂಟೆ ಗಾಳಿಯಲ್ಲಿ ಹಾರಿಸಿಕೊಂಡು ನಾಯಕನಂತೆ ಹಿರಿಯರೊಬ್ಬರು ನಡೆದರೆ ಅವರ ಹಿಂದೆ ಬ್ಯಾಟರಿ ಹಿಡಿದುಕೊಂಡು ಬೆಳದಿಂಗಳಿಗೆ ಸ್ಪರ್ಧೆಯನ್ನೊಡ್ಡುತ್ತಾ ಹೆಜ್ಜೆ ಹಾಕುತ್ತಿದ್ದೆವು.  ತಣ್ಣನೆಯ ಗಾಳಿ ಮೈಗವಚಿಕೊಂಡು, ಎದೆಯಲ್ಲೊಂದು ಕತ್ತಲಿನ ಭಯ ಆವರಿಸುತ್ತಿತ್ತು. ಕಿವಿಗೆ ಅಲ್ಲೆಲ್ಲೋ ಚೆಂಡೆಯ ಶಬ್ದ ಕೇಳಿಸಿದರೆ ಸಾಕು..ಹೋ ಯಕ್ಷಗಾನ ಶುರುವಾಗಿಬಿಟ್ಟಿದೆ, ನೀವೆಲ್ಲಾ ಹೊರಡುವಾಗ ತಡ ಮಾಡಿದ್ರಿ ಎನ್ನುವ ಅಸಹನೆಯೊಂದು ಹಿರಿಯರಲ್ಲಿ ಶುರುವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದುದು ನೆನಪಿದೆ. ಬಹುಶಃ ಈ ಉತ್ಸಾಹ ಈಗೀಗ ಈಗಿನ ಜನರೇಷನ್‍ನಲ್ಲಿ ಕಾಣೆಯಾಗಿಬಿಟ್ಟಿದೆ.
ಹಿಂದೆ ದೊಡ್ಡ ಮೈದಾನದ ಮಧ್ಯೆ, ಇಲ್ಲದಿದ್ದರೆ ಗದ್ದೆಯ ಮಧ್ಯೆ ನಾಲ್ಕು ಕಂಬಗಳ ರಂಗಸ್ಥಳದಲ್ಲಿ ಚೆಂಡೆಯ ಸದ್ದಿಗೆ ಯಕ್ಷಪಾತ್ರಗಳು ಅಬ್ಬರಿಸಿ ಕುಣಿಯುತ್ತಿದ್ದರೆ ರಂಗಸ್ಥಳವೇ ನಡುಗುತ್ತಿತ್ತು. ಈಗ ಅವೆಲ್ಲಿದೆ ಬಿಡಿ.. ನಗರಗಳಲ್ಲಿ ಹವಾನಿಯಂತ್ರಿಯ ಸಂಭಾಗಣದ ಸಿಮೆಂಟು ವೇದಿಕೆಯ ಮೇಲೆ ಜಗಮಗಿಸುವ ಬೆಳಕಿನಲ್ಲಿ ರಂಗಸ್ಥಳವನ್ನು ಮಾಡಿರುತ್ತಾರೆ. ಆಸಕ್ತ ಯಕ್ಷಗಾನ ಪ್ರಿಯರು ಬೆರಳೆಣಿಕೆಯವರಾದರೆ ಆಮಂತ್ರಿತರ ಮುಖ ಮೊಬೈಲ್‍ನಲ್ಲಿ ತೆರೆದಿರುವ ಫೇಸ್‍ಬುಕ್, ವಾಟ್ಸ್ಯಾಪ್ ಪೇಜ್‍ನ ಬೆಳಕಿನಲ್ಲಿ ಹೊಳೆಯುತ್ತಿರುತ್ತದೆ. ನಮ್ಮಂತಹ ಕರಾವಳಿಯ ಯಕ್ಷಗಾನ ಪ್ರಿಯರಿಗೆ ಆ ಬೆಳಕು ಕೆಲವೊಮ್ಮೆ ಎದೆಗೆ ಚುಚ್ಚಿದಂತಾಗುತ್ತದೆ.
ನನಗೆ ಯಕ್ಷಗಾನದಲ್ಲಿ ತುಂಬಾ ಇಷ್ಟವಾಗುವ ಯಕ್ಷಗಾನದ ಕಥೆಯೆಂದರೆ ದೇವಿ ಮಹಾತ್ಮೆ. ರಾತ್ರಿ ಎಂಟು ಒಂಭತ್ತು ಗಂಟೆಗೆ ಶುರುವಾದ ಯಕ್ಷಗಾನವನ್ನು ತೂಕಡಿಸುತ್ತಲೇ ನೋಡುತ್ತೇವೆ. ತೂಕಡಿಸಿದರೂ ಚೆಂಡೆಯ ಸದ್ದು ಬಡಿದೆಬ್ಬಿಸುತ್ತವೆ. ಇನ್ನೂ ಭಾಗವತರ ಬಗ್ಗೆ ಎಷ್ಟು ವಿಚಾರ ಹೇಳಿದರೂ ಸಾಲದು.. ಬಾಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಲಯಬದ್ಧವಾಗಿ ಗಣೇಶ ಸ್ತುತಿಯಿಂದ ಯಕ್ಷಗಾನವನ್ನು ಪ್ರಾರಂಭಿಸಿದರೆ ಅವರ ಬಾಯಿಂದ ಹೊರಟ ಶುಶ್ರಾವ್ಯಭರಿತ ಆವೇಶದ ನಾದ ಇಡೀ ಊರೆಲ್ಲಾ ಪಸರಿಸಿರುತ್ತದೆ.. ಯಕ್ಷಗಾನದಲ್ಲಿ ಕೊನೆಯವರೆಗೂ ಕಾಯುವ ಘಟ್ಟವೆಂದರೆ ಮಹಿಷಾಸುರ ಪ್ರವೇಶ.. ಹೋ.. ಎಂದು ಆವೇಶದಿಂದ ಅಬ್ಬರಿಸುತ್ತಾ ಕೈಯಲ್ಲಿ ಹಿಡಿವ ದೊಂದಿಗೆ ಭಸ್ಮ ಚೆಲ್ಲಿದರೆ ಹಾರುವ ಬೆಂಕಿ ಎದೆಯಲ್ಲಿ ಭಯವನ್ನು ಹುಟ್ಟಿಸುತ್ತದೆ. ನಿದ್ದೆಯನ್ನು ಹೊಡೆದೋಡಿಸುತ್ತದೆ. ಕೆಳಗೆ ಸಾಲಾಗಿ ಕುಳಿತಿರುವ ಮಕ್ಕಳತ್ತ ಕೆಂಗಣ್ಣು ಬಿಟ್ಟರೆ ಸಾಕು ಮಕ್ಕಳೋ ಚೆಲ್ಲಾಪಿಲ್ಲಿ, ಅಮ್ಮಂದಿರ, ಅಜ್ಜಿಯಂದಿರ ತೋಳತೆಕ್ಕೆಯಲ್ಲಿ ಬಂದು ಪಿಳಿಪಿಳಿ ಕಣ್ಣುಬಿಡುತ್ತದೆ.
ಇನ್ನು ರಂಗಸ್ಥಳದ ಮೇಲೆ ದೇವಿಯ ಪ್ರವೇಶವಾದರೆ ಸಾಕು, ಸಾಕ್ಷಾತ್ ದೇವಿಯೇ ಅವತರಿಸಿದ ಧನ್ಯತಾ ಭಾವ. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಯಕ್ಷಗಾನವೆಂದರೆ ಭಕ್ತಿ ಕೂಡಾ. ಇತ್ತೀಚೆಗೆ ಎಲ್ಲೋ ನಗರದಲ್ಲಿ ಒಂದು ಕಡೆ ಮದುವೆಯ ಮನೆಯಲ್ಲಿ ತಮ್ಮ ಶ್ರೀಮಂತಿಕೆ ಪ್ರದರ್ಶಿಸಿಕೊಳ್ಳಲು, ಮುಗ್ಧ ವ್ಯಕ್ತಿಗಳಿಬ್ಬರಿಗೆ ಯಕ್ಷಗಾನದ ವೇಷಭೂಷಣ ಹಾಕಿಸಿ ನಿಲ್ಲಿಸಿದುದು ಕರಾವಳಿಗರ ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಖ್ಯಾತ ಖಾಸಗಿ ವಾಹಿನಿಯೊಂದು ಯಕ್ಷಗಾನದ ಹೆಜ್ಜೆಗೆ ಯಾವುದೋ ಹಿಂದಿ ಸಂಗೀತವನ್ನು ಹಾಕಿಸಿ ಪುಟ್ಟ ಮಕ್ಕಳಿಗೆ ವೇಷ ಹಾಕಿಸಿ ಕುಣಿಸಿದ್ದುದ್ದು, ಯಕ್ಷಪ್ರೇಮಿಗಳನ್ನು ಕೆರಳಿಸಿತ್ತು. ತದನಂತರ ವಾಹಿನಿಯೂ ಕ್ಷಮೆ ಕೋರಿದಂತಹ ಘಟನೆ ನಡೆದಿತ್ತು. ಕರಾವಳಿಗರಿಗೆ ಯಕ್ಷಗಾನ ಕಲೆ ಮಾತ್ರವಲ್ಲ, ಆರಾಧನೆಯೂ ಕೂಡಾ, ಹರಕೆಯ ರೂಪದಲ್ಲೂ ಯಕ್ಷಗಾನ ಬಯಲಾಟವನ್ನು ಆಡಿಸುವವರೂ ಇದ್ದಾರೆ.
ಹಿಂದೆಲ್ಲಾ ಯಕ್ಷಗಾನಕ್ಕೆ ಹೋಗುವುದೆಂದರೆ ಮನೆಯವರಿಗೆಲ್ಲಾ ಸಂಭ್ರಮ, ಒಟ್ಟಿಗೆ ಸಿನಿಮಾ ನೋಡಲು ಹೋಗದಿದ್ದರೂ, ಯಕ್ಷಗಾನಕ್ಕೆ ಮಾತ್ರ ಇಡೀ ಕುಟುಂಬ ಸಮೇತ ಯಕ್ಷಗಾನ ನಡಯುವ ಸ್ಥಳದಲ್ಲಿ ಹಾಜರ್. ಈಗೀಗ ಮಗಳಿಗೆ ಎಕ್ಸಾಂ, ಮಗನ ಹೋಂವರ್ಕ್ ಆಗಿಲ್ಲ, ನಿದ್ದೆ ಕೆಟ್ಟರೆ ನಾಳೆ ಕೆಲಸಕ್ಕೆ ಹೋಗುವುದಕ್ಕಾಗಲ್ಲ.. ಈ ರೀತಿಯ ನೆಪಗಳು ಮನೆಯಲ್ಲೇ ಉಳಿಯುವಂತೆ ಮಾಡುತ್ತದೆ. ಯಾರಾದರೂ ಹೋಗುವವರಿದ್ದರೆ ಸಾಯುವ ಕಾಲದಲ್ಲಿ ಒಂದು ಯಕ್ಷಗಾನ ಆದರೂ ನೋಡಿದ ಹಾಗಾಗುತ್ತಿತ್ತು ಎನ್ನುವ ದನಿಯೊಂದು ಮೂಲೆಯಲ್ಲಿ ಕುಳಿತ ಅಜ್ಜ/ಅಜ್ಜಿಯ ಬಾಯಿಂದ ಕೇಳಿ ಬರುತ್ತದೆ.
ಇನ್ನೊಂದು ಏನೆಂದರೆ ನಮ್ಮೂರ ಯಕ್ಷಗಾನ ಚುರುಮುರಿಗಳ ಸ್ಟಾಲ್‍ಗಳಿಲ್ಲದೇ ಕಂಪ್ಲೀಟೇ ಆಗಲ್ಲ. ಯಕ್ಷಾಗಾನದ ಅಂಗಣದೊಳಗೆ ಚೆಂಡೆ, ಮದ್ದಳೆಯ ಸದ್ದಾದರೆ ಸ್ವಲ್ಪ ಆಚೆಗೆ ಬಂದರೆ ಫೈಬರ್ ಟೇಬಲ್ ಮೇಲೆ ಖಾರ, ಮಾವಿನಕಾಯಿ, ಕ್ಯಾರೆಟ್ ತುರಿ, ಮಂಡಕ್ಕಿಯನ್ನು ಸ್ಟೀಲ್ ಪಾತ್ರೆಯೊಳಗೆ ಹಾಕಿ ಸೌಟಿನಿಂದ ಕಲಸುವ ಟಣ್ ಟಣ್ ಸದ್ದು ಇನ್ನೂ ಆತ್ಮೀಯ.. ಚುರುಮುರಿಯ ಘಮ ಮೂಗಿನ ಹೊಳ್ಳೆಯನ್ನು  ಪ್ರವೇಶಿಸಿ, ಚುರುಮುರಿಗಾಗಿ ಅಜ್ಜನೋ, ಮಾವನನ್ನೋ ಪೀಡಿಸುತ್ತಿದ್ದೆವು.(ಈಗೀಗ ಚುರುಮುರಿ ಸ್ಟಾಲ್‍ನ ಟೇಬಲ್‍ನ ಬದಿಯಲ್ಲಿ ಸಿಗರೇಟು, ಪಾನ್ ಮಸಾಲ ಪಾಕೀಟುಗಳೂ ತನ್ನ ಸ್ಥಾನವನ್ನಲಂಕರಿಸುತ್ತಿದೆ) ಇನ್ನೊಂದು ಬಾಯಲ್ಲಿ ನೀರೂರಿಸುವ ಸುಕುನಪ್ಪ, ನೆಯ್ಯಪ್ಪ.. (ಇದರ ಟೇಸ್ಟ್‍ಗಾಗಿ ಇನ್ನೂ ಹುಡುಕುತ್ತಿದ್ದೇನೆ ಅಂದಿನ ರುಚಿ ಮಾತ್ರ ಸಿಕ್ಕಿಲ್ಲ).. ನಮ್ಮೂರಲ್ಲಿ ಎಲ್ಲೇ ಯಕ್ಷಗಾನವಾದರೂ ಸುಕುನಪ್ಪ ಮಾರುವ ಅಜ್ಜಿಯೊಬ್ಬರು ಹಾಜರಾಗುತ್ತಿದ್ದರು. ಮಧ್ಯದಲ್ಲಿ ಸೀಮೆಎಣ್ಣೆಯ ಚಿಮಣಿ ದೀಪ ಸುತ್ತಲೂ ಸುಕುನಪ್ಪ, ನೆಯ್ಯಪ್ಪಗಳನ್ನು ಅಗಲವಾದ ಬುಟ್ಟಿಯಲ್ಲಿ ಜೋಡಿಸಿಟ್ಟಿರುತ್ತಿದ್ದುದು ಇನ್ನೂ ನೆನಪಿದೆ. ಅವರು ಮಾರುತ್ತಿದ್ದ ಸುಕುನಪ್ಪ, ನೆಯ್ಯಪ್ಪಗಳ ಪರಿಮಳದೊಂದಿಗೆ ಸೀಮೆಎಣ್ಣೆಯ ಘಾಟೂ ಇರುತ್ತಿತ್ತು. ಆಕೆಯೂ ಈಗ ಕಾಣೆ.. ಈಗೀಗ ವಿವಿಧ ಐಸ್‍ಕ್ರೀಮ್‍ಗಳ ಗಾಡಿಗಳೂ, ಅದರಲ್ಲಿ ನೇತಾಡುತ್ತಾ, ಐಸ್‍ಕ್ರೀಂ ಮಾರುವವರಷ್ಟೇ ಕಾಣಸಿಗುತ್ತಾರೆ. ಈಗಿನ ಮಕ್ಕಳಿಗೆ ಸುಕುನಪ್ಪಕ್ಕಿಂತ, ಕೋನ್, ಚೋಕೋಬಾರ್ ಐಸ್‍ಕ್ರೀಂಗಳೇ ಬೇಗ ಕಾಣಿಸುತ್ತವೆ.
ಮಹಿಷಾಸುರನ ಅಂತ್ಯವಾಗುವುದರೊಂದಿಗೆ ತ್ರಿಮೂರ್ತಿಗಳು, ದೇವತೆಗಳು ಪ್ರತ್ಯಕ್ಷವಾಗಿ ಮಂಗಳಹಾಡುವುದರೊಂದಿಗೆ ಅಂದಿನ ಯಕ್ಷಗಾನಕ್ಕೆ ತೆರೆಬೀಳುತ್ತವೆ. ಅಲ್ಲಿವರೆಗೂ ಒಂದೇ ಕಡೆ ಕುಳಿತಿದ್ದ ದೇಹ ಎದ್ದು ನಿಂತು ನಟಿಗೆ ಮುರಿಯುತ್ತದೆ.. ಪೂರ್ವದಲ್ಲಿ ಸೂರ್ಯ ಉದಯಿಸುವ ಸುದ್ದಿಗಾಗಿ ಕೆಂಬಣ್ಣದ ಕಿರಣಗಳು ಎದ್ದು ಧಾವಿಸುತ್ತದೆ. ಮುಂಜಾನೆಯ ಮಂಜು ದಟ್ಟವಾಗಿ ಆವರಿಸಿರುತ್ತದೆ. ಬೆಳೆದ ಹಸಿರು ಪೈರುಗಳ ತುಂಬೆಲ್ಲಾ ಮಂಜಿನ ಮುತ್ತಿನ ಶೃಂಗಾರ.. ಅದನ್ನು ಬರಿಗಾಲಲ್ಲಿ ಮೆಲ್ಲನೆ ಸ್ಪರ್ಶಿಸಿದರೆ ತಣ್ಣನೆಯ ಮಿಂಚೊಂದು ನೆತ್ತಿಗೇರುತ್ತದೆ. ಅಂಗೈಯಲ್ಲಿ ರಾತ್ರಿ ಮೆದ್ದ ಚುರುಮುರಿಯ ಘಮ ಅಂಟಿಕೊಂಡಿರುತ್ತದೆ. ಅಜ್ಜಿಯ ಕೈಯಲ್ಲೆರಡು ಮಂಡಕ್ಕಿಯ ಪ್ಯಾಕೇಟುಗಳು ಭದ್ರವಾಗಿ ಕುಳಿತಿರುತ್ತದೆ. ಅಂದಿನ ಬೆಳಗ್ಗಿನ ಬಿಸಿಬಿಸಿ ಚಹಾಗೆ ಕೊಬ್ಬರಿ, ಸಕ್ಕರೆ, ಈರುಳ್ಳಿ ಬೆರೆಸಿ ಮಾಡುವ ಮಂಡಕ್ಕಿ ಒಗ್ಗರಣೆ ಗಂಟಲೊಳಗೆ ಇಳಿಯುತ್ತಿದ್ದರೆ, ಮನೆತುಂಬೆಲ್ಲಾ ಯಕ್ಷಗಾನ ಪಾತ್ರಗಳದ್ದೇ ಮಾತುಕತೆ.
ರಾತ್ರಿಯೆಲ್ಲಾ ನಿದ್ದೆಕೆಟ್ಟು ಯಕ್ಷಗಾನ ನೋಡಿ, ಹಗಲೆಲ್ಲಾ ಗಡದ್ದಾಗಿ ನಿದ್ದೆ ಹೊಡೆಯುವ ಹಿರಿಯರ ಕಣ್ತಪ್ಪಿಸಿ, ಚಿಕ್ಕಮ್ಮನ ಕಾಡಿಗೆ ಮುಖದ ತುಂಬಾ ಹಚ್ಚಿಕೊಂಡು, ಅಕ್ಕನ ಚೂಡಿದಾರದ ಶಾಲು ಹೊದೆದುಕೊಂಡು, ತೂತು ಕೊಡಪಾನದ ಮೇಲೆ ಕೋಲು ಹಿಡಿದು ಚೆಂಡೆಗೂ ಮೀರಿ ಬಡಿಯುವ ಚಿಲ್ಟಾರಿಗಳ ಸದ್ದು ಕೇಳಿ.. ಮಲಗಿದ್ದವರೂ ಎದ್ದು ಬರುವುದುಂಟು..ಒಮ್ಮೊಮ್ಮೆ..
ನಾವೆಲ್ಲಾ ಪುರಾಣ ಕಥೆಗಳನ್ನು ಅರ್ಧಕ್ಕರ್ಧ ತಿಳಿದುಕೊಂಡಿದ್ದು ಈ ಯಕ್ಷಗಾನಗಳನ್ನು ನೋಡಿಯೇ, ಶ್ವೇತಕುಮಾರನ ಚರಿತ್ರೆ, ಅಶ್ವಮೇಧಯಾಗ, ಶಿಶುಪಾಲ ವಧೆ ಹೀಗೆ ಪುರಾಣ ಕಥೆಗಳನ್ನು ವಿವರವಾಗಿ ವಿವರಿಸಿದ್ದು ಯಕ್ಷಗಾನಗಳೇ.. ಈಗೆಲ್ಲಾ ಮಕ್ಕಳು ಕಾರ್ಟೂನ್ ಕಥೆ ಕೇಳುತ್ತಾರೆ ಹೊರತು, ಯಕ್ಷಗಾನದ ಕಥೆಗಳನ್ನಲ್ಲ..
ಈಗೀಗ ಬೆಂಗಳೂರಲ್ಲೂ ಕರಾವಳಿಯ ಯಕ್ಷಗಾನ ಪ್ರೇಮಿಗಳು, ಯಕ್ಷಗಾನ ಪ್ರಸಂಗವನ್ನು ಆಡಿಸುತ್ತಾರೆ. ಮಹಾನಗರದ ಎಲ್ಲೋ ಮೂಲೆಯಲ್ಲಿ ನಡೆಯುವ ಯಕ್ಷಗಾನ ನೋಡಲು ಹೊರಟರೆ ಟ್ರಾಫಿಕ್ಕು, ಕಿವಿ ಸೀಳುವ ಹಾರನ್‍ಗಳ ಮಧ್ಯೆ ಯಕ್ಷಗಾನ ನೋಡಲು ಹೋಗುವಷ್ಟರಲ್ಲಿ ತಾಳ್ಮೆಯೂ ಕೆಟ್ಟು ಹೋಗಿರುತ್ತದೆ. ಅಷ್ಟರಲ್ಲಿ ಅರ್ಧ ಪ್ರಸಂಗವೇ ನಡೆದು ಹೋಗಿರುತ್ತದೆ. ಏನಿದ್ದರೂ ನಮ್ಮ ಬಾಲ್ಯಕಾಲದಲ್ಲಿ ನಮ್ಮೂರಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳೇ ಅಚ್ಚಳಿಯದೇ ನೆನಪುಗಳ ಪುಟದಲ್ಲಿ ಮಾಸದೇ ಉಳಿಯುತ್ತದೆ..

3 comments:

  1. Nanna manasige hithavayithu nimma amnada maathu

    ReplyDelete
  2. Nanna manasige hithavayithu nimma amnada maathu

    ReplyDelete

ಪಾಸ್‌ವರ್ಡ್‌ ಮರೆತ್ಹೋಗೋ ಗೀಳು...? ಗೋಳೋ..? ಸಮಸ್ಯೆನಾ.. ಗೊತ್ತಿಲ್ಲ..!

    ಕೆ ಲವು ತಿಂಗಳ ಹಿಂದೆ ಫೋನ್‌ ಬಿದ್ದು ಡಿಸ್‌ಪ್ಲೇ ಹೋಗಿ, ಇರೋ ಬರೋ ನಂಬರುಗಳು ಕಳೆದುಕೊಂಡಿದ್ದಾಯ್ತು. ಅದರ ಜೊತೆಗೆ ನೋಟ್‌ನಲ್ಲಿ ಟೈಪಿಸಿಕೊಂಡಿದ್ದ ಇ-ಮೇಲ್, ಫೇಸ್‌ಬ...